ಮಹಾಕಾಳಿಪಡ್ಪು: ಪೌರಕಾರ್ಮಿಕರ ಗೃಹ ಭಾಗ್ಯ ಯೋಜನೆಗೆ ಶಿಲಾನ್ಯಾಸ

ಮಂಗಳೂರು, ಆ.4: ನಗರದ ಮಹಾಕಾಳಿಪಡ್ಪುವಿನಲ್ಲಿ ಮಂಗಳೂರು ಮಹಾನಗರ ಪಾಲಿಕೆಯಿಂದ ನಿರ್ಮಾಣವಾಗಲಿರುವ ಪೌರಕಾರ್ಮಿಕರ ಗೃಹ ಭಾಗ್ಯ ಯೋಜನೆಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಪ್ರತಿಭಟನೆಯ ನಡುವೆಯೆ ನಗರಾಭಿವೃದ್ದಿ ಸಚಿವ ರೋಶನ್ ಬೇಗ್ ಶಿಲಾನ್ಯಾಸ ನೆರವೇರಿಸಿದರು.
ಮಂಗಳೂರು ಮಹಾನಗರ ಪಾಲಿಕೆಯಿಂದ 2.40 ಕೊಟಿ ವೆಚ್ಚದಲ್ಲಿ 8 ಅಂತಸ್ತಿನ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ. ಇದರಲ್ಲಿ 10 ವರ್ಷಕ್ಕಿಂತ ಮೇಲ್ಪಟ್ಟು ಸೇವೆ ಸಲ್ಲಿಸುತ್ತಿರುವ 32 ಮಂದಿ ಖಾಯಂ ಪೌರಕಾರ್ಮಿಕರಿಗೆ ಮನೆಯನ್ನು ಹಂಚಲಾಗಿದೆ. 7.5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಮನೆಯ ಶೇ.20ರಷ್ಟು ಅಂದರೆ 1.5 ಲಕ್ಷ ರೂ.ನ್ನು ಫಲಾನುಭವಿಗಳು ನೀಡಬೇಕಾಗಿದೆ. 400 ಚದರ ಅಡಿ ವಿಸ್ತಾರವಿರುವ ಮನೆಯಲ್ಲಿ 1 ಹಾಲ್, 1 ಕಿಚನ್, 1 ಬೆಡ್‌ರೂಂ, ಬಾಲ್ಕನಿ , ಟಾಯ್ಲೆಟ್ ಮತ್ತು ಬಾತ್‌ರೂಮ್ ಒಳಗೊಂಡಿದೆ.
ಆದರೆ ಈ ಯೋಜನೆಯನ್ನು ಮಂಗಳೂರು ಮಹಾನಗರಪಾಲಿಕೆಯ ನಿವೃತ್ತಿ ಹಾಗೂ ಖಾಯಂ ಪೌರ ಕಾರ್ಮಿಕರನ್ನು ಕಡೆಗಣಿಸಿ ಗೃಹಭಾಗ್ಯ ಯೋಜನೆಗೆ ಆಯ್ಕೆ ಮಾಡದೆ ಅನ್ಯಾಯವೆಸಗಲಾಗಿದೆ ಎಂದು ಆಪಾದಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ನೇತೃತ್ವದಲ್ಲಿ ಪೌರ ಕಾರ್ಮಿಕರ ಕುಟುಂಬಿಕರು ಪ್ರತಿಭಟನೆಯನ್ನು ನಡೆಸಿದರು.
ಶಿಲಾನ್ಯಾಸ ಸಂದರ್ಭದಲ್ಲಿ ಸುರಿದ ಭಾರಿ ಮಳೆಯ ನಡುವೆಯೂ ಪ್ರತಿಭಟನೆ ನಡೆಸಿದ ಪ್ರತಿಭಟನಕಾರರ ಜೊತೆ ಶಾಸಕ ಜೆ.ಆರ್.ಲೋಬೊ ಮೊದಲಿಗೆ ಮಾತುಕತೆ ನಡೆಸಿದರು. ನಂತರ ಸಚಿವ ರೋಶನ್ ಬೇಗ್ ಅವರು ಪ್ರತಿಭಟನಕಾರರ ಮನವಿಯನ್ನು ಸ್ವೀಕರಿಸಿ ಶೀಘ್ರದಲ್ಲಿಯೆ ಸಮಸ್ಯೆ ಬಗೆಹರಿಸುವ ಭರವಸೆಯನ್ನು ನೀಡಿದರು.
ಶಿಲಾನ್ಯಾಸ ಸಂದರ್ಭದಲ್ಲಿ ಶಾಸಕ ಮೊಯ್ದಿನ್ ಬಾವ, ಮನಪಾ ಮೇಯರ್ ಹರಿನಾಥ್ ಎಂ, ಮನಪಾ ಸ್ಥಾಯಿ ಸಮಿತಿ ಅಧ್ಯಕ್ಷ ಲ್ಯಾನ್ಸಿಲಾಟ್ ಪಿಂಟೋ, ಮನಪಾ ಸದಸ್ಯೆ ಶೈಲಜಾ, ಜಿಲ್ಲಾ ಕಾಂಗ್ರೆಸ್ ಮುಖಂಡ ಸುಧೀರ್ ಟಿ.ಕೆ ಉಪಸ್ಥಿತರಿದ್ದರು.







