ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಕಟ್ಟಡ ಕಾಮಗಾರಿಯಲ್ಲಿ ಅವ್ಯವಹಾರ: ಸಚಿವ ಬಸವರಾಜ ರಾಯರೆಡ್ಡಿ

ಚಿಕ್ಕಬಳ್ಳಾಪುರ, ಆ.4: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಚಿಕ್ಕಬಳ್ಳಾಪುರ ಶಾಖೆಯ ಕಟ್ಟಡಗಳ ಕಾಮಗಾರಿಯನ್ನು ಎರಡು ಹಂತಗಳಲ್ಲಿ ನಿರ್ಮಿಸುತ್ತಿರುವುದರಲ್ಲಿ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ರವರು ಆರೋಪಿಸಿದ್ದಾರೆ.
ತಾಲೂಕಿನ ಮುದ್ದೇನಹಳ್ಳಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಉನ್ನತ ತಂತ್ರಜ್ಞಾನ ಸಂಸ್ಥೆ ಕಟ್ಟಡದ ಪರಿವೀಕ್ಷಣೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕರ ಹಣವನ್ನು ದುರುಪಯೋಗ ಮಾಡಿ ಕೊಳ್ಳೆಹೊಡೆಯುವುದು ಆರ್ಥಿಕ ಮತ್ತು ಆಡಳಿತಾತ್ಮಕ ಅಪರಾಧ. ವಿಶ್ವೇಶ್ವರಯ್ಯ ವಿಶ್ವವಿದ್ಯಾನಿಲಯದ ಮೊದಲನೇ ಹಂತದ ಕಟ್ಟಡ ನಿರ್ಮಾಣಕ್ಕೆ 58.73 ಕೋಟಿ ರೂ., ಎರಡನೆ ಹಂತಕ್ಕೆ 124.03 ಕೋಟಿ ರೂ. ಅಂದಾಜು ವೆಚ್ಚ ಮಾಡಲಾಗಿತ್ತು. ಮೊದಲನೆ ಹಂತದ ಕಟ್ಟಡಗಳ ನಿರ್ಮಾಣವನ್ನು 89.32 ಕೋಟಿ ರೂ.ನಲ್ಲಿ ನಿರ್ಮಿಸಿ ಪೂರ್ಣಗೊಳಿಸಲಾಗಿದೆ. ಎರಡನೆ ಹಂತದ ನಿರ್ಮಾಣವು ಪ್ರಗತಿಯ ಹಂತದಲ್ಲಿದ್ದು, ಅಂದಾಜು ವೆಚ್ಚಕ್ಕಿಂತಲೂ 40 ಕೋಟಿ ರೂ. ಹೆಚ್ಚಿನ ಅನುದಾನದ ಆವಶ್ಯಕತೆ ಇದೆ. ಒಟ್ಟಾರೆ ಅಂದಾಜು ವೆಚ್ಚಕ್ಕಿಂತಲೂ ಶೇ.40 ರಷ್ಟು ಹಣವನ್ನು ಹೆಚ್ಚಾಗಿ ಖರ್ಚು ಮಾಡಲಾಗಿದೆ ಎಂದು ತಿಳಿಸಿದರು.
ಸಚಿವ ಸಂಪುಟದ ಒಪ್ಪಿಗೆ ಪಡೆದಿಲ್ಲ: ಎರಡು ಹಂತದ ಕಾಮಗಾರಿಗಳಲ್ಲಿ ಕಟ್ಟಡ ನಿರ್ಮಾಣ ಮಾಡಲು 40 ಕೋಟಿ ರೂ.ಗೂ ಹೆಚ್ಚು ಹಣ ಖರ್ಚು ಮಾಡಲಾಗಿದೆ. ಕಾನೂನಿನ ಪ್ರಕಾರ ವಿಶ್ವವಿದ್ಯಾನಿಲಯಗಳು ಟೆಂಡರ್‌ನ ಅಂದಾಜು ವೆಚ್ಚಕ್ಕಿಂತಲೂ 5 ಕೋಟಿ ರೂ.ಗೂ ಹೆಚ್ಚಿಗೆ ಹಣವನ್ನು ವೆಚ್ಚ ಮಾಡಲು ಸಚಿವ ಸಂಪುಟದ ಒಪ್ಪಿಗೆ ಪಡೆಯಬೇಕು.
ಈ ಎಲ್ಲ ನಿಯಮಗಳನ್ನು ಉಲ್ಲಂಘಿಸಿ ಕಾನೂನು ಬಾಹಿರವಾಗಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಈ ಹಿಂದೆ ಇದ್ದ ಉಪ ಕುಲಪತಿಗಳು ಹಾಗೂ ಅಭಿಯಂತರರು ಅವ್ಯವಹಾರದಲ್ಲಿ ಭಾಗಿಯಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ ಎಂದ ಅವರು, ಈ ಸಂದಭರ್ದಲ್ಲಿ ಪ್ರಗತಿಯಲ್ಲಿರುವ ಕಾಮಗಾರಿಗಳು ಎಸ್ಟಿಮೇಟ್ ಕುರಿತು ಹೆಚ್ಚಿನ ತನಿಖೆ ನಡೆಸಲು ಆದೇಶಿಸಿದರು.
ತಪ್ಪಿತಸ್ಥರ ವಿರುದ್ಧ ಕ್ರಮ: ರಾಜ್ಯದಲ್ಲಿ 23 ವಿಶ್ವ ವಿದ್ಯಾನಿಲಯಗಳಿದ್ದು, ಆ ಎಲ್ಲ ವಿಶ್ವ ವಿದ್ಯಾನಿಲಯಗಳ ಅನುದಾನ ಬಳಕೆ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ವಿಶ್ವವಿದ್ಯಾನಿಲಯಗಳ ಹಣವನ್ನು ಪೋಲಾಗದಂತೆ ಸಮರ್ಪಕವಾಗಿ ಬಳಕೆ ಮಾಡಲು ಕ್ರಮಕೈಗೊಳ್ಳುತ್ತೇನೆ. ಈಗಾಗಲೇ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಕಟ್ಟಡಗಳ ಅಕ್ರಮ ಕುರಿತು ತನಿಖೆ ನಡೆಸಲು ನೇಮಕಗೊಂಡಿರುವ ಕೆ.ಕೇಶವ ನಾರಾಯಣ ರವರ ವರದಿ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.





