‘ಶಿಶುವಿನ ಆರೋಗ್ಯ ಸಂರಕ್ಷಣೆಗೆ ತಾಯಿ ಹಾಲು ಅಗತ್ಯ’
ಸ್ತನ್ಯಪಾನ ಜಾಗೃತಿ ಸಪ್ತಾಹ

ಮಡಿಕೇರಿ, ಆ.4: ಮಹಿಳೆಯರು ಸೌಂದರ್ಯದ ಮೇಲಿನ ಕಾಳಜಿಯಿಂದ ನವಜಾತ ಶಿಶುಗಳಿಗೆ ಎದೆ ಹಾಲುಣಿಸದೆ ನಿರ್ಲಕ್ಷ್ಯ ವಹಿಸಬಾರದೆಂದು ನಗರಸಭೆ ಅಧ್ಯಕ್ಷೆ ಬಂಗೇರಾ ಸಲಹೆ ನೀಡಿದ್ದಾರೆ.
ನಗರದ ಮಹದೇವಪೇಟೆಯ ಆರೋಗ್ಯ ಕೇಂದ್ರದಲ್ಲಿ ಗುರುವಾರ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನಗರ ಆರೋಗ್ಯ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಸ್ತನ್ಯಪಾನ ಜಾಗೃತಿ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ತಾಯಿಯ ಹಾಲು ಮಕ್ಕಳಿಗೆ ಉತ್ಕೃಷ್ಟ ಮತ್ತು ಆರೋಗ್ಯ ವರ್ಧಕ ಆಹಾರವಾಗಿದೆ. ಮಗು ಜನನವಾದ ಆರು ತಿಂಗಳು ತಾಯಿ ಹಾಲನ್ನು ಕಡ್ಡಾಯವಾಗಿ ಮಗುವಿಗೆ ಕೊಡುವ ಜವಾಬ್ದಾರಿ ಪ್ರತಿ ತಾಯಿಯಲ್ಲಿ ಇರಬೇಕು. ಮಗು ಹುಟ್ಟಿದ ಮೊದಲ ಆರು ತಿಂಗಳು ತಾಯಿಯ ಹಾಲು ಮಗುವಿಗೆ ಅಮೃತವಾಗಿದೆ. 6 ತಿಂಗಳ ಕಾಲ ತಾಯಿ ಹಾಲಿನ ವಿನಃ ಬೇರೆ ಯಾವ ಆಹಾರದ ಆವಶ್ಯಕತೆ ಇರುವುದಿಲ್ಲ. ಮಗುವಿನ ಬೆಳವಣಿಗೆಗೆ ಸಹಕಾರಿಯಾಗಿರುತ್ತದೆ. ಆದ್ದರಿಂದ 2 ವರ್ಷಗಳ ಕಾಲ ತಾಯಿ ತನ್ನ ಮಗುವಿಗೆ ಎದೆ ಹಾಲನ್ನು ಉಣಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ ಎಂದು ತಿಳಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಒ.ಆರ್.ಶ್ರೀರಂಗಪ್ಪ ಮಾತನಾಡಿ, ಪ್ರಪಂಚದಲ್ಲಿನ ಮೂರನೆಯ ಒಂದು ಭಾಗದಷ್ಟು ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ಒಂದರಿಂದ ಐದು ವರ್ಷದ ಶೇ.50 ರಷ್ಟು ಮಕ್ಕಳ ಮರಣಕ್ಕೆ ಅಪೌಷ್ಟಿಕತೆಯೇ ಕಾರಣವಾಗಿದೆ. ಮಗುವಿಗೆ ಮೊದಲ ಆರು ತಿಂಗಳು ಎದೆ ಹಾಲನ್ನು ಮಾತ್ರ ಕೊಡಬೇಕು. ಮಗು ಹುಟ್ಟಿದ ಅಧರ್ ಗಂಟೆಯೊಳಗೆ ಎದೆ ಹಾಲನ್ನು ಕೊಡಲು ಮುಂದಾಗಬೇಕು. ಇದರಿಂದ ಮಗುವಿಗೆ ಎಲ್ಲಾ ಪೌಷ್ಟಿಕಾಂಶ ದೊರೆಯುವಂತಾಗಿ ಆರೋಗ್ಯ ಜೀವನ ಪಡೆಯುತ್ತದೆ ಎಂದರು. ವಿಶ್ವ ಸ್ತನ್ಯಪಾನ ಸಪ್ತಾಹವು ಆಗಸ್ಟ್ ಮೊದಲ ವಾರದಲ್ಲಿ ನಡೆಯುತ್ತಿದ್ದು, ಮಕ್ಕಳಿಗೆ ಎದೆ ಹಾಲಿನ ಪ್ರಾಮುಖ್ಯತೆ ಹಾಗೂ ಚಿಕ್ಕ ಮಕ್ಕಳ ಪೂರಕ ಪೌಷ್ಟಿಕ ಆಹಾರದ ಬಗ್ಗೆ ತಾಯಂದಿರಿಗೆ ಹಾಗೂ ಸಂಬಂಧ ಪಟ್ಟವರಿಗೆ ತಿಳುವಳಿಕೆ ನೀಡುವಂತೆ ಆಗಬೇಕು. ಹೆಚ್ಚಿನದಾಗಿ ತಾಯಿ ಮತ್ತು ಮಗುವಿನ ಪೌಷ್ಟಿಕಾಂಶದ ಕೊರತೆಗೆ ಬಡತ
, ಮೂಢನಂಬಿಕೆ, ಅಜ್ಞಾನ ಹಾಗೂ ಆರೋಗ್ಯ ಶಿಕ್ಷಣದ ಕೊರತೆ ಇರುತ್ತದೆ. ಆದ್ದರಿಂದ ಹತ್ತಿರದ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಿ ಮಾಹಿತಿ ಪಡೆಯುವಂತೆ ಸಲಹೆ ನೀಡಿದರು. ಆರೋಗ್ಯಾಧಿಕಾರಿ ಡಾ.ದೇವಿ ಆನಂದ್ ಅವರು ಮಾತನಾಡಿ, ಇತ್ತೀಚಿನ ಆಧುನೀಕರಣ, ಕೈಗಾರೀಕರಣ-ವ್ಯಾಪಾರೀಕರಣ ದಿನಗಳಲ್ಲಿ ಮಕ್ಕಳಿಗೆ ತಾಯಂದಿರು ಹಾಲುಣಿಸುವಲ್ಲಿ ಹೆಚ್ಚಿನ ನಿಗಾವಹಿಸದಿರುವುದು ಸಮೀಕ್ಷೆಯಿಂದ ಕಂಡು ಬಂದಿದೆ. ಹಲವಾರು ಬಾರಿ ಮೂಢನಂಬಿಕೆಗಳು, ಸಂಪ್ರದಾಯಗಳು, ಅಜ್ಞಾನ ಇದಕ್ಕೆ ಕಾರಣವಾಗಿದೆ. ಮಕ್ಕಳ ಮರಣ ಪ್ರಮಾಣವನ್ನ್ನು ಕಡಿಮೆ ಮಾಡುವಲ್ಲಿ ತಾಯಿ ಹಾಲು ಪ್ರಮುಖ ಪಾತ್ರ ವಹಿಸಿದ್ದು, ಈ ಬಗ್ಗೆ ಅಗತ್ಯ ಮಾಹಿತಿ ಪಡೆಯುವುದು ಆವಶ್ಯಕಾಗಿದೆ ಎಂದರು.
ಈ ಸಂದರ್ಭದಲ್ಲಿ ಡಾ.ರವಿಕುಮಾರ್, ಡಾ.ನೀನಾ ಸುಬ್ಬಯ್ಯ, ಮತ್ತಿತರರು ಉಪಸ್ಥಿತರಿದ್ದರು.







