ತುಳು ಭಾಷಿಕರು ಸಂಘಟಿತರಾಗಬೇಕು: ರತ್ನಾಕರ್ ಶೆಟ್ಟಿ

ವೀರಾಜಪೇಟೆ,ಆ. 3: ಕೊಡಗು ಜಿಲ್ಲೆಯಲ್ಲಿ 2 ಲಕ್ಷದ 20 ಸಾವಿರದಷ್ಟು ತುಳುವರಿದ್ದು, ಇವರನ್ನು ಒಗ್ಗೂಡಿಸುವ ಕೆಲಸ ತುಳುವರ ಜನಪದ ಕೂಟದಿಂದ ನಡೆಯಲಿದೆ ಎಂದು ಕೂಟದ ಸಲಹೆಗಾರರಾದ ಬಿ.ಆರ್. ರತ್ನಾಕರ್ ಶೆಟ್ಟಿ ಹೇಳಿದ್ದಾರೆ.
ತುಳುವರ ಜನಪದ ಕೂಟದ ವತಿಯಿಂದ ಪಟ್ಟಣದ ಪುರಭವನದಲ್ಲಿ ರವಿವಾರ ನಡೆದ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತುಳು ಭಾಷೆಯನ್ನು ಮಾತೃಭಾಷೆಯನ್ನಾಗಿ ಹೊಂದಿದ್ದು, ಅಸಂಘಟಿತರಾಗಿರುವ ಬೇರೆ ಬೇರೆ ಜನಾಂಗದವರು ಜಿಲ್ಲೆಯಲ್ಲಿದ್ದಾರೆ. ಇವರನ್ನೆಲ್ಲ ಸಂಘಟಿಸುವ ಕಾರ್ಯವನ್ನು ಕೂಟ ಕೈಗೆತ್ತಿಕೊಂಡಿದೆ. ಜಿಲ್ಲೆಯಲ್ಲಿ 2 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿರುವ ತುಳುವರು ಭಾಷೆಯ ಬಗ್ಗೆ ಅಭಿಮಾನವನ್ನು ಹೊಂದುವ ಮೂಲಕ ಹೆಚ್ಚಾಗಿ ತಮ್ಮ ಮಾತೃಭಾಷೆಯನ್ನು ಬಳಸಬೇಕು. ತುಳು ಭಾಷಿಕರ ಸಂಸ್ಕೃತಿ ಆಚಾರ-ವಿಚಾರಗಳನ್ನು ಜೀವಂತವಾಗಿ ಮುಂದಿನ ಜನಾಂಗಕ್ಕೆ ತಲುಪಿಸುವ ಕಾರ್ಯವಾಗಬೇಕಿದೆ ಎಂದು ಹೇಳಿದರು.
ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಮೊಗೇರ ಸಂಘದ ಜಿಲ್ಲಾ ಅಧ್ಯಕ್ಷ ರವಿ ಮಾತನಾಡಿ, ಭಾಷೆ ಉಳಿದರೆ ದೇಶ ಉಳಿಯುತ್ತದೆ. ಕೂಟದಿಂದ ತುಳು ಸಂಸ್ಕೃತಿಯನ್ನು ಉಳಿಸುವುದರೊಂದಿಗೆ, ತುಳುವರ ಹಿತಕಾಯುವ ಕೆಲಸವಾಗಬೇಕಿದೆ. ಪ್ರತಿಯೊಂದು ಭಾಷೆಗೂ ಅಕಾಡಮಿಯಿದೆ. ಆದರೆ ತುಳು ಸಾಹಿತ್ಯ ಅಕಾಡಮಿ ಕೇವಲ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗೆ ಸೀಮಿತಗೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ಬಿ.ಡಿ. ನಾರಾಯಣ ರೈ ಮಾತನಾಡಿ, ಜಿಲ್ಲೆಯಲ್ಲಿ ಅಧಿಕ ಸಂಖ್ಯೆಯಲ್ಲಿರುವ ತುಳು ಭಾಷಿಕರು ಸಂಘಟಿತರಾದರೆ ಜಿಲ್ಲೆಯ ಚಿತ್ರಣವೇ ಬದಲಾಗಲಿದೆ ಎಂದರು. ಅಲ್ಲದೆ ತಾಲೂಕು ಸಮಿತಿಗಳ ಕಾರ್ಯವೈಖರಿ ಹಾಗೂ ಸಂಘಟನೆಯ ಬಗ್ಗೆ ಮಹತ್ವದ ಸಲಹೆ ಸೂಚನೆ ನೀಡಿದರು. ಸಭೆಯಲ್ಲಿ ಕೂಟದ ಜಿಲ್ಲಾ ಸಂಚಾಲಕ ಶ್ರೀಧರ್ ನೆಲ್ಲತ್ತಾಯ, ಬಿಲ್ಲವ ಸಂಘದ ಜಿಲ್ಲಾ ಅಧ್ಯಕ್ಷ ಆನಂದ್, ಬಿ.ಜಿ. ರಘುನಾಥ್ ನಾಯಕ್, ಜಯಂತಿ ಶೆಟ್ಟಿ, ರಮೇಶ್ ನೆಲ್ಲಿತ್ತಾಯ, ಬಾಲಕೃಷ್ಣ ರೈ ಮತ್ತಿತರರು ಮಾತನಾಡಿದರು. ವೇದಿಕೆಯಲ್ಲಿ ತುಳುವರ ಜನಪದ ಕೂಟದ ಸ್ಥಾಪಕಾಧ್ಯಕ್ಷ ಶೇಖರ್ ಭಂಡಾರಿ, ವಿಶ್ವಕರ್ಮ ಸಂಘದ ಅಧ್ಯಕ್ಷ ದಾಮೋದರ್ ಆಚಾರ್, ಆದಿ ದ್ರಾವಿಡ ಸಮಾಜದ ಪದಾಧಿಕಾರಿಗಳು ಸೇರಿದಂತೆ ತುಳು ಭಾಷೆಯನ್ನು ಮಾತೃ ಭಾಷೆಯನ್ನಾಗಿ ಹೊಂದಿರುವ 8 ವಿವಿಧ ಜನಾಂಗಗಳ ಜಿಲ್ಲಾ ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಜಿಲ್ಲೆ ಹಾಗೂ ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ ತುಳು ಭಾಷಿಕರು ಕೂಟದ ಸದಸ್ಯತ್ವಕ್ಕೆ ಹೆಸರು ನೋಂದಾಯಿಸಿಕೊಂಡರು.







