ಕೆರೆ ಒತ್ತುವರಿ ತೆರವಿಗೆ ವಿಶೇಷ ನ್ಯಾಯಾಲಯ: ಕೋಳಿವಾಡ ಮನವಿ

ಬೆಂಗಳೂರು, ಆ.4: ಕೆರೆ ಹಾಗೂ ರಾಜಕಾಲುವೆಗಳ ಒತ್ತುವರಿ ಪ್ರಕರಣಗಳ ಶೀಘ್ರ ವಿಲೇವಾರಿಗೆ ವಿಶೇಷ ನ್ಯಾಯಾಲಯ ಸ್ಥಾಪಿಸುವಂತೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಸಭಾಪತಿ ಹಾಗೂ ಕೆರೆ ಒತ್ತುವರಿ ಸದನ ಸಮಿತಿಯ ಅಧ್ಯಕ್ಷ ಕೆ.ಬಿ.ಕೋಳಿವಾಡ ಮನವಿ ಮಾಡಿಕೊಂಡಿದ್ದಾರೆ.
ಗುರುವಾರ ಕೆರೆ ಹಾಗೂ ರಾಜಕಾಲುವೆ ಒತ್ತುವರಿ ಸಂಬಂಧ ನಗರದ ಶಾಸಕರ ಭವನದಲ್ಲಿ ಬಿಬಿಎಂಪಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಕೆಲವು ಭೂ ಒತ್ತುವರಿದಾರರು ಪದೇ ಪದೇ ನ್ಯಾಯಾಲಯದಿಂದ ತಡೆಯಾಜ್ಞೆ ತರುತ್ತಿರುವುದರಿಂದ ಹಲವು ಸಮಸ್ಯೆಗಳು ತಲೆದೋರುತ್ತಿವೆ. ಹೀಗಾಗಿ ಭೂ ಒತ್ತುವರಿಗೆ ಸಂಬಂಧಿಸಿದಂತೆಯೆ ವಿಶೇಷ ನ್ಯಾಯಾಲಯ ಸ್ಥಾಪಿಸುವ ಅಗತ್ಯವಿದೆ ಎಂದು ಅಭಿಪ್ರಾಯಿಸಿದರು.
ಅ.11ರೊಳಗೆ ಸಮಗ್ರ ಮಾಹಿತಿ: ನಗರದಲ್ಲಿ 1923 ಕೆರೆ ಒತ್ತುವರಿ ಪ್ರಕರಣಗಳನ್ನು ಗುರುತಿಸಲಾಗಿದ್ದು, ಅದರಲ್ಲಿ 822 ತೆರವುಗೊಳಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ತಿಳಿಸಿದ್ದಾರೆ. ಆದರೆ, ಇದು ನಿಖರವಾದ ಮಾಹಿತಿಯಲ್ಲ. ಹೀಗಾಗಿ ಅ.11ರೊಳಗೆ ಸರಿಯಾದ ಮಾಹಿತಿ ಪಡೆದು ವರದಿಯನ್ನು ಕೆರೆ ಸಂರಕ್ಷಣಾ ಸದನ ಸಮಿತಿಗೆ ಒಪ್ಪಿಸಬೇಕು ಎಂದು ಅವರು ಸೂಚಿಸಿದರು.
ತೆರವು ಕಾರ್ಯಾಚರಣೆಯಲ್ಲಿ ತಾರತಮ್ಯ: ಸುಮಾರು 822 ಒತ್ತುವರಿ ಪ್ರಕರಣವನ್ನು ತೆರವುಗೊಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ, ಒತ್ತುವರಿ ತೆರವು ಪ್ರಕರಣದಲ್ಲಿ ತಾರತಮ್ಯ ಮಾಡಲಾಗಿರುವುದರ ಬಗ್ಗೆ ದೂರುಗಳು ಬಂದಿವೆ. ಕೇವಲ ಬಡವರು ತಮ್ಮ ಹೊಟ್ಟೆಪಾಡಿಗಾಗಿ ಒತ್ತುವರಿ ಮಾಡಿಕೊಂಡಿದ್ದ ಸ್ವಲ್ಪ ಜಾಗವನ್ನು ತೆರವುಗೊಳಿಸಲಾಗಿದೆ. ಶ್ರೀಮಂತರು ಮಾಡಿಕೊಂಡಿರುವ ಒತ್ತುವರಿಯ ಕುರಿತು ಕಂಡೂ ಕಾಣದಂತೆ ಜಾಣ ಕುರುಡು ಪ್ರದರ್ಶನ ಮಾಡಲಾಗಿದೆ ಎಂದು ಕೋಳಿವಾಡ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮಾತನಾಡಿ, ನೂರಾರು ವರ್ಷಗಳಿಂದ ಬೇಗೂರು ಕೆರೆ, ಅಕ್ಷಯನಗರ ಕೆರೆ, ಕೋಡಿಚಿಕ್ಕನಹಳ್ಳಿ ಕೆರೆ, ಹುಳಿಮಾವು ಕೆರೆ ಹಾಗೂ ಮಡಿವಾಳ ಕೆರೆಗಳ ನಡುವೆ ಮಳೆನೀರು ಸರಾಗವಾಗಿ ಹರಿದುಕೊಂಡು ಹೋಗುವ ಸಂಪರ್ಕ ಮಾರ್ಗಗಳಿತ್ತು. ಆದರೆ, ಕೆಲವು ಭೂಗಳ್ಳರು ಈ ಸಂಪರ್ಕ ಮಾರ್ಗಗಳನ್ನು ಒತ್ತುವರಿ ಮಾಡಿಕೊಂಡು ಬಡಾವಣೆಗಳನ್ನು ಕಟ್ಟಿದ್ದಾರೆ. ಮಳೆನೀರು ಹರಿದುಕೊಂಡು ಹೋಗಲಾಗದೆ ಸಮಸ್ಯೆಯಾಗುತ್ತಿದೆ ಎಂದರು. ಈ ವೇಳೆ ಶಾಸಕ ಗೋಪಾಲಯ್ಯ ಸೇರಿದಂತೆ ಬಿಬಿಎಂಪಿ ಅಧಿಕಾರಿಗಳು ಉಪಸ್ಥಿತರಿದ್ದರು.





