ಬಿಹಾರ ಅಗ್ರಾಂಕ ಹಗರಣ: 12ನೆ ತರಗತಿಯ ವಿಜ್ಞಾನದಲ್ಲಿ ರ್ಯಾಂಕ್ ಗಳಿಸಿದ್ದ ವಿದ್ಯಾರ್ಥಿಯ ಬಂಧನ
ವೈಶಾಲಿ (ಬಿಹಾರ), ಆ.3: ಬಿಹಾರದ ‘ಅಗ್ರಾಂಕ ಹಗರಣ’ದ ಕುರಿತು ತನಿಖೆ ಮುಂದುವರಿದಿರುವಂತೆಯೇ, 12ನೆ ತರಗತಿಯ ವಿಜ್ಞಾನ ಪರೀಕ್ಷೆಯಲ್ಲಿ ಮೂರನೆ ರ್ಯಾಂಕ್ ಪಡೆದಿದ್ದ ರಾಹುಲ್ ಕುಮಾರ್ ಎಂಬ ವಿದ್ಯಾರ್ಥಿಯನ್ನು ಇಂದು ಬೆಳಗ್ಗೆ ಬಂಧಿಸಲಾಗಿದೆ.
ಆತನನ್ನು ವಿಶೇಷ ತನಿಖಾ ತಂಡವು (ಸಿಟ್) ವೈಶಾಲಿಯಿಂದ ಬಂಧಿಸಿದೆ.
ಫಲಿತಾಂಶ ವಂಚನೆಯ ಸಂಬಂಧ ಬಂಧಿಸಲ್ಪಟ್ಟಿರುವ 2ನೆಯ ವಿದ್ಯಾರ್ಥಿ ರಾಹುಲ್ ಆಗಿದ್ದಾನೆ. ರಾಜ್ಯಶಾಸ್ತ್ರದಲ್ಲಿ ಅಡುಗೆ ಮಾಡುವುದನ್ನು ಕಲಿಸುತ್ತಾರೆಂದು ಟಿವಿ ಚಾನೆಲೊಂದಕ್ಕೆ ಉತ್ತರ ನೀಡಿ ಬಲೆಗೆ ಬಿದ್ದಿದ್ದ ಇನ್ನೊಬ್ಬಳು ರ್ಯಾಂಕ್ ವಿದ್ಯಾರ್ಥಿನಿ ರುಬಿ ರಾಯ್ ಎಂಬಾಕೆಯನ್ನು ಈ ಹಿಂದೆಯೇ ಬಂಧಿಸಲಾಗಿದೆ. ರಾಹುಲ್ ಹಾಗೂ ರುಬಿ ಸಹಿತ ವಿಷ್ಣು ರಾಯ್ ಕಾಲೇಜಿನ 12ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮರು ಪರೀಕ್ಷೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ರಾಹುಲ್ ಪರೀಕ್ಷೆಯಲ್ಲಿ ಅನುತ್ತೀರ್ಣನಾದ ಬಳಿಕ ಆತನ ಫಲಿತಾಂಶವನ್ನು ರದ್ದುಗೊಳಿಸಲಾಗಿದೆ.
18ರ ಹರೆಯದ ರುಬಿ ಅನಾರೋಗ್ಯದ ಕಾರಣ ನೀಡಿ ಮರು ಪರೀಕ್ಷೆಗೆ ತಪ್ಪಿಸಿಕೊಂಡಿದ್ದಳು. ಜೂ.25ರಂದು ಅವಳನ್ನು ಬಂಧಿಸಿ ಸುಧಾರಣಾ ಗೃಹಕ್ಕೆ ಕಳುಹಿಸಲಾಗಿತ್ತು. ಎರಡು ಬಾರಿ ಜಾಮೀನು ನಿರಾಕರಿಸಿದ ಬಳಿಕ, ಅಂತಿಮವಾಗಿ ಈ ವಾರಾರಂಭದಲ್ಲಿ ಆಕೆ ಬಿಡುಗಡೆಗೊಂಡಿದ್ದಾಳೆ.





