ಉಪ್ಪಿನಂಗಡಿ: ಕಾಲೇಜಿನಲ್ಲಿ ಸೊತ್ತು ಕಳವು
ಉಪ್ಪಿನಂಗಡಿ, ಆ.3: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರ ಕೊಠಡಿಯಲ್ಲಿದ್ದ 2 ಲ್ಯಾಪ್‌ಟಾಪ್, 3 ಪ್ರೊಜೆಕ್ಟರ್ ಹಾಗೂ 10 ಲ್ಯಾಪ್‌ಟಾಪ್ ಬ್ಯಾಗ್‌ಗಳು ಕಳವಾಗಿರುವ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಬಗ್ಗೆ ಪ್ರಭಾರ ಪ್ರಾಚಾರ್ಯೆ ಮೇರಿ ಬಿ.ಸಿ.ಯವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ. ರಾಷ್ಟ್ರೀಯ ಉಚ್ಛತರ್ ಶಿಕ್ಷಣ್ ಅಭಿಯಾನ (ರೂಸ) ಯೋಜನೆಯ ಜ್ಞಾನ ಸಂಗಮ ಕಾರ್ಯಕ್ರಮದಡಿಯಲ್ಲಿ 29 ಲ್ಯಾಪ್‌ಟಾಪ್, 21 ಪ್ರೊಜೆಕ್ಟರ್ ಕಾಲೇಜಿಗೆ ಬಂದಿದ್ದು, ಇದನ್ನು ತನ್ನ ಕಚೇರಿಯ ಕೊಠಡಿಯಲ್ಲಿದ್ದ ಕಪಾಟಿನಲ್ಲಿಡಲಾಗಿತ್ತು. ಅದರಲ್ಲಿ ಡೆಲ್ ಕಂಪೆನಿಗೆ ಸೇರಿದ 2 ಲ್ಯಾಪ್‌ಟಾಪ್, ಒಪ್ಟೊಮಾ ಕಂಪೆನಿಗೆ ಸೇರಿದ 3 ಪ್ರೊಜೆಕ್ಟರ್ ಮತ್ತು 10 ಡೆಲ್ ಕಂಪೆನಿಯ ಲ್ಯಾಪ್‌ಟಾಪ್ ಬ್ಯಾಗ್ ಸೇರಿದಂತೆ ಒಟ್ಟು 2,74,960 ರೂಪಾಯಿಯ ಸೊತ್ತು ಕಳವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಅವುಗಳನ್ನು ಸಹಾಯಕ ಪ್ರಾಧ್ಯಾಪಕರಿಗೆ ಹಂಚುವ ಸಲುವಾಗಿ ಕಪಾಟು ತೆರೆದು ನೋಡುವಾಗ ಕಳವು ಪ್ರಕರಣ ಪತ್ತೆ ಆಗಿದೆ. ಜು.16ರಿಂದ 30ರ ಮಧ್ಯೆ ಇಷ್ಟು ಸೊತ್ತುಗಳು ಕಳವು ಆಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿ ಕಚೇರಿ ಸಿಬ್ಬಂದಿ ಮೇಲೆ ಸಂಶಯ ಇರುವುದಾಗಿ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.





