ಭಾರತೀಯ ಅಡುಗೆಯಾತನನ್ನು ‘ಐಸಿಸ್’ ಎಂದು ಕರೆದು ಹಲ್ಲೆ

ನ್ಯೂಯಾರ್ಕ್, ಆ. 4: ಅಮೆರಿಕದ ಒಮಾಹ ನಗರದಲ್ಲಿ ದುಷ್ಕರ್ಮಿಯೋರ್ವ ಭಾರತೀಯ ಅಡುಗೆ ಕೆಲಸದ ವ್ಯಕ್ತಿಯನ್ನು ‘ಐಸಿಸ್’ ಎಂಬುದಾಗಿ ಕರೆದು ಆತನ ಮೇಲೆ ಹಲ್ಲೆ ನಡೆಸಿದ ಘಟನೆ ಕಳೆದ ತಿಂಗಳು ನಡೆದಿದೆ.
ಒಮಾಹದಲ್ಲಿರುವ ಭಾರತೀಯ ರೆಸ್ಟೋರೆಂಟೊಂದರಲ್ಲಿ ಅಡುಗೆ ಕೆಲಸ ಮಾಡಿಕೊಂಡಿರುವ 30 ವರ್ಷದ ಸುತಾಹರ್ ಸುಬ್ಬುರಾಜ್ ಹಲ್ಲೆಗೊಳಗಾದವರು.
ಕಪ್ಪು ಮುಸುಕು ಧರಿಸಿದ ವ್ಯಕ್ತಿಯೋರ್ವ ಸುಬ್ಬುರಾಜ್‌ರ ಹಣೆ, ಮುಖ, ಬಾಯಿಗೆ ಪದೇ ಪದೇ ಹೊಡೆದನು ಹಾಗೂ ಕಾಲಿಗೆ ತುಳಿದನು ಎಂದು ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ‘ದಿ ಒಮಾಹ ವರ್ಲ್ಡ್-ಹೆರಾಲ್ಡ್’ ವರದಿ ಮಾಡಿದೆ.
ಸುಬ್ಬುರಾಜ್‌ಗೆ ಕೆಟ್ಟದಾಗಿ ಬೈದ ವ್ಯಕ್ತಿ, ‘‘ಐಸಿಸ್, ನನ್ನ ದೇಶದಿಂದ ತೊಲಗು’’ ಎಂದು ಹೇಳಿ ಸ್ಥಳದಿಂದ ಪರಾರಿಯಾದನು ಎಂದು ವರದಿ ತಿಳಿಸಿದೆ.
ದಕ್ಷಿಣ ಏಶ್ಯ ಮತ್ತು ಮಧ್ಯ ಪ್ರಾಚ್ಯ ಮೂಲದ ಜನರ ವಿರುದ್ಧ ಅಮೆರಿಕದ ಜನರಲ್ಲಿ ಬೆಳೆಯುತ್ತಿರುವ ಭೀತಿಗೆ ಹಿಂದೂ ಅಮೆರಿಕನ್ ಫೌಂಡೇಶನ್ (ಎಚ್‌ಎಎಫ್) ಕಳವಳ ವ್ಯಕ್ತಪಡಿಸಿದೆ ಹಾಗೂ ಘಟನೆಯನ್ನು ಖಂಡಿಸಿದೆ. ಅದೊಂದು ದ್ವೇಷ ಅಪರಾಧ ಎಂಬುದಾಗಿ ಎಚ್‌ಎಎಫ್ ಬಣ್ಣಿಸಿದೆ.





