ನೀತಾ ಅಂಬಾನಿಗೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಸದಸ್ಯತ್ವ
ಐಒಸಿ ಸದಸ್ಯತ್ವ ಪಡೆದಿರುವ ಭಾರತದ ಮೊದಲ ಮಹಿಳೆ

ಮುಂಬೈ, ಆ.4: ರಿಯೋ ಡಿ ಜನೈರೊದಲ್ಲಿ ಗುರುವಾರ ನಡೆದ 129ನೆ ಐಒಸಿ ಮಹಾ ಅಧಿವೇಶನದಲ್ಲಿ ರಿಲಯನ್ಸ್ ಫೌಂಡೇಶನ್‌ನ ಸ್ಥಾಪಕ ಅಧ್ಯಕ್ಷೆ ನೀತಾ ಅಂಬಾನಿ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ. ನೀತಾ ಐಒಸಿ ಸದಸ್ಯತ್ವ ಪಡೆದಿರುವ ಭಾರತದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಮಾಲಕಿಯಾಗಿರುವ ನೀತಾ, 2016ರ ಜೂನ್‌ನಲ್ಲಿ ಐಒಸಿ ಕಾರ್ಯಕಾರಿಣಿ ಮಂಡಳಿಯಲ್ಲಿ ಐಒಸಿ ಸದಸ್ಯತ್ವಕ್ಕೆ ನಾಮನಿರ್ದೇಶನಗೊಂಡಿದ್ದರು.
52ರ ಪ್ರಾಯದ ನೀತಾ ಅಂಬಾನಿ 70ನೆ ವಯಸ್ಸಿನ ತನಕ ಐಒಸಿ ಸದಸ್ಯರಾಗಿ ಮುಂದುವರಿಯಲಿದ್ದಾರೆ. ಸರ್ ಡೊರಾಬ್ಜಿ ಟಾಟಾ ಐಒಸಿಯನ್ನು ಪ್ರತಿನಿಧಿಸಿದ್ದ ಮೊದಲ ಭಾರತೀಯರಾಗಿದ್ದರು. ರಾಜಾ ರಣಧೀರ್ ಸಿಂಗ್ 2000 ರಿಂದ 2014ರ ತನಕ ಸದಸ್ಯರಾಗಿದ್ದು, ಪ್ರಸ್ತುತ ಗೌರವ ಸದಸ್ಯರಾಗಿದ್ದಾರೆ.
ನೀತಾ ಶಿಕ್ಷಣ, ಕ್ರೀಡೆ, ಆರೋಗ್ಯ, ಕಲೆ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳ ಬೆಳವಣಿಗೆಗೆ ಹಲವು ಉಪಕ್ರಮ ಕೈಗೊಂಡಿದ್ದು, ದೇಶದಲ್ಲಿ ಬಹು ಕ್ರೀಡೆಗಳ ಬೆಳವಣಿಗೆಗೆ ದೊಡ್ಡ ಕೊಡುಗೆ ನೀಡಿದ್ದಾರೆ.





