ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಶಿಕ್ಷಣ ನೀಡಿ: ಶಶಿ ಸುಬ್ರಮಣಿ
ವೈದ್ಯಕೀಯ ತಪಾಸಣಾ ಶಿಬಿರ

ವೀರಾಜಪೇಟೆ, ಆ.3: ವಿಶೇಷ ಅಗತ್ಯತೆಯುಳ್ಳ ಮಕ್ಕಳು ಉತ್ತಮ ಸಾಧನೆ ಮಾಡುತ್ತಿದ್ದು ಅವರಿಗೆ ಪೋಷಕರು ತಪ್ಪದೇ ಶಿಕ್ಷಣ ನೀಡಿ ಪ್ರೋತ್ಸಾಹಿಸಬೇಕು ಎಂದು ಜಿಲ್ಲಾ ಪಂಚಾಯತ್ ಸದಸ್ಯ ಮುಕೊಂಡ ಶಶಿ ಸುಬ್ರಮಣಿ ಹೇಳಿದ್ದಾರೆ.
ಕೊಡಗು ಜಿಲ್ಲಾ ಪಂಚಾಯತ್, ಸರ್ವ ಶಿಕ್ಷಣ ಅಭಿಯಾನ-ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 2016ನೆ ಸಾಲಿನ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳ ‘ವಿಶೇಷ ಅಗತ್ಯತೆಯುಳ್ಳ ಮಕ್ಕಳ ವೈದ್ಯಕೀಯ ತಪಾಸಣಾ ಶಿಬಿರ’ದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ವಿಶೇಷ ಅಗತ್ಯತೆಯುಳ್ಳ ಮಕ್ಕಳನ್ನು ಪ್ರತಿಯೊಬ್ಬರು ಪ್ರೀತಿಯಿಂದ ಕಾಣುವಂತಾಗಬೇಕು. ಎಂದರಲ್ಲದೆ, ವೀರಾಜಪೇಟೆ ಪಟ್ಟಣದಲ್ಲಿ ರಸ್ತೆ ಬದಿ ಕಸ ಎಸೆಯದಂತೆ ಮುಖ್ಯ ರಸ್ತೆ ಬದಿಯಲ್ಲಿ ಚಿಕ್ಕ ಕಸದ ತೊಟ್ಟಿಗಳನ್ನು ಇಡುವಂತೆ ಪಪಂ ಅಧ್ಯಕ್ಷರಿಗೆ ಶಶಿ ಸುಬ್ರಮಣಿ ಮನವಿ ಮಾಡಿದರು.
ಸರಕಾರಿ ಅಥವಾ ಖಾಸಗಿ ಶಾಲೆಗಳೆಂದು ಭೇದಭಾವವಿಲ್ಲದೆ ವಿದ್ಯಾರ್ಥಿಗಳು ಸ್ವಚ್ಛತೆಯನ್ನು ಕಾಪಾಡಬೇಕು. ಸರಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿದಂತವರು ಉನ್ನತ ಹುದ್ದೆಯಲ್ಲಿದ್ದಾರೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪಂಚಾಯತ್ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಮಾತನಾಡಿ, ವಿಶೇಷ ಅಗತ್ಯತೆವುಳ್ಳ ಮಕ್ಕಳು ಇತರ ಮಕ್ಕಳಿಗಿಂತ ಬುದ್ಧಿವಂತರು, ಧೈರ್ಯ ಮತ್ತು ಛಲದಿಂದ ಸಾಧನೆ ಮಾಡಬೇಕಾಗಿದೆ ಎಂದರು.
ಜಿಲ್ಲಾ ಪಂಚಾಯತ್‌ನಿಂದ ವಿಕಲಚೇತನ ಮಕ್ಕಳಿಗಾಗಿ ಅನುದಾನವನ್ನು ನೀಡಲು ಸಭೆಯಲ್ಲಿ ಮಾತನಾಡುವುದಾಗಿ ಹೇಳಿದ ಅವರು, ಗ್ರಾಮೀಣ ಪ್ರದೇಶದ ಮಕ್ಕಳ ಶಿಕ್ಷಣಕ್ಕಾಗಿ ಶಾಲೆ ಹಾಗೂ ಬಸ್‌ಗಳ ವ್ಯವಸ್ಥೆಗಾಗಿ ಹಿಂದೆ ನಾವು ಹೋರಾಟ ಮಾಡಿದ್ದು, ಮುಂದೆಯು ವಿಕಲಚೇತನ ಮಕ್ಕಳಿಗಾಗಿ ಸಹಾಯ ನೀಡಲಾಗುವುದು ಎಂದರು.
ತಾಪಂ ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಶೇಷ ಅಗತ್ಯತೆವುಳ್ಳ ಮಕ್ಕಳು ಹೆಚ್ಚಿನ ವಿದ್ಯೆಕಲಿತು ಮುಂದೆ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆನೀಡಿದರು. ಪಪಂ ಅಧ್ಯಕ್ಷ ಕೂತಂಡ ಸಚಿನ್, ಉಪಾಧ್ಯಕ್ಷೆ ತಸ್ನೀಂ ಅಕ್ತರ್, ಜಿಲ್ಲಾ ಉಪಯೋಜನಾಧಿಕಾರಿ ಸಿ.ಬಿ.ಭಾಗ್ಯಲಕ್ಷ್ಮೀ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಕೆ.ಪಾಂಡ್ಲು ಮಾತನಾಡಿದರು.
ಮಡಿಕೇರಿ ಡಾ. ಕಿರಣ್ ಭಟ್, ಆಸ್ಪತ್ರೆ ಸಮಿತಿಯ ಜೋಕಿಂ ರಾಡ್ರಿಗಸ್, ಬಿ.ಆರ್.ಪಿ.ಉತ್ತಪ್ಪ ಉಪಸ್ಥಿತರಿದ್ದರು. ಶಿಕ್ಷಣಾಧಿಕಾರಿ ಎಚ್.ಕೆ.ಪಾಂಡು ಸ್ವಾಗತಿಸಿ, ಐ.ಇ.ಆರ್.ಟಿ.ಯ ಕೆ.ಎಸ್.ಅಜಿತಾ ನಿರೂಪಿಸಿ, ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಪಿ.ಮಹದೇವ್ ವಂದಿಸಿದರು.







