ಮಹಾಡ್ ಸೇತುವೆ ದುರಂತ: ನ್ಯಾಯಾಂಗ ತನಿಖೆಗೆ ಆದೇಶ

ಮುಂಬೈ,ಆ.4: ಮಹಾಡ್ ಸೇತುವೆ ಕುಸಿತ ಕುರಿತು ನ್ಯಾಯಾಂಗ ತನಿಖೆಯನ್ನು ನಡೆಸಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಗುರುವಾರ ರಾಜ್ಯ ವಿಧಾನಸಭೆಯಲ್ಲಿ ಪ್ರಕಟಿಸಿದರು. ಈ ದುರಂತದಲ್ಲಿ ಮೂವರು ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದು,ಇತರ 19 ಜನರು ನಾಪತ್ತೆಯಾಗಿದ್ದಾರೆ.
ರಾಯಗಡ ಜಿಲ್ಲೆಯ ಮಹಾಡ್ ಸಮೀಪ ಹೆದ್ದಾರಿಯಲ್ಲಿನ ಬ್ರಿಟಿಷ್‌ರ ಕಾಲದ ಸೇತುವೆ ನಿನ್ನೆ ಬೆಳಗಿನ ಜಾವ ಕುಸಿದುಬಿದ್ದ ಪರಿಣಾಮ 22 ಜನರಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಎರಡು ಬಸ್ಸುಗಳು ಮತ್ತು ಹಲವಾರು ವಾಹನಗಳು ಉಕ್ಕಿ ಹರಿಯುತ್ತಿರುವ ಸಾವಿತ್ರಿ ನದಿಯಲ್ಲಿ ಕೊಚ್ಚಿಕೊಂಡು ಹೋಗಿವೆ. ನದಿಯಿಂದ ಮೂರು ಶವಗಳನ್ನು ಇಂದು ಮೇಲಕ್ಕೆತ್ತಲಾಗಿದೆ.
ಈ ಅವಘಡದ ಕುರಿತು ಸದನದಲ್ಲಿ ನಡೆದ ಚರ್ಚೆಗೆ ಉತ್ತರಿಸುತ್ತಿದ್ದ ಫಡ್ನವೀಸ್,ನ್ಯಾಯಾಂಗ ತನಿಖೆಯನ್ನು ನಡೆಸಲಾಗುವುದು. ಐಐಟಿ ತಜ್ಞರ ತಂಡವೊಂದನ್ನು ಈಗಾಗಲೇ ಘಟನಾ ಸ್ಥಳಕ್ಕೆ ರವಾನಿಸಲಾಗಿದೆ ಎಂದು ತಿಳಿಸಿದರು. ಹಳೆಯ ಸೇತುವೆಗಳ ಸ್ಥಿತಿಯ ಬಗ್ಗೆ ಸಮೀಕ್ಷೆ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದರು.
ಸೇತುವೆಯು ಶಿಥಿಲಗೊಂಡಿರುವ ಬಗ್ಗೆ 2013ರಲ್ಲಿ ಆಗಿನ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಮತ್ತು ಉಪ ಮುಖ್ಯಮಂತ್ರಿ ಬಳಿ ದೂರುಗಳನ್ನು ಸಲ್ಲಿಸಲಾಗಿತ್ತು ಎಂದು ಫಡ್ನವೀಸ್ ಬೆಟ್ಟು ಮಾಡಿದರು.







