ಸರಕಾರಿ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ದ.ಕ. ಜಿಲ್ಲೆ ಪ್ರಥಮ: ಸಚಿವ ರೈ

ಮಂಗಳೂರು,ಆ.4: ಸರಕಾರದ ಕಾರ್ಯಕ್ರಮಗಳ ಅನುಷ್ಠಾನ ಮಾಡುವುದರಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮುಂಚೂಣಿಯಲ್ಲಿದ್ದು ಎಲ್ಲಾ ಪ್ರಗತಿಪರ ಕಾರ್ಯಕ್ರಮಗಳ ಅನುಷ್ಠಾನವಾಗುತ್ತಿದೆ ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಅವರು ಇಂದು ನಗರದ ರೊಸಾರಿಯೋ ಚರ್ಚ್ ಸಭಾಂಗಣದಲ್ಲಿ ನಡೆದ ಮಂಗಳೂರು ತಾಲೂಕು ಮಟ್ಟದ ಜನಸಂಪರ್ಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಸರಕಾರ ವಿದ್ಯಾಸಿರಿ ಯೋಜನೆಯಲ್ಲಿ 1.77 ಕೋಟಿ ರೂ. ಖರ್ಚು ಮಾಡಿದೆ. 35 ಕೋಟಿ ರೂ. ವೆಚ್ಚದಲ್ಲಿ 2 ಲಕ್ಷ ಫಲಾನುಭವಿಗಳಿಗೆ ಅನ್ನಭಾಗ್ಯ ವಿತರಣೆ ಮಾಡಲಾಗಿದೆ. ಕ್ಷೀರಭಾಗ್ಯ ಯೋಜನೆಯಡಿ 78 ಲಕ್ಷ ಮಕ್ಕಳಿಗೆ 222 ಮೆಟ್ರಿಕ್ ಟನ್ ಹಾಲಿನ ಹುಡಿಯನ್ನು ನೀಡಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಯು.ಟಿ.ಖಾದರ್, ರಾಜ್ಯದಲ್ಲಿ ರೇಶನ್ ಕಾರ್ಡ್‌ಗೆ ಸಂಬಂಧಪಟ್ಟ ಸಮಸ್ಯೆಯಿದ್ದು ಪಾಸ್‌ಪೋರ್ಟ್ ಮಾಡುವುದಕ್ಕಿಂತಲೂ ರೇಶನ್ ಕಾರ್ಡ್ ಮಾಡಲು ಜನರು ಪರದಾಡುತ್ತಿದ್ದಾರೆ. ಈ ಅವ್ಯವಸ್ಥೆಯನ್ನು ಸರಿಪಡಿಸಿ ರೇಶನ್‌ಕಾರ್ಡ್ ಮಾಡಲು ಸುಲಭ ರೀತಿಯ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಜನಸಂಪರ್ಕ ಸಭೆಗೆ ಮುಂಚೆ ಬಂದಿದ್ದ 27 ಅರ್ಜಿಗಳ ಬಗ್ಗೆ ಪರಿಶೀಲನೆ ನಡೆಸಲಾಯಿತು. 27 ಅರ್ಜಿಯಲ್ಲಿ ಚಂದ್ರಶೇಖರ್ ಎಂಬವರು ಆರ್‌ಟಿಸಿ ತಿದ್ದಪಡಿಗೆ ಮಾಡಿದ ಅರ್ಜಿಯನ್ನು ಪರಿಶೀಲಿಸಿ ಸ್ಥಳದಲ್ಲಿಯೆ ಆರ್‌ಟಿಸಿಯನ್ನು ನೀಡಲಾಯಿತು.
ಪಾಂಡೇಶ್ವರ -ಹೊಯ್ಗೆ ಬಜಾರ್ ನಡುವೆ ಇರುವ ರೈಲ್ವೆ ಗೇಟ್‌ನಿಂದ ತೊಂದರೆಯಾಗುತ್ತಿರುವ ಬಗ್ಗೆ ಈ ಪ್ರದೇಶದ ಸಾರ್ವಜನಿಕರು ಸಭೆಯಲ್ಲಿ ಗಮನಸೆಳೆದರು. ಇಲ್ಲಿ ಬೆಳಗ್ಗೆ ಹಾಕಲಾಗುತ್ತಿರುವ ರೈಲ್ವೆ ಗೇಟ್‌ನಿಂದ ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗಲು ಸಮಸ್ಯೆಯಾಗುತ್ತಿದ್ದು ಇದನ್ನು ಸರಿಪಡಿಸುವಂತೆ ಒತ್ತಾಯಿಸಿದರು.
ಮನವಿಯನ್ನು ಸ್ವೀಕರಿಸಿ ಮಾತನಾಡಿದ ದ.ಕ ಜಿಲ್ಲಾಧಿಕಾರಿ ಡಾ.ಕೆ.ಆರ್.ಜಗದೀಶ್, ವಾರದೊಳಗೆ ಈ ಬಗ್ಗೆ ರೈಲ್ವೆ ಇಲಾಖೆಯ ಅಧಿಕಾರಿಗಳೊಂದಿಗೆ ಸ್ಥಳೀಯರನ್ನು ಸೇರಿಸಿಕೊಂಡು ಸಭೆ ನಡೆಸಲಾಗುವುದು ಎಂದು ಹೇಳಿದರು.
ಉಳ್ಳಾಲ ಪುರಸಭೆಯ ಅಧ್ಯಕ್ಷ ಕೆ.ಎಫ್ ಹುಸೈನ್ ಕುಂಞಿಮೋನು, ಮೆಸ್ಕಾಂಗೆ ಒಮ್ಮೆ ದೂರು ನೀಡಿದರೆ 6 ರೂ. ತನಕ ಖರ್ಚಾಗುತ್ತಿದೆ ಎಂದು ವೇದಿಕೆಯಲ್ಲಿ ಮೆಸ್ಕಾಂಗೆ ಪೋನ್ ಮಾಡಿ, ಅದರ ಬಿಲ್ಲನ್ನು ತೋರಿಸಿ ಸಮಸ್ಯೆ ಬಗ್ಗೆ ಗಮನಸೆಳೆದರು. ಇದಕ್ಕೆ ಉತ್ತರಿಸಿದ ಅಪರ ಜಿಲ್ಲಾಧಿಕಾರಿ ಕುಮಾರ್ ಅವರು ಮೆಸ್ಕಾಂನಲ್ಲಿ ಟೋಲ್‌ಪ್ರೀ ನಂಬರ್ ಮಾಡಲು ಬೇಕಾದ ವ್ಯವಸ್ಥೆಯನ್ನು ಮಾಡುವಂತೆ ಸೂಚಿಸಲಾಗುವುದು ಎಂದು ತಿಳಿಸಿದರು.
ನಗರದ ಗುಜ್ಜರಕೆರೆ ಅಭಿವೃದ್ದಿಯ ಬಗ್ಗೆ, ಅಶಕ್ತ, ಹಿರಿಯ ನಾಗರಿಕರಿಗೆ ಆಶ್ರಯತಾಣ ಕಲ್ಪಿಸುವ ಬಗ್ಗೆ ಸಭೆಯಲ್ಲಿ ಗಮನಸೆಳೆಯಲಾಯಿತು.
ಸಭೆಯಲ್ಲಿ ಶಾಸಕ ಅಭಯಚಂದ್ರ ಜೈನ್, ದ.ಕ ಜಿ.ಪಂ. ಸಿಇಒ ಪಿ.ಐ.ಶ್ರೀವಿದ್ಯಾ, ದ.ಕ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ, ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು, ಉಪಾಧ್ಯಕ್ಷೆ ಪೂರ್ಣಿಮಾ ಮೊದಲಾದವರು ಉಪಸ್ಥಿತರಿದ್ದರು.







