ಏಕ ನಿವೇಶನ ಸಮಸ್ಯೆ ಬಗೆಹರಿಸಲು ಶೀಘ್ರ ಸಭೆ: ಸಚಿವ ರೋಶನ್ ಬೇಗ್

ಮಂಗಳೂರು, ಆ.4: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏಕ ನಿವೇಶನಕ್ಕೆ ಸಂಬಂಧಿಸಿ ಜನರಿಗೆ ಉಂಟಾಗುತ್ತಿರುವ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಶೀಘ್ರವೇ ಸಂಬಂಧಪಟ್ಟವರ ಸಭೆ ನಡೆಸಲಾಗುವುದು ಎಂದು ನಗರಾಭಿವೃದ್ಧಿ ಮತ್ತು ಹಜ್ ಸಚಿವ ರೋಶನ್ ಬೇಗ್ ತಿಳಿಸಿದರು.
ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ಮಂಗಳೂರು ಮಹಾನಗರ ಪಾಲಿಕೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕರಾದ ಜೆ.ಆರ್. ಲೋಬೊ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಏಕ ನಿವೇಶನ (ಸಿಂಗಲ್ ಸೈಟ್)ಗೆ ಅನುಮತಿಗೆ ಸಂಬಂಧಿಸಿ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಗಮನ ಸೆಳೆದಿದ್ದಾರೆ. ಜನರಿಗೆ ತೊಂದರೆ ಆಗದಂತೆ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಏಕ ನಿವೇಶನ ಅನುಮೋದನೆಗೆ ಸಂಬಂಧಿಸಿ ನಿಯಮಾವಳಿಯನ್ನು ಸರಳಗೊಳಿಸುವುದು ಹಾಗೂ ದರವನ್ನು ಕಡಿಮೆಗೊಳಿಸುವ ಕುರಿತಂತೆಯೂ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.
ಪೌರ ಕಾರ್ಮಿಕರಿಗೆ ಗೃಹ ಭಾಗ್ಯ ಯೋಜನೆ
ಪೌರ ಕಾರ್ಮಿಕರಿಗೆ ನಗರದ ಜಪ್ಪು ಮಹಾಕಾಳಿ ಪಡ್ಪುವಿನಲ್ಲಿ ಬಹುಮಹಡಿಯ ಮಾದರಿ ಮನೆಗಳ ಗೃಹಭಾಗ್ಯ ಯೋಜನೆಯ ಕಾಮಗಾರಿ ಶೀಘ್ರದಲ್ಲೇ ಆರಂಭಗೊಳ್ಳಲಿದೆ. ಈಗಾಗಲೇ ಟೆಂಡರ್ ಕರೆಯಲಾಗಿದೆ ಎಂದು ಅವರು ಹೇಳಿದರು.
ಪ್ರಸ್ತುತ ಜಪ್ಪು ಮಹಾಕಾಳಿ ಪಡ್ಪುವಿನಲ್ಲಿ ವಾಸವಿರುವ 7 ಮಂದಿ ನಿವೃತ್ತ ಪೌರ ಕಾರ್ಮಿಕರನ್ನು ಪ್ರಸಕ್ತ ಯೋಜನೆಯಿಂದ ಕೈಬಿಡಲಾಗಿದೆ ಎಂಬ ದಲಿತ ಸಂಘಟನೆಯ ಆರೋಪ, ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಿವೃತ್ತರಿಗೆ ಪ್ರಸಕ್ತ ಯೋಜನೆಯಡಿ ವಸತಿ ಸೌಲಭ್ಯ ಕಲ್ಪಿಸಲು ಅವಕಾಶವಿಲ್ಲ. ಆಶ್ರಯ ಯೋಜನೆಯಡಿ ಅವರಿಗೆ ವಸತಿ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ತುಂಬೆಯಲ್ಲಿನ ನೂತನ ಅಣೆಕಟ್ಟಿನ ಸಿವಿಲ್ ಕಾಮಗಾರಿಗಳು ಪೂರ್ಣಗೊಂಡಿದ್ದು, ಗೇಟ್ ಅಳವಡಿಕೆಯೂ ಆಗಿದೆ. ಪೇಯ್ಟಿಂಗ್ ಹಾಗೂ ಇಲೆಕ್ಟ್ರಿಕಲ್ ಕೆಲಸ ಬಾಕಿ ಇದೆ. ಮಳೆಗಾಲವಾದ್ದರಿಂದ ಸದ್ಯ ಆ ಕೆಲಸ ಮಾಡಲು ಸಾಧ್ಯವಿಲ್ಲ. ಮಳೆಗಾಲ ಮುಗಿದಾಕ್ಷಣ ಆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಅವರು ಹೇಳಿದರು.
ಎಡಿಬಿ ಯೋಜನೆಯಡಿ 280 ಕೋಟಿ ರೂ.ಗಳಲ್ಲಿ 160 ಕೋಟಿ ರೂ. ನೀರಿಗಾಗಿ ಹಾಗೂ 120 ಕೋಟಿ ರೂ. ಒಳಚರಂಡಿ ಕಾಮಗಾರಿಗಳಿಗೆ ಬಳಕೆಯಾಗಲಿದೆ ಎಂದು ಸಚಿವ ರೋಶನ್ ಬೇಗ್ ತಿಳಿಸಿದರು.
ನಗರದಲ್ಲಿ ಸೆಂಟ್ರಲ್, ಕದ್ರಿ, ಸುರತ್ಕಲ್ ಮಾರುಕಟ್ಟೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಸುರತ್ಕಲ್‌ನಲ್ಲಿ 60 ಕೋಟಿ ರೂ. ವೆಚ್ಚದಲ್ಲಿ ಬಹುಮಹಡಿ ಮಾರುಕಟ್ಟೆ ನಿರ್ಮಾಣವಾಗಲಿದೆ. ಇದಕ್ಕಾಗಿ 3.5 ಎಕರೆ ಭೂಮಿಯನ್ನು ಗುರುತಿಸಲಾಗಿದೆ ಎಂದು ಅವರು ಈ ಸಂದರ್ಭ ತಿಳಿಸಿದರು. ಗೋಷ್ಠಿಯಲ್ಲಿ ಮೇಯರ್ ಹರಿನಾಥ್, ಶಾಸಕರಾದ ಜೆ.ಆರ್. ಲೋಬೋ, ಮೂಡಾ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಮನಪಾ ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಪ್ಪಿಲತಾ, ಲ್ಯಾನ್ಸಿ ಲಾಟ್ ಪಿಂಟೋ, ಕವಿತಾ ಸನಿಲ್ ಮೊದಲಾದವರು ಉಪಸ್ಥಿತರಿದ್ದರು.
ಶಕ್ತಿನಗರದಲ್ಲಿ 70 ಕೋಟಿ ರೂ. ವೆಚ್ಚದಲ್ಲಿ ವಸತಿ ಭಾಗ್ಯ
ಬಡವರಿಗೆ ವಸತಿ ಸೌಲಭ್ಯವನ್ನು ಒದಗಿಸುವ ನಿಟ್ಟಿನಲ್ಲಿ ಶಕ್ತಿನಗರದಲ್ಲಿ 70 ಕೋಟಿ ರೂ. ವೆಚ್ಚದಲ್ಲಿ ನೆಲಮಹಡಿ ಹಾಗೂ ಮೂರು ಅಂತಸ್ತುಗಳ ಬಹುಮಹಡಿ ವಸತಿ ಯೋಜನೆ ನಿರ್ಮಾಣವಾಗಲಿದೆ ಎಂದು ಸಚಿವ ರೋಶನ್ ಬೇಗ್ ತಿಳಿಸಿದರು.







