ಮಲೆನಾಡಿನಲ್ಲಿ ಮುಂಗಾರು ಕಣ್ಣಾಮುಚ್ಚಾಲೆ!
ಜಲಾಶಯಗಳ ಒಳಹರಿವು ಗಣನೀಯ ಕುಸಿತ
ಶಿವಮೊಗ್ಗ, ಆ. 3: ಮಲೆನಾಡಿನಲ್ಲಿ ಮುಂಗಾರು ಮಳೆಯ ಕಣ್ಣಾಮುಚ್ಚಾಲೆಯಾಟ ಮುಂದುವರಿದಿದೆ. ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳು ಸೇರಿದಂತೆ ಜಿಲ್ಲಾದ್ಯಂತ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗುತ್ತಿಲ್ಲ. ಒಂದೆಡೆ ಪ್ರಮುಖ ಜಲಾಶಯಗಳ ಒಳಹರಿ ವಿನಲ್ಲಿ ಗಣನೀಯ ಪ್ರಮಾಣದ ಕುಸಿತ ಉಂಟಾಗಿದ್ದರೆ, ಮತ್ತೊಂದೆಡೆ ಕೆರೆಕಟ್ಟೆಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದೆ. ಮಳೆ ಕೊರತೆಯ ನೇರ ಪರಿಣಾಮ ಭತ್ತ ಬೆಳೆಗಾರರ ಮೇಲೆ ಬಿದ್ದಿದೆ. ಆಗಸ್ಟ್ ಮಾಹೆಯಾದರೂ ಕೆರೆಕಟ್ಟೆಗಳು ಭರ್ತಿಯಾಗದಿರುವುದು ಹಾಗೂ ಮಳೆ ಕೈಕೊಡುವ ಲಕ್ಷಣ ಗೋಚರವಾಗುತ್ತಿರುವುದರಿಂದ ಭತ್ತ ನಾಟಿ ಮಾಡಲು ರೈತರು ಹಿಂದೇಟು ಹಾಕುತ್ತಿದ್ದು, ಈಗಾಗಲೇ ಭತ್ತ ನಾಟಿ-ಬಿತ್ತನೆ ಮಾಡಿರುವ ರೈತರು ತಲೆ ಮೇಲೆ ಕೈಹೊತ್ತು ಕುಳಿತು ಕೊಳ್ಳುವಂತಾಗಿದೆ. ಕುಸಿತ: ಜುಲೈ ಮೊದಲೆರೆಡು ವಾರಗಳ ಅವಧಿಯಲ್ಲಿ ಜಲಾನಯನ ವ್ಯಾಪ್ತಿಯ ಪ್ರದೇಶಗಳಲ್ಲಿ ಬಿದ್ದ ಧಾರಾಕಾರ ಮಳೆಯಿಂದ ಪ್ರಮುಖ ಜಲಾಶಯಗಳ ಒಳಹರಿವಿನಲ್ಲಿ ಏರಿಕೆ ಕಂಡುಬಂದಿತ್ತು. ಆದರೆ, ಕಳೆದ ಒಂದೆರೆಡು ವಾರಗಳಿಂದ ಮಳೆಯ ಆರ್ಭಟ ಕಡಿಮೆಯಾಗಿರುವುದರಿಂದ ಒಳಹರಿವಿನಲ್ಲಿ ಗಣನೀಯ ಪ್ರಮಾಣದ ಕುಸಿತ ಕಂಡು ಬಂದಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಪ್ರಸ್ತುತ ವರ್ ಡ್ಯಾಂಗಳಲ್ಲಿ ಸಂಗ್ರಹವಾಗಿರುವ ನೀರಿನ ಪ್ರಮಾಣ ಕಡಿಮೆಯಾಗಿದೆ.
ಬುಧವಾರ ಬೆಳಗ್ಗಿನ ಮಾಹಿತಿಯಂತೆ ರಾಜ್ಯದ ಪ್ರಮುಖ ಜಲ ವಿದ್ಯುತ್ ಉತ್ಪಾದನಾ ಕೇಂದ್ರವಾದ ಲಿಂಗನಮಕ್ಕಿ ಜಲಾಶಯದ ಒಳಹರಿ
ವು 2, 158 ಕ್ಯೂಸೆಕ್ಸ್ ಇದೆ. ಹೊರಹರಿವನ್ನು ಸಂಪೂರ್ಣ ವಾಗಿ ಸ್ಥಗಿತಗೊಳಿಸಲಾಗಿದೆ. ಡ್ಯಾಂನ ನೀರಿನ ಮಟ್ಟ 1, 781.10 (ಗರಿಷ್ಠ ಮಟ್ಟ : 1, 819) ಅಡಿಯಿದೆ. ಕಳೆದ ವರ್ಷ ಇದೇ ದಿನ ಡ್ಯಾಂನಲ್ಲಿ 1, 783.30 ಅಡಿ ನೀರು ಸಂಗ್ರಹವಾಗಿತ್ತು. ಶಿವಮೊಗ್ಗ - ದಾ
ವಣಗೆರೆ ಜಿಲ್ಲೆಗಳ ರೈತರ ಜೀವನಾಡಿಯೆಂದೇ ಕರೆಯಲ್ಪಡುವ ಭದ್ರಾ ಜಲಾಶಯದ ಒಳಹರಿವು 3, 563 ಕ್ಯೂಸೆಕ್ಸ್ ಇದ್ದು, 508 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಡ್ಯಾಂನ ವ್ಯಾಪ್ತಿಯಲ್ಲಿ 5.20 ಮಿ.ಮೀ. ಮಳೆಯಾಗಿದೆ. ಡ್ಯಾಂನಲ್ಲಿ 149.80 (ಗರಿಷ್ಠ ಮಟ್ಟ : 186) ಅಡಿ ನೀರು ಸಂಗ್ರಹವಾಗಿದ್ದು, ಕಳೆದ ವರ್ಷ ಇದೇ ದಿನ 164.90 ಅಡಿ ನೀರು ಸಂಗ್ರಹವಾಗಿತ್ತು. ತುಂಗಾ ಜಲಾಶಯ ಈಗಾಗಲೇ ಗರಿಷ್ಠ ಮಟ್ಟವಾದ 588.24 ಅಡಿ ತಲುಪಿದೆ. 7, 556 ಕ್ಯೂಸೆಕ್ಸ್ ಒಳಹರಿವಿದ್ದು, 6, 359 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಮಾಣಿ ಜಲಾಶಯದ ಒಳಹರಿವು 2, 171 ಕ್ಯೂಸೆಕ್ಸ್ ಇದ್ದು, ಹೊರಹರಿವನ್ನು ಸ್ಥಗಿತಗೊಳಿಸಲಾಗಿದೆ. ಡ್ಯಾಂನ ನೀರಿನ ಮಟ್ಟ 580.56 (ಗರಿಷ್ಠ ಮಟ್ಟ : 594.36) ಅಡಿ ನೀರು ಸಂಗ್ರಹವಾಗಿದೆ. ಭತ್ತ ಬೆಳೆಗಾರರಲಿ್ಲ ಆತಂಕ
: ಮುಂಗಾರು ಮಳೆ ಕೈಕೊಟ್ಟಿರುವುದು ಭತ್ತ ಬೆಳೆಗಾರರಲ್ಲಿ ಆತಂಕ ಉಂಟು ಮಾಡಿದೆ. ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಭತ್ತ ನಾಟಿ, ಬಿತ್ತನೆ ಕಾರ್ಯ ನಡೆದಿಲ್ಲ. ಮಳೆಯ ಕಣ್ಣಾಮುಚ್ಚಾಲೆಯಾಟದ ಹಿನ್ನೆಲೆಯಲ್ಲಿ ಭತ್ತ ಬೆಳೆಯುವ ರೈತರು ಮೆಕ್ಕೆಜೋಳ ಮತ್ತಿತರ ಬೆಳೆ ಬೆಳೆಯಲಾರಂಭಿಸಿದ್ದಾರೆ. ಇನ್ನು ಕೆಲವು ರೈತರು ಆಗಸ್ಟ್ ತಿಂಗಳಲ್ಲಾದರೂ ಉತ್ತಮ ಮಳೆಯಾಗುವ ನಿರೀಕ್ಷೆಯಲ್ಲಿದ್ದು, ಇನ್ನಷ್ಟೇ ಭತ್ತ ನಾಟಿ ಕಾರ್ಯ ಆರಂಭಿಸುವ ಸಿದ್ಧತೆ ನಡೆಸುತ್ತಿದ್ದಾರೆ. 94ಸಿಸಿ ಅಕ್ರಮಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಡಿಸಿ ಇಕ್ಕೇರಿ ಸಾಗರ, ಆ.3
: 94 ಸಿ ಮತ್ತು 94ಸಿಸಿ ಕಾಯ್ದೆಯನ್ನು ದುರುಪಯೋಗಪಡಿಸಿಕೊಳ್ಳಲು ಅನಧಿಕೃತವಾಗಿ ಮನೆಯನ್ನು ಕಟ್ಟಿ ಅದನ್ನು ಅಧಿಕೃತಗೊಳಿಸಿಕೊಳ್ಳುವವರ ವಿರುದ್ದ ನಿರ್ದಾಕ್ಷಿಣ್ಯಕ್ರಮ ಜರಗಿಸಲಾಗುವುದು ಎಂದು ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ ಎಚ್ಚರಿಸಿದ್ದಾರೆ. ಇಲ್ಲಿನ ತಾಲೂಕು ಪಂಚಾಯತ್‌ನ ಸಾಮರ್ಥ್ಯ ಸೌಧದಲ್ಲಿ ಬುಧವಾರ 94 ಸಿ ಮತ್ತು 94ಸಿಸಿ ಕಾಯ್ದೆ ಅನುಷ್ಠಾನ ಕುರಿತು ಕರೆಯಲಾಗಿದ್ದ ಸಾಗರ ಹಾಗೂ ಹೊಸನಗರ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ನೌಕರರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಸಾಗರ, ಹೊಸನಗರ, ಸೊರಬ ಹಾಗೂ ಶಿಕಾರಿಪುರ ವ್ಯಾಪ್ತಿಯಲ್ಲಿ ಬಗರ್‌ಹುಕುಂ ಸೇರಿದಂತೆ 94ಸಿ, 94ಸಿಸಿ ಕಾಯ್ದೆಯನ್ನು ದುರುಪಯೋಗಪಡಿಸಿಕೊಂಡು ಸರಕಾರಿ ಜಾಗ ಒತ್ತುವರಿ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿಬಂದಿವೆ. ಇದನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದ್ದು, ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸಲು ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ಸಾಗರ ಗ್ರಾಮಾಂತರ ಪ್ರದೇಶದಲ್ಲಿ 94ಸಿ ಅಡಿ 11,955 ಅರ್ಜಿ, ನಗರ ವ್ಯಾಪ್ತಿಯಲ್ಲಿ 3, 377 ಅರ್ಜಿಗಳು ಭೂ ಮಂಜೂರಾತಿ ಕೋರಿ ಬಂದಿವೆ. ಹೊಸನಗರ ಗ್ರಾಮಾಂತರ ಪ್ರದೇಶದಲ್ಲಿ 94ಸಿ ಅಡಿ 14, 895 ಹಾಗೂ 94ಸಿಸಿ ಅಡಿ 71 ಅರ್ಜಿಗಳು ಬಂದಿವೆ. ಆಯಾ ತಾಲೂಕಿಗೆ ಸಂಬಂಧಪಟ್ಟಂತೆ ಬಂದ ಅರ್ಜಿಗಳನ್ನು ತಾಲೂಕು ಕಚೇರಿಗಳಿಗೆ ತರಿಸಿಕೊಂಡು ತಕ್ಷಣ ವಿಲೇವಾರಿ ಮಾಡುವ ಬಗ್ಗೆ ಗಮನ ಹರಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅರಣ್ಯಹಕ್ಕು ಕಾಯ್ದೆ ಅನುಷ್ಠಾನ ಸಂದರ್ಭದಲ್ಲಿ ಅನುಸರಿಸಿದ ಮಾದರಿಯನ್ನೇ ಇಲ್ಲಿಯೂ ಅನುಸರಿಸಿ, ಪ್ರತಿ ಗ್ರಾಮವ್ಯಾಪ್ತಿಯ ಅರ್ಜಿಗಳನ್ನು ವಿಂಗಡಣೆ ಮಾಡಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಅರ್ಜಿಯನ್ನು ಪರಿಶೀಲನೆ ನಡೆಸಿ ಕಡತ ಸಿದ್ಧಗೊಳಿಸಬೇಕು ಎಂದು ಸೂಚಿಸಿದರು.
ಈ ಸಂಬಂಧ ಓರ್ವ ಅಧಿಕಾರಿಯನ್ನು ನೇಮಿಸಲಾಗುತ್ತದೆ. ಅರ್ಜಿ ಪರಿಶೀಲನೆ ಹಾಗೂ ಕಡತ ತಯಾರಿಕೆ ಕೆಲಸ ಸೆ.8 ರೊಳಗೆ ಮುಗಿಸಬೇಕು. ಈ ಸಂಬಂಧ ವೇಳಾಪಟ್ಟಿಯನ್ನು ನಾಳೆ ಸಂಜೆ 4 ಗಂಟೆಯೊಳಗೆ ನಮ್ಮ ಕಚೇರಿಗೆ ತಲುಪಿಸಬೇಕು ಎಂದು ಆದೇಶಿಸಿದರು.
ಯೋಜನೆ ಕುರಿತು ಹೊಸನಗರ, ಶಿಕಾರಿಪುರ, ಶಿವಮೊಗ್ಗ ಕ್ಷೇತ್ರಗಳಿಗೆ ಭೇಟಿ ನೀಡಿ ಸಭೆ ಕರೆದು ಮಾಹಿತಿ ನೀಡಲಾಗಿದೆ. ಅಳತೆಗಿಂತ ಹೆಚ್ಚು ಅಥವಾ ಅಳತೆಗಿಂತ ಕಡಿಮೆ ಜಾಗವನ್ನು ಮಂಜೂರಾತಿಗೆ ಸಲ್ಲಿಸಲಾಗಿದೆ. ಸರಕಾರಿ ನಿಯಮದ ಪ್ರಕಾರ ಜಾಗವನ್ನು ನೀಡಲಾಗುತ್ತದೆ. ಯೋಜನೆಗೆ ಸಂಬಂಧಪಟ್ಟಂತೆ ಭೂದಾಖಲೆಗಳ ಸಹಾಯಕರು ನಕ್ಷೆ ತಯಾರಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಡಾ. ರಾಕೇಶ್ ಕುಮಾರ್, ಸಾಗರ ತಹಶೀಲ್ದಾರ್ ಎನ್.ಟಿ. ಧರ್ಮೋಜಿರಾವ್, ಕಾರ್ಯನಿರ್ವಹಣಾಧಿಕಾರಿ ಸಿದ್ದಲಿಂಗಯ್ಯ, ಹೊಸನಗರ ತಹಶೀಲ್ದಾರ್ ಪುಟ್ಟರಾಜ ಗೌಡ, ಕಾರ್ಯನಿರ್ವಹಣಾಧಿಕಾರಿ ವಿ.ಎಸ್.ಭಟ್, ಭೂದಾಖಲೆಗಳ ಸಹಾಯಕ ನಿರ್ದೇಶಕಿ ಪ್ರಸಾದಿನಿ ಮತ್ತಿತರರು ಹಾಜರಿದ್ದರು.







