ಬಾಂಗ್ಲಾದೇಶ ವಿರುದ್ಧ ಐತಿಹಾಸಿಕ ಟೆಸ್ಟ್ ಆತಿಥ್ಯವಹಿಸಲಿರುವ ಭಾರತ

ಹೊಸದಿಲ್ಲಿ, ಆ.3: ಬಾಂಗ್ಲಾದೇಶದ ವಿರುದ್ಧ ಫೆ.8 ರಿಂದ 12ರ ತನಕ ಹೈದರಾಬಾದ್‌ನಲ್ಲಿ ಏಕೈಕ ಟೆಸ್ಟ್ ಪಂದ್ಯದ ಆತಿಥ್ಯವಹಿಸಿಕೊಳ್ಳಲಾಗುವುದು ಎಂದು ಬಿಸಿಸಿಐ ಬುಧವಾರ ದೃಢಪಡಿಸಿದೆ.
ಪಂದ್ಯವನ್ನು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಸಲಾಗುತ್ತದೆ ಎಂದು ಈಗಾಗಲೇ ಘೋಷಿಸಲಾಗಿದ್ದು, ದಿನಾಂಕವನ್ನು ಬುಧವಾರ ಅಂತಿಮಗೊಳಿಸಲಾಗಿದೆ.
ಬಾಂಗ್ಲಾದೇಶ 2000ರಲ್ಲಿ ಟೆಸ್ಟ್ ಸ್ಥಾನಮಾನ ಪಡೆದ ಬಳಿಕ ಇದೇ ಮೊದಲ ಬಾರಿ ಭಾರತದಲ್ಲಿ ಭಾರತದ ವಿರುದ್ಧ ಟೆಸ್ಟ್ ಪಂದ್ಯವನ್ನು ಆಡಲಿದೆ.
‘‘ಟೆಸ್ಟ್ ಆಡುವ ಪ್ರಮುಖ ದೇಶವಾಗಿ, ಎಲ್ಲ ಟೆಸ್ಟ್ ಆಡುವ ರಾಷ್ಟ್ರಗಳಿಗೆ ಅವಕಾಶ ನೀಡುವುದು ಬಿಸಿಸಿಐನ ಕರ್ತವ್ಯ. ಮುಂದಿನ ವರ್ಷಾರಂಭದಲ್ಲಿ ನಮ್ಮ ನೆರೆಯ ರಾಷ್ಟ್ರ ಬಾಂಗ್ಲಾದೇಶದ ವಿರುದ್ಧ ಏಕೈಕ ಹಾಗೂ ಐತಿಹಾಸಿಕ ಟೆಸ್ಟ್ ಪಂದ್ಯದ ಆತಿಥ್ಯವಹಿಸಿಕೊಳ್ಳುತ್ತಿರುವ ಬಗ್ಗೆ ತಿಳಿಸಲು ತುಂಬಾ ಸಂತೋಷವಾಗುತ್ತಿದೆ’’ ಎಂದು ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಹೇಳಿದ್ದಾರೆ.
ಭಾರತ ತಂಡ ನ್ಯೂಝಿಲೆಂಡ್‌ನ ವಿರುದ್ಧ ಮೂರು ಟೆಸ್ಟ್ ಹಾಗೂ ಐದು ಏಕದಿನ ಪಂದ್ಯಗಳನ್ನು ಆಡುವ ಮೂಲಕ ಸ್ವದೇಶದಲ್ಲಿ ತನ್ನ ಅಭಿಯಾನ ಆರಂಭಿಸಲಿದೆ







