ಹಜ್ ಯಾತ್ರಿಕರಿಗೆ ಸೂಟ್‌ಕೇಸ್ ಕಡ್ಡಾಯಗೊಳಿಸಿದ ಸೌದಿ ಸರಕಾರ
ಸಕಾಲದಲ್ಲಿ ನಿರ್ದೇಶನ ನೀಡದ ರಾಜ್ಯ ಹಜ್ ಸಮಿತಿ ವಿರುದ್ಧ ಆಕ್ರೋಶ

ಮಂಗಳೂರು, ಆ.3: ಕೇಂದ್ರ ಹಜ್ ಸಮಿತಿ ವತಿಯಿಂದ ಈ ಬಾರಿ ಹಜ್‌ಗೆ ತೆರಳುವ ಯಾತ್ರಿಕರಿಗೆ ಸೌದಿ ಸರಕಾರ ಸೂಟ್‌ಕೇಸ್ ಕಡ್ಡಾಯಗೊಳಿಸಿದ್ದರೂ, ರಾಜ್ಯ ಹಜ್ ಸಮಿತಿಯವರು ಸಕಾಲದಲ್ಲಿ ಸೂಕ್ತ ನಿರ್ದೇಶನ ನೀಡದ ಹಿನ್ನೆಲೆಯಲ್ಲಿ ಹಜ್ ಯಾತ್ರಿಕರು ಗೊಂದಲಕ್ಕೀಡಾಗಿದ್ದಾರೆ ಎಂಬ ಆರೋಪ ಹಜ್ ಸಮಿತಿ ವಿರುದ್ಧ ಕೇಳಿ ಬಂದಿದೆ.
ಹಜ್ ಯಾತ್ರೆ ಕೈಗೊಳ್ಳುವವರಿಗೆ ಈ ಬಾರಿ ಯಾವುದೇ ಬ್ಯಾಗ್ ಕೊಂಡೊಯ್ಯಲು ಅವಕಾಶ ನಿರಾಕರಿಸಿರುವ ಸೌದಿ ಸರಕಾರ ಕೇವಲ ಎರಡು ಸೂಟ್‌ಕೇಸ್‌ಗಳಿಗೆ ಮಾತ್ರ ಅವಕಾಶ ಕಲ್ಪಿಸಿದೆ. ಅಲ್ಲದೆ ತಲಾ ಸೂಟ್‌ಕೇಸ್‌ನಲ್ಲಿ 22ರಿಂದ 23 ಕೆ.ಜಿ. ಅಂದರೆ ಎರಡೂ ಸೂಟ್‌ಕೇಸ್‌ಗಳಲ್ಲಿ ಒಟ್ಟು 45 ಕೆ.ಜಿ.ಗಿಂತ ಹೆಚ್ಚಿನ ಸಾಮಗ್ರಿಗಳನ್ನು ಅದರಲ್ಲೂ ಈ ಸೂಟ್‌ಕೇಸ್‌ಗಳಿಗೆ ಹಗ್ಗವನ್ನು ಕಟ್ಟಿ ಒಯ್ಯುವಂತಿಲ್ಲ. ಸೌದಿ ಸರಕಾರ ತಿಂಗಳ ಹಿಂದೆಯೇ ಈ ಸೂಚನೆ ನೀಡಿತ್ತಾದಲೂ ರಾಜ್ಯ ಹಜ್ ಸಮಿತಿಯವರು ಮಾತ್ರ ಇದನ್ನು ಯಾತ್ರಿಕರಿಗೆ ತಿಳಿಸದೆ ಹೊರಡುವ ಒಂದು ದಿನದ ಮುಂಚೆ ನಿರ್ದೇಶನ ನೀಡಿದೆ ಎನ್ನಲಾಗಿದೆ.
ಹಜ್ ಯಾತ್ರಿಕರ ಮೊದಲ ವಿಮಾನ ಗುರುವಾರ ಪೂರ್ವಾಹ್ನ 11 ಗಂಟೆಗೆ ತೆರಳಲಿರುವುದರಿಂದ ದೂರದಿಂದ ಬರಬೇಕಾದ ಹಜ್ ಯಾತ್ರಿಕರು ಬುಧವಾರ ಸಂಜೆಯಿಂದಲೇ ಬಜ್ಪೆಯ ಹಳೆ ಏರ್‌ಪೋರ್ಟ್‌ಗೆ ಬಂದು ಸೇರಿದ್ದಾರೆ. ಇದರಲ್ಲಿ ಶೇ. 50ರಷ್ಟು ಜನರಿಗೆ ಈ ಸೂಟ್‌ಕೇಸ್‌ನ ವಿಷಯವೇ ತಿಳಿದಿಲ್ಲ. ಹೆಚ್ಚಿನವರು ಬ್ಯಾಗ್‌ಗಳಲ್ಲಿ ತಮ್ಮ ಸಾಮಗ್ರಿಗಳನ್ನಿಟ್ಟು ಹಗ್ಗದಿಂದ ಬ್ಯಾಗನ್ನು ಕಟ್ಟಿದ್ದಾರೆ. ಸೌದಿ ಸರಕಾರದ ಆದೇಶಕ್ಕೆ ವಿರುದ್ಧವಾಗಿರುವ ಇಂತಹ ಬ್ಯಾಗ್‌ಗಳನ್ನು ಖಾಲಿ ಮಾಡಿ ಸೂಟ್‌ಕೇಸ್‌ಗಳಲ್ಲಿ ಸಾಮಗ್ರಿಗಳನ್ನು ಮತ್ತೆ ತುಂಬುವುದು ಹೇಗೆ? ಎಂದು ಯಾತ್ರಿಕರು ಪ್ರಶ್ನಿಸುತ್ತಿದ್ದಾರೆ.
ಈ ಮಧ್ಯೆ ಯಾತ್ರಿಕರ ನೆರವಿಗೆ ಸಜ್ಜಾಗಿರುವ ಸ್ವಯಂ ಸೇವಕರು ಆ.4ರಂದು ಮೊದಲ ವಿಮಾನದಲ್ಲಿ ತೆರಳುವ ಹಜ್ ಯಾತ್ರಿಕರಿಗೆ ಸೂಟ್‌ಕೇಸ್‌ನಿಂದ ವಿನಾಯತಿ ನೀಡುವಂತೆ ಕೋರಿಕೊಂಡಿದ್ದಾರೆ. ಅದರಂತೆ ಕಸ್ಟಮ್ಸ್ ಹಾಗೂ ಏರ್ ಇಂಡಿಯಾದ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಆದರೆ, ಆ.5 ಮತ್ತು ಅನಂತರ ತೆರಳುವ ಹಜ್ ಯಾತ್ರಿಕರಿಗೆ ಇದರಿಂದ ವಿನಾಯಿತಿ ನೀಡಲು ನಿರಾಕರಿಸಲಾಗಿದ್ದು, ಹಜ್ ಯಾತ್ರಿಕರು ಕಡ್ಡಾಯವಾಗಿ ಸೂಟ್‌ಕೇಸ್‌ಗಳನ್ನೇ ತರಬೇಕಾಗಿದೆ. ಸೌದಿ ಸರಕಾರದ ನಿರ್ದೇಶನದಂತೆ ಸೂಟ್‌ಕೇಸ್‌ಗಳು ಯಾವುದೇ ಹಗ್ಗ ಅಥವಾ ಇನ್ನಿತರ ವಸ್ತುಗಳಿಂದ ಕಟ್ಟುವಂತಿಲ್ಲ.
ಹಗ್ಗ ಇಲ್ಲದ ಸೂಟ್‌ಕೇಸ್‌ಗಳ ಅಭದ್ರತೆಯ ಆತಂಕ
ಈ ನಡುವೆ ಹಗ್ಗದಿಂದ ಕಟ್ಟಿರದ ಸೂಟ್‌ಕೇಸ್‌ಗಳು ಯಾವ ಕ್ಷಣದಲ್ಲಾದಲೂ ಬಿಚ್ಚುವ ಸಂಭವವಿದ್ದು, ಇದರಿಂದಾಗಿ ತಮ್ಮ ಅಮೂಲ್ಯ ವಸ್ತುಗಳ ಬಗ್ಗೆ ಹಜ್ ಯಾತ್ರಿಕರು ಆತಂಕಪಡುವಂತಾಗಿದೆ. ಈ ಬಗ್ಗೆ ಅಳಲು ತೋಡಿಕೊಂಡಿರುವ ಹಜ್ ಯಾತ್ರಿಕರು ಹಾಗೂ ಸ್ವಯಂ ಸೇವಕರು, ಹಗ್ಗದಿಂದ ಕಟ್ಟಿರದ ಯಾತ್ರಿಕರ ಸೂಟ್‌ಕೇಸ್‌ಗಳನ್ನು ಮದೀನಾದಲ್ಲಿ ಇಳಿಸುವ ಸಂದರ್ಭ ಚೆಲ್ಲಾಪಿಲ್ಲಿಯಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಹೀಗಾದರೆ, ವಸ್ತುಗಳನ್ನು ಸಂಗ್ರಹಿಸಲು ಪರದಾಡಬೇಕಾದೀತು ಎಂಬ ಆತಂಕವೂ ಯಾತ್ರಿಕರನ್ನು ಕಾಡತೊಡಗಿದೆ.
ಏರ್‌ಪೋರ್ಟ್ ಪ್ರಾಧಿಕಾರದ ಸಭೆಯಲ್ಲೂ ಪ್ರಸ್ತಾಪಿಸಿಲ್ಲ: ಯಹ್ಯಾ ನಕ್ವಾ
ಜು.12ರಂದು ರಾಜ್ಯ ಹಜ್ ಸಮಿತಿ ಮತ್ತು ಏರ್‌ಪೋರ್ಟ್ ಪ್ರಾಧಿಕಾರವು ಮಂಗಳೂರಿನ ಏರ್‌ಪೋರ್ಟ್‌ನಲ್ಲಿ ನಡೆಸಿದ ಸಭೆಯಲ್ಲಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೌದಿ ಸರಕಾರದ ನಿರ್ದೇಶನದ ಬಗ್ಗೆ ತಿಳಿದಿದ್ದರೂ, ಸೂಟ್‌ಕೇಸ್ ಬಗ್ಗೆ ವಿಷಯವೇ ಪ್ರಸ್ತಾಪಿಸಿರಲಿಲ್ಲ ಎಂದು ವಕ್ಫ್ ಸಲಹಾ ಸಮಿತಿಯ ಉಡುಪಿ ಜಿಲ್ಲಾಧ್ಯಕ್ಷ ಯಹ್ಯಾ ನಕ್ವಾ ಮಲ್ಪೆ ತಿಳಿಸಿದ್ದಾರೆ.
ಕಸ್ಟಮ್ಸ್, ಇಮಿಗ್ರೇಷನ್, ಪೊಲೀಸ್ ಮೊದಲಾದ ಇಲಾಖೆಯ ಅಧಿಕಾರಿಗಳ ಸಹಿತ ನಾನು ಕೂಡ ಸಭೆಯಲ್ಲಿ ಉಪಸ್ಥಿತರಿದ್ದೆವು. ಆ ಸಭೆಯಲ್ಲಿ ಪ್ರಾಧಿಕಾರದ ಅಧಿಕಾರಿಗಳು ಸೌದಿ ಸರಕಾರದ ನಿರ್ದೇಶನದ ಬಗ್ಗೆ ಮಾಹಿತಿ ನೀಡಬೇಕಿತ್ತು. ಆದರೆ ಮಾಹಿತಿ ನೀಡದಿರುವುದರಿಂದ ಇದೀಗ ಹಜ್ ಯಾತ್ರಿಕರಲ್ಲಿ ಗೊಂದಲ ಸೃಷ್ಟಿಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ರಾಜ್ಯ ಹಜ್ ಸಮಿತಿಯ ಕಾರ್ಯನಿರ್ವಾಹಕ ಅಧಿಕಾರಿ ಸರ್ಫ್ರಾಝ್ ಖಾನ್, ಈ ಬಾರಿ ಹಜ್ ಯಾತ್ರಿಕರು ಸೂಟ್‌ಕೇಸ್‌ಗಳನ್ನು ಮಾತ್ರ ಒಯ್ಯುವಂತೆ ಸೌದಿ ಸರಕಾರ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಗುರುವಾರದಿಂದ ಹೊರಡುವ ಹಜ್ ಯಾತ್ರಿಕರು ಬ್ಯಾಗ್‌ಗಳನ್ನು ಕೊಂಡೊಯ್ಯದೆ ಸೂಟ್‌ಕೇಸ್‌ಗಳನ್ನು ಮಾತ್ರ ಒಯ್ಯುವಂತೆ ಸೂಚಿಸಲಾಗಿದೆ. ‘ಏರ್ ಇಂಡಿಯಾದ ಅಧಿಕಾರಿಗಳಿಗೆ ಈ ಮಾಹಿತಿ ತಿಳಿದಿದ್ದರೂ ಬುಧವಾರವಷ್ಟೇ ನಮ್ಮ ಗಮನಕ್ಕೆ ತರಲಾಗಿದೆ. ಅದರಂತೆ ಈ ಬಗ್ಗೆ ಯಾತ್ರಿಕರಿಗೆ ಮಾಹಿತಿ ನೀಡಲಾಗಿದೆ’ ಎಂದವರು ತಿಳಿಸಿದರು.







