ಇಸ್ಲಾಮಾಬಾದ್ ಸಾರ್ಕ್ ಸಮ್ಮೇಳನ: ರಾಜನಾಥ್ ಭಾಷಣಕ್ಕೆ ಪಾಕಿಸ್ತಾನ ಸೆನ್ಸಾರ್!

ಹೊಸದಿಲ್ಲಿ/ಇಸ್ಲಾಮಾಬಾದ್, ಆ.4: ಇಸ್ಲಾಮಾಬಾದ್‌ನಲ್ಲಿ ನಡೆಯುತ್ತಿರುವ ಸಾರ್ಕ್ ಸಚಿವರ ಸಮ್ಮೇಳನದಲ್ಲಿ ಗೃಹ ಸಚಿವ ರಾಜನಾಥ ಸಿಂಗ್‌ರ ಭಾಷಣವನ್ನು ಪ್ರಸಾರ ಮಾಡದಂತೆ ಪಾಕಿಸ್ತಾನವು ಮಾಧ್ಯಮಗಳಿಗೆ ತಡೆ ವಿಧಿಸಿದೆ.
ಕೇವಲ ಭಾರತೀಯ ಮಾಧ್ಯಮಗಳಿಗೆ ಮಾತ್ರವಲ್ಲದೆ, ಪಾಕಿಸ್ತಾನದ ಖಾಸಗಿ ವಾಹಿನಿಗಳೂ ರಾಜನಾಥ್‌ರ ಭಾಷಣವನ್ನು ಪ್ರಸಾರ ಮಾಡುವುದನ್ನು ನಿಷೇಧಿಸಲಾಗಿದೆ.
ಸಾರ್ಕ್ ಸಮ್ಮೇಳನದಲ್ಲಿ ಮಾತನಾಡಿದ ರಾಜನಾಥ್, ಭಯೋತ್ಪಾದನೆ ಹಾಗೂ ಅದನ್ನು ಬೆಂಬಲಿಸುತ್ತಿರುವ ದೇಶಗಳ ವಿರುದ್ಧ ಕಠಿಣ ಕ್ರಮಕ್ಕೆ ಕರೆ ನೀಡಿದರು. ಭಯೋತ್ಪಾದಕರನ್ನು ‘ಹುತಾತ್ಮರೆಂದು’ ವೈಭವೀಕರಿಸಬಾರದು. ಒಳ್ಳೆಯ ಹಾಗೂ ಕೆಟ್ಟ ಭಯೋತ್ಪಾದನೆಯೆಂಬ ವಿಭಾಗ ಇಲ್ಲ. ಭಯೋತ್ಪಾದನೆಯೆಂದರೆ ಭಯೋತ್ಪಾದನೆಯೇ, ಭಯೋತ್ಪಾದಕರನ್ನು ‘ಹುತಾತ್ಮರೆಂದು’ ವೈಭವೀಕರಿಸಬಾರದೆಂದು ಅವರು ಹೇಳಿದರು.
ಗೃಹ ಸಚಿವ ರಾಜನಾಥ್ ಸಿಂಗ್ ಹಾಗೂ ಅವರ ಪಾಕಿಸ್ತಾನಿ ಸೋದ್ಯೋಗಿ ಚೌಧರಿ ನಿಸಾರ್ ಅಲಿ ಖಾನ್ ಗುರುವಾರ ಮೊದಲ ಬಾರಿ ಮುಖಾಮುಖಿಯಾದಾಗ ಬೇಕೋ ಬೇಡವೋ ಎಂಬಂತೆ ಹಸ್ತಲಾಘವ ನೀಡಿದಾಗ, ಭಾರತ-ಪಾಕಿಸ್ತಾನ ಸಂಬಂಧ ಹಳಸಿರುವುದು ಸಮ್ಮೇಳನದಲ್ಲಿ ಪ್ರತ್ಯಕ್ಷಕ್ಕೆ ಬಂತು.
ಇಸ್ಲಾಮಾಬಾದ್‌ನ ಐಷಾರಾಮಿ ಸೆರೆನಾ ಹೊಟೇಲ್‌ನ ಸಮ್ಮೇಳನ ಸಭಾಂಗಣಕ್ಕೆ ರಾಜನಾಥ್ ಆಗಮಿಸಿದ ವೇಳೆ, ಖಾನ್ ಗಣ್ಯರನ್ನು ಸ್ವಾಗತಿಸಲು ದ್ವಾರದ ಬಳಿ ನಿಂತಿದ್ದರು. ಉಭಯ ನಾಯಕರು ಪರಸ್ಪರರ ಕೈ ಮುಟ್ಟಿದರೇ ಹೊರತು ಔಪಚಾರಿಕ ಹಸ್ತಲಾಘವ ನೀಡಲಿಲ್ಲ. ಬಳಿಕ ರಾಜನಾಥ್ ಸಮ್ಮೇಳನದ ಸಭಾಂಗಣವನ್ನು ಪ್ರವೇಶಿಸಿದರು. ರಾಜನಾಥ್ ಹಾಗೂ ಖಾನ್ ಸಭಾಂಗಣದಲ್ಲಿ ಉಪಾಹಾರಕ್ಕೂ ತಪ್ಪಿಸಿಕೊಂಡಿದ್ದರು.





