ಕಡಬ: ಅಧಿಕಾರಿಗಳ ಬೆವರಿಳಿಸಿದ ‘ಎಸಿ’
ಪುತ್ತೂರು ಎಸಿಯಿಂದ ಅಹವಾಲು ಸ್ವೀಕಾರ

ಕಡಬ, ಆ.4: 2016 ಮೇ.31ರೊಳಗೆ ಸಲ್ಲಿಕೆಯಾಗಿರುವ 94ಸಿ ಅರ್ಜಿಗಳನ್ನು ಆ.31ರೊಳಗೆ ವಿಲೇವಾರಿ ಮಾಡುವಂತೆ ಪುತ್ತೂರು ಸಹಾಯಕ ಆಯುಕ್ತ ಡಾ.ರಾಜೇಂದ್ರ ಕೆ.ವಿ. ಕಡಬ ತಹಸೀಲ್ದಾರ್, ಕಂದಾಯ ನಿರೀಕ್ಷಕರು ಹಾಗೂ ಗ್ರಾಮಕರಣಿಕರಿಗೆ ಕಟ್ಟಪ್ಪಣೆ ಹೊರಡಿಸಿದ್ದಾರೆ. ಅಲ್ಲದೆ, ಕಾನೂನು ರೀತಿಯಲ್ಲಿ ಮಂಜೂರಾತಿ ಮಾಡಲು ಸಾಧ್ಯವಿಲ್ಲದಿದ್ದರೆ ಅಂತಹ ಕಡತಗಳನ್ನು ತಿರಸ್ಕರಿಸಬೇಕು. ಈ ಬಗ್ಗೆ ಸಂಪೂರ್ಣ ವಿವರಣೆಯನ್ನು ಆ.31ರೊಳಗೆ ನೀಡುವಂತೆ ತಾಕೀತು ಮಾಡಿದ್ದು, ಇಲ್ಲದಿದ್ದರೆ ಸೂಕ್ತ ಕಾನೂನು ಕ್ರಮ ಎದುರಿಸಬೇಕಾದಿತು ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.
ಕಡಬ ತಹಸೀಲ್ದಾರ್ ಕಚೇರಿಯಲ್ಲಿ ಪ್ರತಿ ಗ್ರಾಮಗಳ ಗ್ರಾಮ ಕರಣಿಕರನ್ನು ಪ್ರತ್ಯೇಕವಾಗಿ ಕರೆದು 94ಸಿ ಅರ್ಜಿ ವಿಲೇವಾರಿ, ಅಕ್ರಮ ಸಕ್ರಮ ಕಡತ ವಿಲೇವಾರಿ ಅಲ್ಲದೆ 5 ಎಕರೆಗಿಂತ ಹೆಚ್ಚು ಸರಕಾರಿ ಜಮೀನು ಹೊಂದಿರುವವರ ಪಟ್ಟಿ ಮುಂತಾದವುಗಳ ಬಗ್ಗೆ ವಿಚಾರಣೆ ನಡೆಸಿದರು.
ಈ ಸಂದರ್ಭದಲ್ಲಿ ಗ್ರಾಮಕರಣಿಕರು ಹಾಗೂ ಕಂದಾಯ, ಸರ್ವೇ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಸರಕಾರ ಬಡವರಿಗಾಗಿ ನಿವೇಶನ ಸ್ಥಳವನ್ನು ಮಂಜೂರು ಮಾಡಲು ಕಾನೂನು ರೂಪಿಸಿದ್ದು, ಆದರೆ ವಿವಿಧ ಕಾರಣಗಳನ್ನು ಮುಂದಿಟ್ಟುಕೊಂಡು ಕಡತವನ್ನು ಪೆಂಡಿಂಗ್ ಇಡುತ್ತಿರುವ ಈ ಬಗ್ಗೆ ಹಲವು ಆರೋಪಗಳು ಕೇಳಿಬರುತ್ತಿದೆ. ನಿಮಗೆ ಸಲ್ಲಿಕೆಯಾದ ಅರ್ಜಿಗಳನ್ನು ನೀವು ಕೂಡಲೇ ವಿಲೇವಾರಿ ಮಾಡಬೇಕು. ಕಾನೂನು ತೊಡಕುಗಳಿದ್ದರೆ ಕೂಡಲೇ ಅಂತಹ ಕಡತಗಳನ್ನು ತಿರಸ್ಕರಿಸಿ. ಸಂಶಯ ಇರುವ ಫೈಲುಗಳನ್ನು ಮಾತ್ರ ಅರಣ್ಯ ಇಲಾಖೆಯ ಒಪ್ಪಿಗೆಗೆ ಬರೆಯಿರಿ, ಆರ್‌ಟಿಸಿಯಲ್ಲಿ ಅರಣ್ಯ ಎಂದು ನಮೂದಾಗಿದ್ದರೆ ಅಂತಹ ಫೈಲುಗಳನ್ನು ಕೂಡಲೇ ರಿಜೆಕ್ಟ್ ಮಾಡಿ ಎಂದು ಗರಂ ಆಗಿ ಹೇಳಿದರು.
ಅರ್ಹರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗಬಾರದು. ಮುಂದಿನ ಶುಕ್ರವಾರದೊಳಗೆ ಪ್ರತಿ ಗ್ರಾಮಕರಣಿಕರು ದೂರವಾಣಿ ಕರೆ ಮಾಡಿಯಾದರೂ ತಾವು ಮಾಡಿದ ಕೆಲಸಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ಹೇಳಿದರಲ್ಲದೆ, ಆ.31ರೊಳಗೆ ಕಡತಗಳ ವಿಲೇವಾರಿ ಮಾಡದಿದ್ದರೆ ಶಿಸ್ತುಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದರು.
ಕಡಬ ಸರ್ವೇ ಇಲಾಖೆಯಲ್ಲಿ ಸರ್ವೇಯರ್ ಕೊರತೆಯಿಂದ ಸರ್ವೇ ಕೆಲಸ ವಿಳಂಬ ಆಗುತ್ತಿರುವ ಬಗ್ಗೆ ಮಾಹಿತಿ ಪಡೆದುಕೊಂಡ ಎಸಿಯವರು ಸುಳ್ಯ ತಾಲೂಕಿನಿಂದ ಹೆಚ್ಚುವರಿ ಓರ್ವ ಸರ್ವೇಯರ್‌ರನ್ನು ಕಡಬಕ್ಕೆ ನೇಮಿಸುವುದಾಗಿ ತಿಳಿಸಿದರು. 5 ಎಕರೆಗಿಂತ ಹೆಚ್ಚು ಸರಕಾರಿ ಭೂಮಿ ಹೊಂದಿರುವವರ ಪಟ್ಟಿ ಮಾಡಿಕೊಂಡು ಅಂತಹವರಿಗೆ ನೋಟಿಸ್ ನೀಡಿ ಸರಕಾರಿ ಭೂಮಿಯನ್ನು ವಶಕ್ಕೆ ಪಡೆದುಕೊಳ್ಳಬೇಕು. ಅಲ್ಲಲ್ಲಿ ಮರಳು ಅಡ್ಡೆಗಳು ಇದ್ದು ಅಂತಹ ಮರಳು ತೆಗೆಯುವ ಸ್ಥಳಗಳನ್ನು ಪಟ್ಟಿ ಮಾಡುವಂತೆ ತಹಸೀಲ್ದಾರ್‌ಗೆ ಎಸಿ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಕಡಬ ವಿಶೇಷ ತಹಸೀಲ್ದಾರ್ ಬಿ.ಲಿಂಗಯ್ಯ, ಉಪ ತಹಶೀಲ್ದಾರ್ ನವ್ಯಾ, ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆ, ಗುಮಾಸ್ತೆ ಭಾರತಿ, ಕವಿತಾ, ಗ್ರಾಮಕರಣಿಕರಾದ ನೆಬಿಸಾಬ್, ರಂಜನ್, ಶ್ರೀರಾಜ್, ಉತ್ತಪ್ಪ, ಪ್ರತಾಪ್, ವಿಜೇತ್, ಕೆಂಚನ ಗೌಡ, ದೇವಕಿ, ಗಂಗಾಧರ್, ಪೃಥ್ವಿರಾಜ್, ಸಂತೋಷ್, ರವಿಚಂದ್ರ, ಪುಷ್ಪರಾಜ್ ಉಪಸ್ಥಿತರಿದ್ದರು.







