ಬಿಹಾರ ಟಾಪರ್‌ಗಳ ಹಗರಣದಲ್ಲಿ ಇನ್ನೋರ್ವ ರ್ಯಾಂಕ್ ವಿಜೇತನ ಸೆರೆ
ಪಾಟ್ನಾ,ಆ.4: ಇಂಟರ್ ಮೀಡಿಯೇಟ್ ಪರೀಕ್ಷೆಯಲ್ಲಿ ಬಿಹಾರದ ಬಿಷುನ್ ರಾಯ್ ಕಾಲೇಜಿನ ಇನ್ನೋರ್ವ ರ್ಯಾಂಕ್ ವಿಜೇತನನ್ನು ಟಾಪರ್‌ಗಳ ಹಗರಣದ ತನಿಖೆಯನ್ನು ನಡೆಸುತ್ತಿರುವ ಪಾಟ್ನಾ ಪೊಲೀಸ್‌ನ ವಿಶೇಷ ತನಿಖಾ ತಂಡ(ಸಿಟ್)ವು ಬಂಧಿಸಿದೆ.
ವಿಜ್ಞಾನ ವಿಭಾಗದಲ್ಲಿ ಮೂರನೇ ರ್ಯಾಂಕ್ ಗಳಿಸಿರುವ ರಾಹುಲ್ ಕುಮಾರ್‌ನನ್ನು ಬುಧವಾರ ಅಝಮ್‌ಪುರ ಗ್ರಾಮದಲ್ಲಿನ ಆತನ ಸೋದರಮಾವನ ಮನೆಯಿಂದ ಬಂಧಿಸಲಾಗಿದ್ದು, ಸ್ಥಳೀಯ ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನವನ್ನು ವಿಧಿಸಿದೆ ಎಂದು ಸಿಟ್ ಸದಸ್ಯರೂ ಆಗಿರುವ ನಗರ ಎಸ್‌ಪಿ ಚಂದನ್ ಕುಷ್ವಾಹಾ ತಿಳಿಸಿದರು.
ಕುಮಾರ್‌ಗೆ ರ್ಯಾಂಕ್ ಬರುವಂತಾಗಲು ಐದು ಲಕ್ಷ ರೂ. ಕೈಬದಲಾಗಿದ್ದವು ಎನ್ನುವುದು ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ ಎಂದರು.
ಟಾಪರ್‌ಗಳ ಹಗರಣದಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಹೆಸರಿಸಲಾಗಿರುವ ಕಾಲೇಜಿನ ನಾಲ್ವರು ರ್ಯಾಂಕ್ ವಿಜೇತರಲ್ಲಿ ಕುಮಾರ ಓರ್ವನಾಗಿದ್ದ. ಕಲಾ ವಿಭಾಗದಲ್ಲಿ ಪ್ರಥಮ ರ್ಯಾಂಕ್ ವಿಜೇತೆ ರುಬಿ ರಾಯ್‌ಳನ್ನು ಈಗಾಗಲೇ ಬಂಧಿಸಲಾಗಿದ್ದು, ಇನ್ನಿಬ್ಬರು ಆರೋಪಿಗಳಾದ ಶಾಲಿನಿ ರಾಯ್ ಮತ್ತು ಸೌರವ್ ಶ್ರೇಷ್ಠ ಅವರನ್ನು ಇನ್ನೂ ಬಂಧಿಸಲಾಗಿಲ್ಲ.





