ಭಟ್ಕಳ: ಮೂವರು ಸಂಘಪರಿವಾರದ ಕಾರ್ಯಕರ್ತರ ವಿರುದ್ಧ ಪ್ರಕರಣ
ಅರೆನಗ್ನಗೊಳಿಸಿ ವ್ಯಕ್ತಿಗೆ ಹಲ್ಲೆ ಪ್ರಕರಣ

ಭಟ್ಕಳ, ಆ.3: ದನಕಳವುಗೈದ ಆರೋಪದಲ್ಲಿ ವ್ಯಕ್ತಿಯೋರ್ವರನ್ನು ಅರೆನಗ್ನಗೊಳಿಸಿ ಥಳಿಸಿ, ಮೆರವಣಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಸಂಘಪರಿವಾರದ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿದೆ.
ಚೌಥನಿಯ ಕೇಶವ ಸಂಕಪ್ಪನಾಯ್ಕ, ಮಂಜು, ನಾಗರಾಜ್ ಎಂಬವರ ವಿರುದ್ಧ ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಐಪಿಸಿ ಕಲಂ 107, 323, 324, 504, 341ರ ಅನ್ವಯ ದೂರು ದಾಖಲಿಸಿಕೊಳ್ಳಲಾಗಿದೆ. ಅಲ್ಲದೆ, ಕೃತ್ಯದಲ್ಲಿ ಪಾಲ್ಗೊಂಡಿದ್ದ ಇತರ 12 ಜನರ ಮೇಲೂ ಪ್ರಕರಣ ದಾಖಲಿಸಲಾಗಿದೆ ಎಂದು ನಗರಠಾಣೆಯ ಪಿಎಸ್ಸೈ ರೇವತಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ದೃಶ್ಯಾವಳಿ ಹಾಗೂ ಸುದ್ದಿಗಳು ಹರಿದಾಡುತ್ತಿದ್ದು, ಸಂಘಪರಿವಾರದ ಕಾರ್ಯಕರ್ತರ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶಪಡಿಸಿದ್ದರು.
ಮಾನವೀಯತೆ ಮೆರೆದ ಎಸ್ಸೈ:
ಸಂಘಪರಿವಾರಿದ ಕಾರ್ಯಕರ್ತರಿಂದ ವಿವಸ್ತ್ರನಾಗಿ ಹಲ್ಲೆಗೊಳಗಾದ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡ ನಗರಠಾಣೆಯ ಎಸ್ಸೈ ರೇವತಿ ಠಾಣೆಯಲ್ಲಿ ಬೇರೆ ಅಂಗಿಯನ್ನು ತೊಡಿಸಿ ಆತನಿಗೆ ಊಟದ ವ್ಯವಸ್ಥೆಯನ್ನು ಮಾಡಿ ಮಾನವೀಯತೆ ಮೆರೆದಿದ್ದಾರೆ ತಿಳಿದು ಬಂದಿದೆ.







