ಶಾಲೆಗೆ ಏಕಾಏಕಿ ಮುತ್ತಿಗೆ ಆಘಾತ ತಂದಿದೆ: ಬ್ರಾಗ್ಸ್
ಪಡುಬೊಂಡಂತಿಲ ಶಾಲೆಗೆ ಮುತ್ತಿಗೆ ಪ್ರಕರಣ

ಮಂಗಳೂರು, ಆ.4: ನಗರದ ಹೊರವಲಯದ ನೀರುಮಾರ್ಗ ಬೊಂಡತಿಲದಲ್ಲಿರುವ ಸಂತ ಥೋಮಸರ ಹಿರಿಯ ಪ್ರಾಥಮಿಕ ಶಾಲೆಗೆ ಇತ್ತೀಚೆಗೆ ಶ್ರೀರಾಮ ಸೇನೆಯ ಕಾರ್ಯಕರ್ತರು ಅರೇಬಿಕ್ ಭಾಷೆ ಬೋಧನೆಯ ಹಿನ್ನೆಲೆಯಲ್ಲಿ ಮುತ್ತಿಗೆ ಹಾಕಿರುವುದು ಆಘಾತ ತಂದಿದೆ ಎಂದು ಶಾಲೆಯ ಮುಖ್ಯ ಶಿಕ್ಷಕ ಮೆಲ್ವಿನ್ ಬ್ರಾಗ್ಸ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಈ ಶಾಲೆಯಲ್ಲಿ ಉರ್ದು ಭಾಷೆ ಬೋಧನೆ ಮಾಡುತ್ತಿಲ್ಲ. ಈ ಹಿಂದೆ ಪೋಷಕರ ಸಭೆಯಲ್ಲಿ ಪೋಷಕರಿಂದ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಅರೇಬಿಕ್ ಭಾಷೆಯನ್ನು ಕಲಿಸಲಾಗುತ್ತಿದೆ. ಇದಕ್ಕಾಗಿ ಯಾವುದೇ ಹಣ ಪಡೆಯುತ್ತಿಲ್ಲ. ಈ ಭಾಷೆ ಕಲೆಯಲು ವಿದ್ಯಾರ್ಥಿಗಳನ್ನು ಒತ್ತಾಯ ಮಾಡಲಾಗುತ್ತಿಲ್ಲ ಎಂದವರು ಹೇಳಿದರು.
ಘಟನೆಯ ಬಳಿಕ ಪೊಲೀಸ್ ಆಯುಕ್ತರು ಕೂಡ ಅರೇಬಿಕ್ ಭಾಷೆ ಕಲಿಕೆ ಮುಂದುವರಿಸುವಂತೆ ಧೈರ್ಯ ತುಂಬಿದ್ದಾರೆ. ಶ್ರೀರಾಮ ಸೇನೆಯ ಕಾರ್ಯಕರ್ತರು ಮುತ್ತಿಗೆ ಹಾಕಿ ಗೂಂಡಾ ವರ್ತನೆ ತೋರಿದ್ದರಿಂದ ವಿದ್ಯಾರ್ಥಿಗಳಲ್ಲಿ ಮತ್ತು ಶಿಕ್ಷಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಇದಕ್ಕಾಗಿ ಮುಂದಿನ ದಿನಗಳಲ್ಲಿ ಮಕ್ಕಳಲ್ಲಿ ಮತ್ತಷ್ಟು ಹೆಚ್ಚಿನ ಆತ್ಮಸ್ಥೈರ್ಯ ತುಂಬಿಸಲು ಶಾಲೆಯಲ್ಲಿ ವಿಶೇಷ ಕೌನ್ಸಿಲಿಂಗ್ ನಡೆಸಲು ಚಿಂತನೆ ನಡೆಸಲಾಗುವುದು ಎಂದರು.
ಇಲಾಖೆ ನಿಯಮದ ಪ್ರಕಾರ ಶಾಲೆಗೆ ಅಕ್ರಮವಾಗಿ ಪ್ರವೇಶಿಸಿ ಗೂಂಡಾ ಪ್ರವೃತ್ತಿ ಮೆರೆಯಲು ಅವಕಾಶವಿಲ್ಲ. ಶ್ರೀರಾಮ ಸೇನೆಯ ಈ ರೀತಿ ವರ್ತನೆ ಖಂಡನೀಯ ಎಂದು ಬ್ರಾಗ್ಸ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶಾಲಾ ಸಂಚಾಲಕ ರೋಬರ್ಟ್ ಕ್ರಾಸ್ತಾ, ಶಾಲಾ ಆಡಳಿತ ಮಂಡಳಿ ಸದಸ್ಯ ಜಾನ್ ಪ್ರಕಾಶ್ ಪಿಂಟೊ, ಆ್ಯಂಟನಿ ಡಿಸೋಜ, ಎಡ್ವರ್ಡ್ ಡಿಸೋಜ ಉಪಸ್ಥಿತರಿದ್ದರು.







