ಶೋಷಣೆ ಮುಕ್ತ ಸಮಾಜ ನಿರ್ಮಾಣವಾಗಬೇಕಾದರೆ ಮೌಲ್ಯಯುತ ಶಿಕ್ಷಣ ಅಗತ್ಯ: ಸಚಿವ ರೈ

ವಿಟ್ಲ, ಆ.4: ಶೋಷಣೆ ಮುಕ್ತ ಸಮಾಜ ನಿರ್ಮಾಣವಾಗಬೇಕಾದರೆ ಮೌಲ್ಯಯುತ ಶಿಕ್ಷಣ ಅಗತ್ಯವಾಗಿದೆ. ಅದಕ್ಕಾಗಿ ಸರಕಾರ ವಿವಿಧೆಡೆ ಸರಕಾರಿ ಶಾಲಾ-ಕಾಲೇಜುಗಳನ್ನು ನಿರ್ಮಿಸುತ್ತಿದೆ. ವಿದ್ಯಾರ್ಥಿಗಳು ಹಾಗೂ ಪೋಷಕರು ಇದರ ಸದುಪಯೋಗವನ್ನು ಪಡೆದುಕೊಂಡು ಸುಸಂಸ್ಕೃತ ಸಮಾಜ ನಿರ್ಮಾಣದಲ್ಲಿ ಶ್ರಮಿಸಬೇಕಾಗಿದೆ ಎಂದು ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.
ಕನ್ಯಾನ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದಲ್ಲಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆಯಡಿಯಲ್ಲಿ ನಿರ್ಮಾಣಗೊಂಡ ನೂತನ ಕಟ್ಟಡವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಜಿ.ಪಂ. ಸದಸ್ಯ ಎಂ.ಎಸ್. ಮುಹಮ್ಮದ್ ಮಾತನಾಡಿ, ಸಚಿವರ ವಿಶೇಷ ಪ್ರಯತ್ನದಲ್ಲಿ ಕಾಲೇಜು ನಿರ್ಮಾಣಗೊಂಡಿದೆ. ಕಳೆದ ಎಂಟು ವರ್ಷದಲ್ಲಿ ಕನ್ಯಾನ, ಕರೋಪಾಡಿ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ, ಶಿಕ್ಷಣ ಕೇಂದ್ರ ಮೊದಲಾದವುಗಳು ನಡೆದಿದ್ದು, ಇದು ಸಚಿವರ ಸಾಧನೆಯಾಗಿದೆ ಎಂದು ಶ್ಲಾಘಿಸಿದರು.
ಇದೇ ವೇಳೆ ಕಾಲೇಜಿಗೆ ವಿವಿಧ ರೀತಿಯಲ್ಲಿ ಕೊಡುಗೆ ನೀಡಿದ ಡಿ.ಕೆ. ಲತೀಫ್ ಹಾಗೂ ಉಮ್ಮರ್ ಫಾರೂಕ್‌ರನ್ನು ಸನ್ಮಾನಿಸಲಾಯಿತು.
ಕನ್ಯಾನ ಗ್ರಾಮ ಪಂಚಾಯತ್‌ನಲ್ಲಿ 2.25 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ಸಾರ್ವಜನಿಕ ಶೌಚಾಲಯ, ಬಾಪೂಜಿ ಸೇವಾ ಕೇಂದ್ರ ಹಾಗೂ 14 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ಉದ್ಯೋಗ ಖಾತ್ರಿ ಕಟ್ಟಡವನ್ನು ಇದೇ ವೇಳೆ ಉದ್ಘಾಟಿಸಿದ ಸಚಿವರು ಪ್ರಾಕೃತಿಕ ವಿಕೋಪದಲ್ಲಿ ಬಿಡುಗಡೆಗೊಂಡ ಪರಿಹಾರ ಧನದ ಚೆಕ್‌ಗಳನ್ನು ವಿತರಿಸಿದರು.







