50-150 ರೂ.ಗೆ ಇಲ್ಲಿ ಅತ್ಯಾಚಾರ ವೀಡಿಯೊ ಲಭ್ಯ
ನಾವೆಂತಹ ಸಮಾಜದಲ್ಲಿದ್ದೇವೆ ?
![50-150 ರೂ.ಗೆ ಇಲ್ಲಿ ಅತ್ಯಾಚಾರ ವೀಡಿಯೊ ಲಭ್ಯ 50-150 ರೂ.ಗೆ ಇಲ್ಲಿ ಅತ್ಯಾಚಾರ ವೀಡಿಯೊ ಲಭ್ಯ](https://www.varthabharati.in/sites/default/files/images/articles/2016/08/4/53535636.jpg)
ಹೊಸದಿಲ್ಲಿ, ಆ.4: ಉತ್ತರ ಪ್ರದೇಶದಾದ್ಯಂತ ಹಲವಾರು ಅಂಗಡಿಗಳಲ್ಲಿ ಅತ್ಯಾಚಾರ ವೀಡಿಯೊಗಳನ್ನು ಪ್ರತಿ ದಿನ ನೂರಾರು ಅಥವಾ ಸಾವಿರಾರು ಜನರಿಗೆ ಕಾನೂನು ಪಾಲಕರ ಯಾವುದೇ ಅಂಜಿಕೆಯಿಲ್ಲದೆ ಮಾರಾಟ ಮಾಡಲಾಗುತ್ತಿದೆಯೆಂದು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ವರದಿ ಮಾಡಿದೆ.
ಮೂವತ್ತು ಸೆಕೆಂಡುಗಳಿಂದ ಹಿಡಿದು ಐದು ನಿಮಿಷ ಅವಧಿಯ ಈ ವೀಡಿಯೊ ಕ್ಲಿಪ್ಪಿಂಗ್ಸ್ ಗಳನ್ನು ಅವುಗಳ ‘ವಿಶೇಷತೆ’ಯ ಆಧಾರದಲ್ಲಿ 50 ರಿಂದ 150 ರೂ.ಗೆ ಮಾರಾಟ ಮಾಡಲಾಗುತ್ತಿದೆ ಎಂದು ವರದಿ ತಿಳಿಸಿದೆ.
ಅಂಗಡಿ ಮಾಲಕರು ಈ ವೀಡಿಯೊ ಕ್ಲಿಪ್ಪಿಂಗ್ ಗಳನ್ನು ತಮ್ಮ ಬಳಿ ತಮ್ಮ ನಂಬಿಕೆಯ ಗ್ರಾಹಕರ ಶಿಫಾರಸಿನ ಮೇರೆಗೆ ಬರುವವರಿಗೆ ಮಾತ್ರ ಮಾರಾಟ ಮಾಡುತ್ತಾರೆ. ‘‘ಪೋರ್ನ್ ಹಳತಾಗಿ ಬಿಟ್ಟಿದೆ. ಈಗ ಇಂತಹ ನಿಜ ಜೀವನದ ಅಪರಾಧಗಳ ವೀಡಿಯೊಗಳು ಹೆಚ್ಚು ಜನಪ್ರಿಯವಾಗಿವೆ’’ ಎನ್ನುತ್ತಾನೆ ಆಗ್ರಾದ ಕಸ್ಗಂಜ್ ಮಾರ್ಕೆಟ್ ಪ್ರದೇಶದ ಅಂಗಡಿಯಾತನೊಬ್ಬ.
‘‘ಅಂಗಡಿಯವರು ವೀಡಿಯೊಗಳನ್ನು ನೇರವಾಗಿ ಗ್ರಾಹಕರ ಸ್ಮಾರ್ಟ್ ಫೋನ್ಅಥವಾ ಪೆನ್ ಡ್ರೈವ್ಗೆ ಡೌನ್ ಲೋಡ್ ಮಾಡುತ್ತಾರೆ’’ಎಂದು ಆತ ವಿವರಿಸುತ್ತಾನೆ. ಕೆಲವರು ಇಂತಹ ವೀಡಿಯೊಗಳನ್ನು ಟ್ವಿಟ್ಟರ್, ಟಂಬ್ಲರ್ ಅಥವಾ ಬೇರೆಲ್ಲಿಂದಾದರೂ ಡೌನ್ ಲೋಡ್ ಮಾಡಿ ಅವುಗಳನ್ನು ಮಾರಾಟ ಮಾಡುತ್ತಾರೆ. ಇನ್ನೂ ಹಲವೊಮ್ಮೆ ಅತ್ಯಾಚಾರ ಪ್ರಕರರಣಗಳ ಆರೋಪಿಗಳು ತಾವು ತೆಗೆದ ವೀಡಿಯೊಗಳನ್ನು ಮಾರುತ್ತಾರೆ ಅಥವಾ ಆನ್ಲೈನ್ನಲ್ಲಿ ಅಪ್ ಲೋಡ್ ಮಾಡುತ್ತಾರೆ.
ಬುಧವಾರ ಟೈಮ್ಸ್ ಆಫ್ ಇಂಡಿಯಾ ತಂಡ ಬೆಳಂಗಂಜ್, ಬಲ್ಕೇಶ್ವರ್, ಕಮಲಾ ನಗರ್ ಮತ್ತಿತರ ಮಾರುಕಟ್ಟೆ ಪ್ರದೇಶಗಳಿಗೆ ಹೋದಾಗ ಇಂತಹ ವೀಡಿಯೊಗಳು ಅಲ್ಲಿ ಸಾಕಷ್ಟು ಸುಲಭವಾಗಿ ಲಭ್ಯವಿವೆಯೆಂದು ಕಂಡುಕೊಂಡಿತೆಂದು ವರದಿ ತಿಳಿಸಿದೆ.