ವೌಢ್ಯಾಚರಣೆ ಪ್ರತಿಬಂಧಕ ಕಾನೂನು ಜಾರಿ ಹೋರಾಟ ಸಮಿತಿಗೆ ಪ್ರೊ.ಚಂಪಾ ರಾಜೀನಾಮೆ

ಬೆಂಗಳೂರು, ಆ.4: ‘ವೌಢ್ಯಾಚರಣೆ ಪ್ರತಿಬಂಧಕ ಕಾನೂನು’ ಜಾರಿಗೆ ಸೂಕ್ತ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ (ಚಂಪಾ), ವೌಢ್ಯಾಚರಣೆ ಪ್ರತಿಬಂಧಕ ಕಾಯ್ದೆ ಜಾರಿ ಸಂಬಂಧದ ಹೋರಾಟ ಸಮಿತಿಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಗುರುವಾರ ಈ ಸಂಬಂಧ ಸಮಿತಿಯ ಅಧ್ಯಕ್ಷರೂ ಆಗಿರುವ ನಿಡುಮಾಮಿಡಿ ಮಠದ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮಿಯವರಿಗೆ ಪತ್ರ ಬರೆದಿರುವ ಚಂಪಾ, ಮೌಢ್ಯಾಚರಣೆ ಪ್ರತಿಬಂಧಕ ಕಾನೂನು ಜಾರಿಗಾಗಿ ತಮ್ಮ ಹಿರಿತನದಲ್ಲಿ ನಡೆದ ವೈಚಾರಿಕ ಚಳವಳಿ ಈಗ ಒಂದು ಹಂತ ತಲುಪಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ಆದರೆ ಅಂತಿಮ ನಿರ್ಧಾರಕ್ಕಾಗಿ ಸಚಿವ ಸಂಪುಟ ಉಪ ಸಮಿತಿಯನ್ನು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರ ನೇತೃತ್ವದಲ್ಲಿ ರಚಿಸಿದ್ದಕ್ಕೆ ಇತ್ತೀಚೆಗೆ ನಡೆದ ಸಭೆಯಲ್ಲಿ ನಾನು ನನ್ನ ಆಕ್ಷೇಪ ವ್ಯಕ್ತಪಡಿಸಿದ್ದೆ. ಆದರೆ, ಅದಕ್ಕೆ ಮನ್ನಣೆ ಸಿಗದ ಹಿನ್ನೆಲೆಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಇತ್ತೀಚೆಗೆ ಮೈಸೂರಿನಲ್ಲಿ ವೌಢ್ಯಾಚರಣೆ ಪ್ರತಿಬಂಧಕ ಕಾನೂನು ಜಾರಿ ಸಂಬಂಧ ‘ಕುರಿಕಾಯಲು ತೋಳಗಳನ್ನು ನೇಮಿಸಿದರೆ ಆಗದು’ ಎಂದು ಹೇಳಿದ್ದು, ಸರಕಾರದ ಇಂಥ ಕ್ರಮದಿಂದ ನಮ್ಮ ಹೋರಾಟಕ್ಕೆ ಜಯ ಸಿಗುವ ಸಂಭವವಿಲ್ಲ ಎಂದು ಚಂಪಾ ಬೇಸರ ವ್ಯಕ್ತಪಡಿಸಿದ್ದಾರೆ.
ಆ ಹಿನ್ನೆಲೆಯಲ್ಲಿ ನಾನು ವೌಢ್ಯಾಚರಣೆ ಪ್ರತಿಬಂಧಕ ಕಾನೂನು ಜಾರಿಗಾಗಿನ ಹೋರಾಟ ಸಮಿತಿಗೆ ರಾಜೀನಾಮೆ ನೀಡುತ್ತಿದ್ದೇನೆ. ಆದರೆ, ಎಂದಿನಂತೆ ವೈಚಾರಿಕ ಹೋರಾಟದಲ್ಲಿ ಭಾಗಿಯಾಗುತ್ತೇನೆ ಎಂದು ಪ್ರೊ.ಚಂಪಾ ತಮ್ಮ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.





