ಮಹಾದಾಯಿ ಜಲ ವಿವಾದ : ಪ್ರಧಾನಿಗೆ ಮತ್ತೊಂದು ಪತ್ರ ಬರೆದ ಮುಖ್ಯಮಂತ್ರಿ

ಬೆಂಗಳೂರು, ಆ.4: ಮಹಾದಾಯಿ ಜಲ ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲಿ ಮಧ್ಯಸ್ಥಿಕೆ ವಹಿಸುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಮ್ಮೆ ಪತ್ರ ಬರೆದಿದ್ದಾರೆ.
ಧಾರವಾಡ, ಬೆಳಗಾವಿ, ಗದಗ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಈ ವರ್ಷವು ಬರದ ಛಾಯೆ ಆವರಿಸಿಕೊಂಡಿದೆ. ಮಹಾದಾಯಿ ಯೋಜನೆ ಜಾರಿಗೆ ಆಗ್ರಹಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯು ಎರಡನೆ ವರ್ಷಕ್ಕೆ ಕಾಲಿಟ್ಟಿದ್ದು, ಅವರು ತಮ್ಮ ತಾಳ್ಳೆಯನ್ನು ಕಳೆದುಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ವಿವರಿಸಿದ್ದಾರೆ.
ಅಂತರರಾಜ್ಯಗಳಿಗೆ ಸಂಬಂಧಿಸಿದ ಜಲವಿವಾದ ಇದಾಗಿರುವುದರಿಂದ ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ನಡುವೆ ಇರುವ ಬಿಕ್ಕಟ್ಟನ್ನು ಬಗೆಹರಿಸಲು ತಾವು ಮಧ್ಯಪ್ರವೇಶಿಸಬೇಕೆಂದು ಕೋರಿ ಕಳೆದ ಎ.26ರಂದು ಪತ್ರ ಬರೆಯಲಾಗಿತ್ತು. ಅಲ್ಲದೆ, ರಾಜ್ಯ ವಿಧಾನಸಭೆಯಲ್ಲಿ ಮಾ.30ರಂದು ಈ ಸಂಬಂಧ ಸರ್ವಾನುಮತದ ನಿರ್ಣಯ ಅಂಗೀಕರಿಸಲಾಗಿತ್ತು ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಧಾರವಾಡ, ಬೆಳಗಾವಿ, ಗದಗ ಹಾಗೂ ಬಾಗಲಕೋಟೆ ಜಿಲ್ಲೆಗಳ ರೈತರು ನಡೆಸುತ್ತಿರುವ ಹೋರಾಟದ ಬಗ್ಗೆಯೂ ತಮ್ಮ ಗಮನಕ್ಕೆ ತರಲಾಗಿದೆ. ಮಹಾದಾಯಿ ಜಲ ವಿವಾದವನ್ನು ಬಗೆಹರಿಸುವ ವಿಷಯದ ಕುರಿತು ಗೋವಾ ಮುಖ್ಯಮಂತ್ರಿಗಳ ಸ್ಪಂದನೆ ಸಕಾರಾತ್ಮಕವಾಗಿಲ್ಲ ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಅಂತರರಾಜ್ಯ ಜಲವಿವಾದವು ತಮ್ಮ ಮುಂದಾಳತ್ವದಲ್ಲೆ ಬಗೆಹರಿಯಬೇಕಿದೆ. ಆದುದರಿಂದ, ಆದಷ್ಟು ಶೀಘ್ರದಲ್ಲೆ ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ ಸಭೆಯನ್ನು ಕರೆಯುವಂತೆ ಮತ್ತೊಮ್ಮೆ ತಮಗೆ ಮನವಿ ಮಾಡಿಕೊಳ್ಳುತ್ತೇನೆ ಎಂದು ಮುಖ್ಯಮಂತ್ರಿ ಮನವಿ ಮಾಡಿದ್ದಾರೆ.





