ಇದೂ ಪುರುಷಾಹಂಕಾರವಲ್ಲವೇ?
ಮಾನ್ಯರೆ,
ಮಹಾದಾಯಿ ನೀರಿಗಾಗಿ ನಡೆದ ಧರಣಿ, ಸತ್ಯಾಗ್ರಹ, ಕಲ್ಲು ತೂರಾಟ, ಟೈರ್ ಬೆಂಕಿ ಹಚ್ಚುವುದರ ಮಧ್ಯೆ ನವಲಗುಂದ ತಾಲೂಕಿನ ಯಮನೂರಿನಲ್ಲಿ ಮಹಿಳೆ, ಮಕ್ಕಳು, ಮುದುಕರ ಮೇಲೆ ನಡೆದ ಪೊಲೀಸರ ದೌರ್ಜನ್ಯ ಅತ್ಯಂತ ಅಮಾನವೀಯ.
ಒಬ್ಬ ಸಬ್‌ಇನ್‌ಸ್ಪೆಕ್ಟರ್‌ನ ಜೀಪಿಗೆ ಮುಷ್ಕರನಿರತರು ಕಲ್ಲು ತೂರಿದರೆಂದು ಆತ ಮಂತ್ರಿಗಳ ಮುಂದೆ ಹೇಳಿಕೊಂಡಿದ್ದು, ಆ ಮಂತ್ರಿ, ‘‘ಸಿಕ್ಕವರನ್ನು ಬಡೀರಿ, ನೀವೇನು ಬಳೆ ಹಾಕಿ ಕೊಂಡಿದ್ರಾ?’’ ಎಂದು ಹುಕುಂ ಕೊಟ್ಟಿದ್ದು ನೆಪವಾಗಿ, ಪೊಲೀಸರ ಪುರುಷಾಹಂಕಾರ ಮೇಲೆದ್ದು ನಿರ್ಲಜ್ಜವಾಗಿ ಎದುರಿಗೆ ಸಿಕ್ಕವರನ್ನು, ಮನೆಯಲ್ಲಿದ್ದವರನ್ನು ಹೊರಗೆಳೆದು ಬಡಿದು ತಮ್ಮ ಗಂಡಸುತನವನ್ನು ಜಗತ್ತಿನೆದುರು ಸಾಬೀತುಪಡಿಸಿದ್ದಾರೆ! ಜವಾಬ್ದಾರಿಯುತ ಸ್ಥಾನದಲ್ಲಿರುವವರು ಸಮಾಧಾನ ಚಿತ್ತದಿಂದ ವಿಚಾರಿಸಬೇಕಾಗಿತ್ತು. ಆದರೆ ಅಧಿಕಾರದ ಮದದಿಂದ ನಡೆಸಿದ ಈ ರೀತಿಯ ದೌರ್ಜನ್ಯ ನಾವೇನು ಪ್ರಜಾಪ್ರಭುತ್ವದ ಆಡಳಿತದಲ್ಲಿದ್ದೇವೆಯೋ? ಸರ್ವಾಧಿಕಾರಿಗಳ ಆಡಳಿತದಲ್ಲಿದ್ದೇವೆಯೋ ಎಂದು ಆತಂಕಿತರಾಗುವಂತೆ ಮಾಡಿದೆ. ಇವರೆಂತಹ ರಕ್ಷಕರು? ಇದ್ಯಾವ ರೀತಿಯ ಕಾನೂನುಪಾಲನೆ? ಮುಷ್ಕರ, ರಸ್ತೆ ತಡೆ, ಬಂದ್ ಎಂದ ಕೂಡಲೇ ಒಂದಿಷ್ಟು ಸಮಾಜಘಾತುಕ ಶಕ್ತಿಗಳು ಜಾಗೃತವಾಗುತ್ತವೆ, ಕಂಡಲ್ಲೆಲ್ಲ ಕಲ್ಲು ಹೊಡೆಯುವುದು, ಗಾಜುಗಳನ್ನು ಪುಡಿ ಮಾಡುವುದು, ಟೈರ್‌ಸುಡುವುದು ಇವೆಲ್ಲ ಮುಷ್ಕರದ ಹೆಸರಲ್ಲಿ ಅವರು ನಡೆಸುವ ಮೋಜಿನಾಟಗಳು. ಅವರೊಳಗಿರುವ ಪುಂಡು ಪ್ರವೃತ್ತಿ ಈ ರೀತಿಯಾಗಿ ಎದ್ದು ಕುಣಿಯುತ್ತದೆ. ಅವರನ್ನು ಹುಡುಕಿ ಹಿಡಿದು ಪ್ರಕರಣ ದಾಖಲಿಸಬೇಕಾದ್ದು ನ್ಯಾಯಯುತ ಮಾರ್ಗ. ಆದರೆ ಆದದ್ದೇನು? ಸದೆಬಡಿಯುವ ಸಲಹೆ ಕೊಟ್ಟಿದ್ದು ಉರಿಗೆ ತುಪ್ಪಹೊಯ್ದಂತಾಯಿತು. ಅವರೊಳಗಿನ ಅಮಾನವೀಯ ಗುಣ ಮೇಲೆದ್ದು ಹೆಡೆ ಬಿಚ್ಚಿ ಎದುರು ಬಂದವರಾರು, ಅವರು ಹಿರಿಯರೋ, ಮುದುಕರೋ, ಅಮಾಯಕ ಹೆಣ್ಣು ಮಕ್ಕಳೋ, ಗರ್ಭಿಣಿಯೋ, ಮಕ್ಕಳೋ ಎಂಬುದನ್ನೊಂದೂ ವಿಚಾರ ಮಾಡದೆ ಸಿಕ್ಕ ಸಿಕ್ಕವರನ್ನು ಸಿಕ್ಕ ಸಿಕ್ಕಲ್ಲಿ ಸದೆಬಡಿದು ತಮ್ಮ ರೋಷದ ಕಿಚ್ಚನ್ನು ಉರಿಸಿಕೊಂಡರು. ಇವರು ನಿಜವಾಗಿಯೂ ಮನುಷ್ಯರೇ? ಮಾನವ ಹಕ್ಕುಗಳನ್ನು ಗೌರವಿಸುವವರೇ?
ಯಾರ್ಯಾರದ್ದೋ ಹೊಡೆಯುವ, ಬಡಿಯುವ ಸುಡುವ ದಾಹಗಳೆಲ್ಲ ತೀರಿದವು ನಿಜ. ಆದರೆ ಇದಕ್ಕೆಲ್ಲ ಬಲಿಯಾದವರು ಮಾತ್ರ ಅಮಾಯಕರೇ. ಯುದ್ಧಗಳು ನಡೆದಾಗ ಎದುರಾಳಿ ಸೋತಾಗ ಅವರ ಹೆಂಡಿರ ಮೇಲೆ ಅತ್ಯಾಚಾರ, ಲೂಟಿ ಮಾಡಿ ವಿಕೃತಾನಂದವನ್ನು ಪಡೆಯುತ್ತಿದ್ದರಂತೆ. ಇದೂ ಹೆಚ್ಚೂಕಮ್ಮಿ ಅದನ್ನೇ ನೆನಪಿಸುತ್ತಿದೆ. ಶಿಕ್ಷಣಕ್ಕೂ, ಮನುಷ್ಯತ್ವಕ್ಕೂ, ಸಂಬಂಧ ಇದುವರೆಗೆ ಸಾಧ್ಯವಾಗಿಲ್ಲದಿರುವುದು ಶೋಚನೀಯ. ನಾಗರಿಕರೆಲ್ಲರೂ ತಲೆತಗ್ಗಿಸಬೇಕಿದೆ. ಸರಕಾರ ತಕ್ಷಣವೇ ಅಮಾಯಕರ ನೋವಿಗೆ ಮಿಡಿಯು ವಂತಾಗಲಿ, ಅಧಿಕಾರದ ಮದದಿಂದ, ದುರಹಂಕಾರದಿಂದ ವರ್ತಿಸಿದವರನ್ನು ತಕ್ಷಣವೇ ಶಿಕ್ಷಿಸಲಿ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಇನ್ನೊಮ್ಮೆ ಇಂತಹ ದೌರ್ಜನ್ಯ ನಡೆಯದಂತೆ ಎಚ್ಚರವಹಿಸಲಿ.
ಶಾರದಾ ಗೋಪಾಲ, ಧಾರವಾಡ
ರೂಪಾ ಹಾಸನ, ಹಾಸನ
ನಂದಿನಿ ಜಯರಾಂ, ಮಂಡ್ಯ
ಗೌಸಿಯಾ ಖಾನ್, ಹೊಸಪೇಟೆ
ಸ್ವರ್ಣ ಭಟ್, ಸುರತ್ಕಲ್







