ನಾಳೆ ರಿಯೋದಲ್ಲಿ ಕ್ರೀಡಾ ಹಬ್ಬಕ್ಕೆ ಚಾಲನೆ
ಭಾರತದಿಂದ ದಾಖಲೆ ಸಂಖ್ಯೆಯಲ್ಲಿ ಪದಕ ಬೇಟೆಗೆ ಹೊರಟ ಕ್ರೀಡಾಪಟಗಳು

ರಿಯೋ ಡಿ ಜನೈರೊ, ಅ.4:ಬ್ರೆಝಿಲ್‌ನ ರಿಯೋ ಡಿ ಜನೈರೊದಲ್ಲಿ ಇಪ್ಪತ್ತೇಳನೆ ಆವೃತ್ತಿಯ ಒಲಿಂಪಿಕ್ಸ್ ಕ್ರೀಡಾ ಕೂಟ ಆ.5ರಿಂದ 21ರ ತನಕ ನಡೆಯಲಿದೆ. ಜಾಗತಿಕ ಮಟ್ಟದಲ್ಲಿ ಫುಟ್ಬಾಲ್‌ನಲ್ಲಿ ಅನನ್ಯ ಸಾಧನೆಗೈದಿರುವ ಬ್ರೆಝಿಲ್ ದೇಶದಲ್ಲಿ ಮೊದಲ ಬಾರಿ ಒಲಿಂಪಿಕ್ಸ್ ಕೂಟ ನಡೆಯುತ್ತಿದೆ.ಒಲಿಂಪಿಕ್ಸ್‌ನ ಆತಿಥ್ಯ ವಹಿಸಿಕೊಂಡಿರುವ ರಿಯೋದಲ್ಲಿ ಒಲಿಂಪಿಕ್ಸ್ ಜ್ವರ ಏರಿದೆ.
ಭಾರತದಿಂದ ಒಲಿಂಪಿಕ್ಸ್‌ಗೆ ದಾಖಲೆ ಸಂಖ್ಯೆಯಲ್ಲಿ ಕ್ರೀಡಾಪಟುಗಳು ರಿಯೋಗೆ ಪದಕದ ಬೇಟೆಗೆ ಹೊರಟಿದ್ದಾರೆ. ಈ ಬಾರಿ 118 ಕ್ರೀಡಾಪಟುಗಳು ಪದಕ ಬೇಟೆಗೆ ನಡೆಲಿದ್ದಾರೆ.
ಡೋಪಿಂಗ್ ಟೆಸ್ಟ್‌ನಿಂದ ಇಬ್ಬರು ಅಥ್ಲೀಟ್‌ಗಳು ಸ್ಪರ್ಧೆಯಿಂದ ದೂರ ಸರಿಯುವಂತಾಗಿದೆ. ಶಾಟ್‌ಪುಟ್ ಪಟು ಇಂದ್ರಜೀತ್ ಸಿಂಗ್ ಮತ್ತು 200 ಮೀಟರ್ ಓಟಗಾರ ಧರ್ಮವೀರ್ ಸಿಂಗ್ ಡೋಪಿಂಗ್ ಟೆಸ್ಟ್‌ನಲ್ಲಿ ಅನುತ್ತೀರ್ಣಗೊಂಡ ಕಾರಣಕ್ಕಾಗಿ ರಿಯೋ ಒಲಿಂಪಿಕ್ಸ್‌ಗೆ ಟಿಕೆಟ್ ಕೈತಪ್ಪಿದೆ. ಕುಸ್ತಿಪಟು ನರಸಿಂಗ್ ಯಾದವ್‌ಗೆ ನಾಡಾ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಗ್ರೀನ್ ಸಿಗ್ನಲ್ ನೀಡಿದ್ದರೂ , ವಾಡಾ ಅನುಮತಿ ನೀಡಲಿಲ್ಲ. ಈ ಕಾರಣದಿಂದಾಗಿ ಅವರ ಸ್ಪರ್ಧಿಸುವುದು ದೃಢಪಟ್ಟಿಲ್ಲ.
1896ರಲ್ಲಿ ಅಥೆನ್ಸ್‌ನಲ್ಲಿ ಆಧುನಿಕ ಒಲಿಂಪಿಕ್ಸ್ ಆರಂಭಗೊಂಡ ಬಳಿಕ ಭಾರತ ಈ ತನಕ ನಡೆದಿರುವ 27 ಒಲಿಂಪಿಕ್ಸ್‌ಗಳ ಪೈಕಿ 23 ಒಲಿಂಪಿಕ್ಸ್‌ಗಳಲ್ಲಿ ಭಾಗವಹಿಸಿದೆ. ಒಲಿಂಪಿಕ್ಸ್‌ನಲ್ಲಿ ಭಾರತದ ನಿರ್ವಹಣೆ ತೃಪ್ತಿಕರವಾಗಿಲ್ಲ. ಭಾರತದ ಕ್ರೀಡಾಪಟುಗಳು ಕಳೆದ ನೂರ ಹದಿನೈದು ವರ್ಷಗಳಲ್ಲಿ ನಡೆದಿರುವ ಒಲಿಂಪಿಕ್ಸ್‌ನಲ್ಲಿ ಬೇರೆ ಬೇರೆ ಕ್ರೀಡೆಗಳಲ್ಲಿ ಪಾಲ್ಗೊಂಡಿದ್ದರೂ ಪದಕ ಬಾಚಿದ್ದು ಕೇವಲ ಇಪ್ಪತ್ತಾರು.
1900ರಿಂದ 2012ರ ತನಕ ನಡೆದ ಸಮ್ಮರ್ ಒಲಿಂಪಿಕ್ಸ್‌ನಲ್ಲಿ ಭಾರತದ ಪುರುಷರ ಹಾಕಿ ತಂಡ 11 ಪದಕಗಳನ್ನು ಬಾಚಿಕೊಂಡಿತ್ತು. ಇದರಲ್ಲಿ ಚಿನ್ನ 8, ಬೆಳ್ಳಿ 1 ಮತ್ತು 2 ಕಂಚು ಪದಕ ಹಾಕಿ ಮೂಲಕ ಭಾರತದ ಖಾತೆಗೆ ಜಮೆ ಆಗಿತ್ತು ಎನ್ನುವುದು ಇಲ್ಲಿ ಗಮನಿಸತಕ್ಕ ವಿಚಾರವಾಗಿದೆ.1900ರಲ್ಲಿ ಮೊದಲ ಬಾರಿ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಾಗ ಭಾರತ ಬ್ರಿಟಿಷರ ಆಡಳಿತಕ್ಕೆ ಒಳಪಟ್ಟಿತು. 1900ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ಎರಡನೆ ಸಮ್ಮರ್ ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿ ಪ್ರವೇಶ ಪಡೆದು ಅಥ್ಲೇಟಿಕ್ಸ್‌ನಲ್ಲಿ 2 ಬೆಳ್ಳಿ ಪದಕಗಳನ್ನು ಬಾಚಿಕೊಂಡಿತ್ತು. ಪುರುಷರ 200 ಮೀಟರ್ ಓಟ ಮತ್ತು ಹರ್ಡಲ್ಸ್‌ನಲ್ಲಿ ನಾರ್ಮನ್ ಪಿರಿಟ್ಚಾರ್ಡ್ ವೈಯಕ್ತಿಕ ಎರಡು ಬೆಳ್ಳಿ ಪದಕಗಳನ್ನು ಗೆದ್ದು ,ಭಾರತದ ಖಾತೆಗೆ ಮೊದಲ ಪದಕಗಳನ್ನು ಜಮೆ ಮಾಡಿದ್ದರು. ಕೋಲ್ಕತಾದ ನಿವಾಸಿ ನಾರ್ಮನ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಭಾರತದ ಮೊದಲ ಅಥ್ಲೀಟ್. ಅಷ್ಟು ಮಾತ್ರವಲ್ಲ ಏಷ್ಯಾದಿಂದ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಮೊದಲ ಅಥ್ಲೀಟ್ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ನಾರ್ಮನ್ ಒಲಿಂಪಿಕ್ಸ್‌ನ 200 ಮೀಟರ್ ಓಟದಲ್ಲಿ ಅಮೆರಿಕದ ವಾಲ್ಟರ್ ಟೆವಾಸ್ಕ್‌ಬರಿ ವಿರುದ್ಧ ಹಿನ್ನೆಡೆ ಅನುಭವಿಸಿ ಎರಡನೆ ಸ್ಥಾನದೊಂದಿಗೆ ಬೆಳ್ಳಿ ಪದಕ ಪಡೆದರು. 200 ಮೀಟರ್ ಹರ್ಡಲ್ಸ್‌ನಲ್ಲಿ ಅಮೆರಿಕದ ದಂತಕಥೆ ಅಲ್ವಿನ್ ಕ್ರೆನಿಂಝಿಲಿಯನ್ ವಿರುದ್ಧ ಸೋತು ಎರಡನೆ ಸ್ಥಾನದೊಂದಿಗೆ ರಜತ ಪದಕ ಪಡೆದು ಭಾರತದ ಪರ ಹೊಸ ಇತಿಹಾಸ ನಿರ್ಮಿಸಿದ್ದರು.
2004ರಲ್ಲಿ ಅಥೆನ್ಸ್‌ನಲ್ಲಿ ರಾಜ್ಯವರ್ಧನ್ ಸಿಂಗ್ ರಾಥೋಡ್ ಶೂಟಿಂಗ್‌ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡು ಒಲಿಂಪಿಕ್‌ನ ಇತಿಹಾಸದಲ್ಲಿ ಭಾರತದ ಪರ ನಾಲ್ಕನೆ ಬೆಳ್ಳಿ ಜಮೆ ಮಾಡಿದ ದಾಖಲೆ ಬರೆದಿದ್ದರು. ಅದು ಭಾರತಕ್ಕೆ 2004ರ ಒಲಿಂಪಿಕ್ಸ್‌ನಲ್ಲಿ ದೊರೆತ ಏಕೈಕ ಪದಕ ಆಗಿತ್ತು.
1928ರಲ್ಲಿ ಆ್ಯಂಸ್ಟರ್ಡ್ಯಾಮ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಭಾರತದ ಹಾಕಿ ತಂಡ ಮೊದಲ ಚಿನ್ನ ಪಡೆಯಿತು. ಆ ಬಳಿಕ ವೈಯಕ್ತಿಕ ವಿಭಾಗದಲ್ಲಿ ಚಿನ್ನಕ್ಕಾಗಿ ಭಾರತ 80 ವರ್ಷ ಕಾಯಬೇಕಾಯಿತು. 2008ರಲ್ಲಿ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಶೂಟರ್ ಅಭಿನವ್ ಬಿಂದ್ರಾ ಮೊದಲ ಚಿನ್ನದ ಕೊಡುಗೆ ನೀಡಿದ್ದರು.
ಒಲಿಂಪಿಕ್‌ನಲ್ಲಿ ಭಾರತ ಪಡೆದ 9 ಚಿನ್ನದ ಪದಕಗಳಲ್ಲಿ 8 ಪದಕಗಳನ್ನು ಭಾರತದ ಹಾಕಿ ತಂಡ ನೀಡಿದೆ ಎನ್ನುವುದು ಇಲ್ಲಿ ವಿಶೇಷ. ಅಭಿನವ್ ಬಿಂದ್ರಾ ಭಾರತದ ಚಿನ್ನದ ಪದಕದ ಸಾಧನೆಯನ್ನು 9ಕ್ಕೆ ಏರಿಸಿದ್ದರು. 1952ರ ಒಲಿಂಪಿಕ್ಸ್‌ನಲ್ಲಿ ಖಾಸಾಬಾ ದಾದಾ ಸಾಹೇಬ್ ಜಾದೇವ್(ಕುಸ್ತಿ), 1996 ಲಿಯಾಂಡರ್ ಪೇಸ್ (ಟೆನಿಸ್), 2000 ಕೆ. ಮಲ್ಲೇಶ್ವರಿ (ಭಾರ ಎತ್ತುವಿಕೆ), 2008ರಲ್ಲಿ ಸುಶೀಲ್ ಕುಮಾರ್(ಕುಸ್ತಿ) ಮತ್ತು ವಿಜೇಂದೆರ್ ಸಿಂಗ್(ಬಾಕ್ಸಿಂಗ್) ಕಂಚು ಗೆದ್ದುಕೊಂಡಿದ್ದರು.
ರಿಯೋದಲ್ಲಿ ಪದಕ ದ್ವಿಗುಣ ನಿರೀಕ್ಷೆ: 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಭಾರತದ 56 ಕ್ರೀಡಾಪಟುಗಳು ಸ್ಪರ್ಧಿಸಿದ್ದರು. ಆದರೆ ಪದಕ ಸಿಕ್ಕಿದ್ದು 3. ಶೂಟಿಂಗ್‌ನಲ್ಲಿ ಅಭಿನವ್ ಬಿಂದ್ರಾ ಚಿನ್ನ ಜಯಿಸಿದ್ದರು. ಬಾಕ್ಸರ್ ವೀಜೇಂದ್ರ ಕುಮಾರ್ ಮತ್ತು ಕುಸ್ತಿಯಲ್ಲಿ ಸುಶೀಲ್ ಕುಮಾರ್ ಕಂಚು ಪಡೆದಿದ್ದರು. 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ 6 ಪದಕ ಸಿಕ್ಕಿತು. ಈ ಬಾರಿ ಮತ್ತೆ ಅದು ದ್ವಿಗುಣಗೊಳ್ಳುವ ನಿರೀಕ್ಷೆ ಇದೆ.ಈ ಬಾರಿ 54 ಮಹಿಳೆಯರು ಸ್ಪರ್ಧಿಸುತ್ತಿರುವುದು ದಾಖಲೆಯಾಗಿದೆ.
ಶೂಟಿಂಗ್‌ನಲ್ಲಿ ಪದಕದ ಭರವಸೆ ಭಾರತದ ಪದಕ ನಿರೀಕ್ಷೆ ಇರುವ ಅಗ್ರ ಕ್ರೀಡೆ ಶೂಟಿಂಗ್. ಕಳೆದ 3 ಒಲಿಂಪಿಕ್ಸ್ ಗಳಲ್ಲೂ ಶೂಟರ್‌ಗಳು ಭಾರತದ ಖಾತೆಗೆ ಪದಕದ ಕೊಡುಗೆ ನೀಡಿದ್ದಾರೆ. ಒಟ್ಟು ನಾಲ್ಕು ಪದಕಗಳು ಬಂದಿವೆ. ಬೀಜಿಂಗ್ ಸ್ವರ್ಣ ಜಯಿಸಿದ ಅಭಿನವ್ ಬಿಂದ್ರಾ, ಲಂಡನ್ ಗೇಮ್ಸ್‌ನಲ್ಲಿ ಕಂಚು ವಿಜೇತ ಗಗನ್ ನಾರಂಗ್ ಅವರಂತಹ ಅನುಭವಿಗಳ ಜತೆಗೆ ಜಿತು ರಾಯ್ ಮಾನವ್‌ಜಿತ್ ಸಿಂಗ್ ಸಂಧು ಮತ್ತು ಕನ್ನಡಿಗರ ಪ್ರಕಾಶ್ ನಂಜಪ್ಪ ಸ್ಪರ್ಧಾ ಕಣದಲ್ಲಿದ್ದಾರೆ. ಹೀನಾ ಸಿಧು ಅವರೊಂದಿಗೆ ಮಹಿಳಾ ಶೂಟರ್‌ಗಳಾದ ಅಯೋನಿಕ್ ಪೌಲ್ ಮತ್ತು ಅಪೂರ್ವಿ ಚಾಂಡೆಲಾ ಇದ್ದಾರೆ. ಒಟ್ಟು 12 ಶೂಟರ್‌ಗಳು ಸ್ಪರ್ಧಾ ಕಣದಲ್ಲಿದ್ದಾರೆ. ಬಿಂದ್ರಾಗೆ ಇದು ಕೊನೆಯ ಒಲಿಂಪಿಕ್ಸ್: ಅಭಿನವ್ ಬಿಂದ್ರಾ ಐದನೆ ಬಾರಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಅವರ ಪಾಲಿಗೆ ಇದು ಕೊನೆಯ ಒಲಿಂಪಿಕ್ಸ್. ಅವರು ಉದ್ಘಾಟನಾ ಸಮಾರಂಭದಲ್ಲಿ ಭಾರತ ತಂಡದ ನೇತೃತ್ವ ವಹಿಸಿ ತ್ರಿವರ್ಣ ಧ್ವಜವನ್ನು ಎತ್ತಿ ಹಿಡಿದು ಹೆಜ್ಜೆಯಿರಿಸಲಿದ್ದಾರೆ.
ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚು ಜಯಿಸಿದ ಶೂಟರ್ ಗಗನ್ ನಾರಂಗ್ ನಾಲ್ಕನೆ ಬಾರಿ ಒಲಿಂಪಿಕ್ಸ್‌ನಲ್ಲಿ ಪದಕದ ಬೇಟೆಗೆ ಹೊರಟಿದ್ದಾರೆ. ಅಥ್ಲೆಟಿಕ್ಸ್‌ನಲ್ಲಿ ಶೂನ್ಯ ಸಂಪಾದನೆ ಅಥ್ಲೆಟಿಕ್ಸ್‌ನಲ್ಲಿ ಈ ವರೆಗೂ ಸ್ವತಂತ್ರ ಭಾರತಕ್ಕೆ ಪದಕ ಗೆಲ್ಲಲು ಸಾಧ್ಯವಾಗಿಲ್ಲ.ಟ್ರಾಕ್ ಆ್ಯಂಡ್ ರೋಡ್ ಇವೆಂಟ್‌ನಲ್ಲಿ ಒಟ್ಟು 34 ಮಂದಿ ಸ್ಪರ್ಧಿಸುತ್ತಿದ್ದಾರೆ.ಸ್ವತಂತ್ರ ಭಾರತಕ್ಕೆ ಒಲಿಂಪಿಕ್ಸ್‌ನ ಅಥ್ಲೀಟಿಕ್ಸ್ ವಿಭಾಗದಲ್ಲಿ ಈ ವರೆಗೆ ಪದಕ ಗೆಲ್ಲಲು ಸಾಧ್ಯವಾಗಿಲ್ಲ. ಪ್ರತಿ ಒಲಿಂಪಿಕ್ಸ್‌ನಲ್ಲೂ ಭಾರತದ ಅಥ್ಲೀಟ್‌ಗಳು ಪ್ರಯತ್ನ ನಡೆಸುತ್ತಲೇ ಇದ್ದಾರೆ. ಅಥ್ಲೀಟ್‌ನಲ್ಲಿ ಅನನ್ಯ ಸಾನೆಗೈದು ಒಲಿಂಪಿಕ್ಸ್‌ಗೆ ತೆರಳಿದ್ದ ಮಿಲ್ಕಾ ಸಿಂಗ್, ಪಿ.ಟಿ. ಉಷಾ ಮತ್ತು ಅಂಜು ಬಾಬಿ ಜಾರ್ಜ್‌ಗೆ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲು ಸಾಧ್ಯವಾಗಿಲ್ಲ. ಭಾರತದ ಅಥ್ಲೀಟ್‌ಗಳಿಗೆ ಸೆಮಿಫೈನಲ್‌ಗೆ ಮತ್ತು ಫೈನಲ್‌ಗೆ ಪ್ರವೇಶ ಗಿಟ್ಟಿಸಿಕೊಳ್ಳುವುದು ಸವಾಲಾಗಿದೆ. ಡಿಸ್ಕಸ್ ಎಸೆತಗಾರ ವಿಕಾಸ್ ಗೌಡ ಮೂರನೆ ಬಾರಿ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ. ಅವರಿಂದ ಪದಕ ನಿರೀಕ್ಷಿಸಲಾಗಿದೆ. ಬ್ಯಾಡ್ಮಿಂಟನ್‌ನಲ್ಲಿ ಸೈನಾ ಮೇಲೆ ಭರವಸೆ
ಬ್ಯಾಡ್ಮಿಂಟನ್‌ನಲ್ಲಿ ಸ್ಪರ್ಧೆಯಲ್ಲಿ ಮೂವರು ಪುರುಷ ಮತ್ತು ನಾಲ್ವರು ಮಹಿಳಾ ಆಟಗಾರ್ತಿಯರು ಸ್ಪರ್ಧಿಸುತ್ತಿದ್ದಾರೆ. ಸೈನಾ ನೆಹ್ವಾಲ್ ಮೂರನೆ ಬರಿ ಒಲಿಂಪಿಕ್ಸ್‌ನಲ್ಲಿ ಪದಕದ ಬೇಟೆಗೆ ಹೊರಟಿದ್ದಾರೆ. ಪುರುಷರ ಬಾಡ್ಮಿಂಟನ್‌ನಲ್ಲಿ ಕೆ.ಶ್ರೀಕಾಂತ್ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ.
ಅವಕಾಶ ವಂಚಿತ ಮೇರಿ ಕೋಮ್
ಬಾಕ್ಸಿಂಗ್‌ನಲ್ಲಿ ಭಾರತದ 3 ಮಂದಿ ಸ್ಪರ್ಧಿಸುತ್ತಿದ್ದಾರೆ. ಆದರೆ ಕಳೆದ ಬಾರಿಯ ಒಲಿಂಪಿಕ್ಸ್‌ನಲ್ಲಿ ಕಂಚು ಜಯಿಸಿದ್ದ ಮಹಿಳಾ ಬಾಕ್ಸರ್ ಮೇರಿ ಕೋಮ್ ಪ್ರವೇಶ ವಂಚಿತಗೊಂಡಿದ್ದಾರೆ. 2012ರಲ್ಲಿ ಮಹಿಳಾ ಬಾಕ್ಸಿಂಗ್‌ನಲ್ಲಿ ಮೇರಿ ಮಾತ್ರ ಸ್ಪರ್ಧಿಸಿದ್ದರು.
ಮತ್ತೆ ಹಾಕಿ ತಂಡ ಕಣಕ್ಕೆ ಒಂದೊಮ್ಮೆ ವಿಶ್ವದ ಬಲಿಷ್ಠ ತಂಡವಾಗಿ ಒಲಿಂಪಿಕ್ಸ್‌ನಲ್ಲಿ ಚಿನ್ನ ಬಾಚಿಕೊಳ್ಳುತ್ತಿದ್ದ ಭಾರತದ ಪುರುಷರ ಹಾಕಿ ತಂಡ ಮತ್ತೊಮ್ಮೆ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದು, ಸ್ವರ್ಣ ಗೆಲ್ಲುವ ಸಂಕಲ್ಪದೊಂದಿಗೆ ರಿಯೋ ಒಲಿಂಪಿಕ್ಸ್‌ಗೆ ತಯಾರಿ ನಡೆಸುತ್ತಿದೆ.
1928, 1932, 1936, 1948, 1952, 1956, 1964, 1980 ಹೀಗೆ 8ಬಾರಿ ಭಾರತದ ಪುರುಷರ ಹಾಕಿ ತಂಡ ಒಲಿಂಪಿಕ್ಸ್‌ನಲ್ಲಿ ಸ್ವರ್ಣ ಪದಕ ಜಯಿಸಿತ್ತು. 1960ರಲ್ಲಿ ಬೆಳ್ಳಿ, 1968 ಮತ್ತು 1972ರಲ್ಲಿ ಕಂಚು ಪಡೆದಿತ್ತು. 1948ರಲ್ಲಿ ಲಂಡನ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಸ್ವತಂತ್ರ ಭಾರತದ ಮೊದಲ ಹಾಕಿ ತಂಡ ಪಾಲ್ಗೊಂಡು ಸ್ವರ್ಣ ಗೆದ್ದುಕೊಂಡಿತ್ತು.
ಒಂದೊಮ್ಮೆ ಹಾಕಿಯಲ್ಲಿ ವಿಶ್ವದ ಬಲಿಷ್ಠ ತಂಡಗಳಲ್ಲಿ ಒಂದಾಗಿತ್ತು.ಭಾರತ 2008ರ ಬೀಜಿಂಗ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿತ್ತು. 1980ರಲ್ಲಿ ಮಾಸ್ಕೋ ಗೇಮ್ಸ್‌ನಲ್ಲಿ ಭಾರತ 8ನೆ ಮತ್ತು ಕೊನೆಯ ಒಲಿಂಪಿಕ್ಸ್ ಚಿನ್ನ ಬಾಚಿಕೊಂಡಿತ್ತು. ಆ ಬಳಿಕ 36 ವರ್ಷಗಳಲ್ಲಿ ಭಾರತದ ಹಾಕಿಗೆ ಪದಕ ಗೆಲ್ಲಲು ಸಾಧ್ಯವಾಗಿಲ್ಲ.
ಮಹಿಳಾ ಹಾಕಿ ತಂಡ ಈ ಬಾರಿ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ಟಿಕೆಟ್ ಪಡೆದಿದೆ.
ಬಿಲ್ಲುಗಾರಿಕೆಯಲ್ಲಿ ಭಾರತದ ಬಿಲ್ಲುಗಾರರಿಗೆ ಇದುವರೆಗೆ ಒಲಿಂಪಿಕ್ಸ್ ಪದಕ ಗೆಲ್ಲಲು ಸಾಧ್ಯವಾಗಿಲ್ಲ. ಆದರೆ ಈ ಬಾರಿ ಮಹಿಳಾ ಆರ್ಚರಿ ತಂಡ ಪದಕ ಗೆಲ್ಲುವ ನಿಟ್ಟಿನಲ್ಲಿ ಕಠಿಣ ಪ್ರಯತ್ನ ನಡೆಸಿದೆ. ಈ ವಿಭಾಗದಲ್ಲಿ ನಾಲ್ವರು ಸ್ಪರ್ಧಿಸುತ್ತಿದ್ದಾರೆ. ಅತಾನು ದಾಸ್, ದೀಪಿಕಾ ಕುಮಾರಿ, ಲಕ್ಷ್ಮೀರಾಣಿ ಮಾಂಝಿ, ಬಾಂಬೇಲಾ ದೇವಿ ಕಣದಲ್ಲಿರುವ ಬಿಲ್ಲುಗಾರರು. ಜುಡೋದಲ್ಲಿ ಓರ್ವ ಮಹಿಳೆ
ಜುಡೋದಲ್ಲಿ ಭಾರತದ ಏಕೈಕ ಸ್ಪರ್ಧಿ ಭಾಗವಹಿಸುತ್ತಿದ್ದು, ಅವರು ಅವತಾರ್ ಸಿಂಗ್. ಆದರೆ ಅವರ ಸ್ಪರ್ಧೆಯಲ್ಲೇ ಸಮಾಧಾನ ಕಾಣಬಹುದಾಗಿದೆ.
ಗಾಲ್ಫ್‌ನಂತೆ ಜುಡೋದಲ್ಲೂ ಏಕೈಕ ಸ್ಪರ್ಧಿ
ಹಲವು ವರ್ಷಗಳ ಬಳಿಕ ಒಲಿಂಪಿಕ್ಸ್‌ನಲ್ಲಿ ಸ್ಥಾನ ಪಡೆದಿರುವ ಗಾಲ್ಫ್‌ನಲ್ಲಿ ಭಾರತ ಉತ್ತಮ ನಿರ್ವಹಣೆಯನ್ನಷ್ಟೇ ನಿರೀಕ್ಷಿಸಬಹುದಾಗಿದೆ.
ಜಿಮ್ನಾಸ್ಟಿಕ್ಸ್‌ನಲ್ಲಿ ಭಾರತದ ಮೊದಲ ಮಹಿಳೆ ಒಲಿಂಪಿಕ್ಸ್‌ನ ಜಿಮ್ನಾಸ್ಟಿಕ್‌ನಲ್ಲಿ ಭಾರತದ ಮಹಿಳಾ ಸಾಧಕಿಯೊಬ್ಬರು ಸ್ಪರ್ಧಿಸುತ್ತಿದ್ದಾರೆ. ಅವರು ತ್ರಿಪುರದ ಜಿಮ್ನಾಸ್ಟ್ ದೀಪಾ ಕರ್ಮಾಕರ್
ರೋಯಿಂಗ್
ಭಾರತದ ಏಕೈಕ ನಾವಿಕ ರಿಯೋಗೆ ತೆರಳಿದ್ದಾರೆ. ಅವರು ದತ್ತು ಬಾಬನ್ ಭೋಕನಲ್ (ಸಿಂಗಲ್ಸ್ ಸ್ಕಲ್ಸ್)
ಟೇಬಲ್ ಟೆನಿಸ್‌ನಲ್ಲಿ ಅದೃಷ್ಟ ಪರೀಕ್ಷೆ ಟೇಬಲ್ ಟೆನಿಸ್‌ನಲ್ಲಿ ಭಾರತ ಮತ್ತೊಮ್ಮೆ ಅದೃಷ್ಟ ಪರೀಕ್ಷೆ ನಡೆಸಲಿದ್ದು, ಶರತ್ ಕಮಲ್ ಅಚಂತ, ಸೌಮ್ಯಜಿತ್ ಘೋಷ್ (ಪುರುಷರ ಸಿಂಗಲ್ಸ್), ಮಾನಿಕಾ ಬಾತ್ರ, ಮೌಮಾ ದಾಸ್ (ಮಹಿಳಾ ಸಿಂಗಲ್ಸ್) ಕಣದಲ್ಲಿದ್ದಾರೆ.
ಈಜು ಸ್ಪರ್ಧೆಯಲ್ಲಿ ಇಬ್ಬರು
ಈಜು ಸ್ಪರ್ಧೆಯಲ್ಲಿ ಭಾರತದ ಸಾಜನ್ ಪ್ರಕಾಶ್ (200 ಮೀ.ಬಟರ್‌ಫ್ಲೈ), ಶಿವಾನಿ ಕಟಾರಿಯಾ (ಮಹಿಳೆಯರ 200 ಮೀ. ಫ್ರೀಸ್ಟೈಲ್) ಕಣದಲ್ಲಿದ್ದಾರೆ.
ಕುಸ್ತಿಗೆ ಡೋಪಿಂಗ್ ಕಳಂಕ
ಒಲಿಂಪಿಕ್ಸ್‌ನಲ್ಲಿ ಸತತ ಎರಡು ಬಾರಿ ಪದಕ ಜಯಿಸಿದ್ದ ಭಾರತದ ಸುಶೀಲ್ ಕುಮಾರ್‌ಗೆ ಮೂರನೆ ಬಾರಿ ಒಲಿಂಪಿಕ್ಸ್‌ಗೆ ಟಿಕೆಟ್ ಪಡೆಯುವಲ್ಲಿ ವಿಫಲರಾಗಿದ್ಧಾರೆ. ನರಸಿಂಗ್ ಯಾದವ್ ಟಿಕೆಟ್ ಪಡೆದರೂ ಡೋಪಿಂಗ್ ಪರೀಕ್ಷೆಯಲ್ಲಿ ಅನುರ್ತ್ತೀಣಗೊಂಡ ಹಿನ್ನೆಲೆಯಲ್ಲಿ ತೊಂದರೆ ಅನುಭವಿಸಿದ್ದಾರೆ.
ವೇಟ್ ಲಿಫ್ಟಿಂಗ್‌ನಲ್ಲಿ ಭಾರತದ ಇಬ್ಬರು ಕಣದಲ್ಲಿ ಕ್ರೀಡಾಪಟುಗಳು ಸತೀಶ್ ಶಿವಲಿಂಗಂ (77 ಕೆಜಿ ವಿಭಾಗ), ಸೈಖೋಮ್ ಮಿರಾಬಾಯಿ ಚಾನು (ಮಹಿಳೆಯರ 48 ಕೆಜಿ ವಿಭಾಗ) ಸ್ಪರ್ಧಿಸುತ್ತಿದ್ದಾರೆ.
,,,,,,,,,,,,,,,,







