ಮದುವೆಗೂ ‘ಆಧಾರ್‌ಕಾರ್ಡ್’? !

ಉಪ್ಪಿನಂಗಡಿ, ಆ.4: ಯಾವುದೇ ಸರಕಾರಿ ಸೇವೆ ಪಡೆಯಬೇಕಾಗಿದ್ದರೂ ಈಗ ಆಧಾರ ಕಾರ್ಡ್ ಕಡ್ಡಾಯ ಹೌದು. ಆದರೆ ಮದುವೆ ಕರೆಯೋಲೆಗೂ ಆಧಾರ್ ಕಡ್ಡಾಯವೇ ಎಂದು ಹುಬ್ಬೇರಿಸಬೇಡಿ. ಸೃಜನಶೀಲ ಕಲಾವಿದನೋರ್ವನ ಕಲ್ಪನೆಗೆ ಸಿಲುಕಿ ಆಧಾರ್ ಕಾರ್ಡ್‌ನಂತೆ ಮದುವೆಯ ಆಮಂತ್ರಣ ಪತ್ರಿಕೆಯೊಂದು ಸೃಷ್ಟಿಯಾಗಿದೆ.
ವ್ಯಕ್ತಿಯ ಗುರುತು ಪತ್ತೆಗೆ ಸರಕಾರ ತಂದ ಆಧಾರ್ ಕಾರ್ಡ್ ಹಲವು ಮಂದಿಗೆ ಕಿರಿಕಿರಿಯೆನಿಸಿದರೂ, 34ನೆ ನೆಕ್ಕಿಲಾಡಿಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಸಮೀಪದ ನಿವಾಸಿ, ಕೆಎಸ್ಸಾರ್ಟಿಸಿ ಸಂಸ್ಥೆಯ ಉದ್ಯೋಗಿಯಾಗಿರುವ ಪ್ರಶಾಂತ್ ಗಾಣಿಗ ತನ್ನ ಮದುವೆಯ ಆಮಂತ್ರಣ ಪತ್ರಿಕೆಯನ್ನು ಆಧಾರ್ ಕಾರ್ಡ್ ಶೈಲಿಯಲ್ಲಿಯೇ ಮುದ್ರಿಸಿ ಗಮನ ಸೆಳೆದಿದ್ದಾರೆ.
ಉತ್ತಮ ಭಜನಾ ಗಾಯಕರೂ, ಸೃಜನಶೀಲ ಕಲಾವಿದರೂ ಆಗಿರುವ ಪ್ರಶಾಂತ್ ಅಲಿಯಾಸ್ ಪಚ್ಚು ಅವರ ವಿವಾಹ ಆ.21ರಂದು ನೆರವೇರಲಿದ್ದು, ಆಧಾರ್ ಕಾರ್ಡ್‌ನಂತೆ ಮಾಡಿರುವ ಮದುವೆಯ ಆಮಂತ್ರಣದಲ್ಲಿ ಆಧಾರ್ ಸಂಖ್ಯೆ ದಾಖಲಿತ ಸ್ಥಳದಲ್ಲಿ ಮದುವೆಯ ದಿನಾಂಕವನ್ನೂ, ತಾನು ವಿವಾಹವಾಗಲಿರುವ ಸ್ವರ್ಣಲತಾರ ಹೆಸರನ್ನು ಆಧಾರ್ ಕಾರ್ಡ್‌ನಲ್ಲಿ ವಿಳಾಸ ಬರೆಯುವ ಜಾಗದಲ್ಲಿ ಮುದ್ರಿಸಿಕೊಂಡಿದ್ದಾರೆ.
ಅಲ್ಲದೇ, ವಿಳಾಸದ ಸ್ಥಳದಲ್ಲಿ ಮದುವೆ ನಡೆಯುವ ಸಭಾಂಗಣದ ಹೆಸರು, ಮುಹೂರ್ತದ ಸಮಯ ಹಾಗೂ ವಧು-ವರರ ಹೆಸರನ್ನು ಇದರಲ್ಲಿ ಮುದ್ರಿಸುವ ಮೂಲಕ ಇದರಲ್ಲಿ ವೈಶಿಷ್ಟತೆ ಮೆರೆಯಲಾಗಿದೆ.







