ಅತಂತ್ರ ಸ್ಥಿತಿಯಲ್ಲಿ ಉರ್ದು ಸ್ನಾತಕೋತ್ತರ ವಿದ್ಯಾರ್ಥಿಗಳು
ದಾವಣಗೆರೆ ವಿವಿ ಬೇಜವಾಬ್ದಾರಿ
- ಅಮ್ಜದ್‌ಖಾನ್ ಎಂ.
ಬೆಂಗಳೂರು, ಆ.4: ದಾವಣಗೆರೆ ವಿಶ್ವವಿದ್ಯಾನಿಲಯದ ಬೇಜವಾಬ್ದಾರಿಯಿಂದಾಗಿ ಉರ್ದು ಸ್ನಾತಕೋತ್ತರ ಪದವಿ ಪ್ರವೇಶಕ್ಕೆ ಅರ್ಜಿ ಸಲ್ಲಿಸಿ, ಪ್ರವೇಶ ಪರೀಕ್ಷೆಯನ್ನು ಬರೆದಿದ್ದ 13 ವಿದ್ಯಾರ್ಥಿಗಳು ಇದೀಗ ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ.
ದಾವಣಗೆರೆ ವಿಶ್ವವಿದ್ಯಾನಿಲಯವು 2016-17ನೆ ಸಾಲಿನ ಸ್ನಾತಕೋತ್ತರ, ಎಂ.ಫಿಲ್ ಹಾಗೂ ಪಿಎಚ್‌ಡಿ ಪದವಿ ಪ್ರವೇಶಕ್ಕೆ ಸಂಬಂಧಿಸಿದಂತೆ ವಿತರಿಸಲಾಗಿರುವ ‘ಪ್ರಾಸ್ಪೆಕ್ಟಸ್’ ಕಿರುಹೊತ್ತಿಗೆಯಲ್ಲಿ ಉರ್ದು ಕೋರ್ಸ್‌ನ್ನು ನಮೂದಿಸಲಾಗಿದೆ. ಉರ್ದು ಕೋರ್ಸ್ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳಿಗೆ ಜು.14ರಂದು ಪ್ರವೇಶ ಪರೀಕ್ಷೆಯನ್ನು ನಡೆಸಲಾಗಿದೆ. ಆದರೆ, ಫಲಿತಾಂಶವನ್ನು ಪ್ರಕಟ ಮಾಡದೆ ತಡೆ ಹಿಡಿಯಲಾಗಿದೆ. ಉರ್ದು ಸ್ನಾತಕೋತ್ತರ ಪದವಿ ವಿಭಾಗಕ್ಕೆ ಡಾ.ಗಾಯತ್ರಿ ದೇವರಾಜ ಎಂಬವರನ್ನು ಮುಖ್ಯಸ್ಥರನ್ನಾಗಿಯೂ ನೇಮಕ ಮಾಡಲಾಗಿದೆ.
ಆದರೆ, ಇದೀಗ ಉರ್ದು ವಿಭಾಗ ಆರಂಭಿಸಲು ಸರಕಾರದ ಅನುಮತಿ ಸಿಗದೆ ಇರುವುದರಿಂದ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲು ಸಾಧ್ಯವಿಲ್ಲ ಎಂದು ದಾವಣಗೆರೆ ವಿಶ್ವವಿದ್ಯಾನಿಲಯವು ಕೈ ಚೆಲ್ಲಿದೆ. ಇದರಿಂದಾಗಿ, ಉನ್ನತ ಶಿಕ್ಷಣದ ಕನಸನ್ನು ಹೊತ್ತಿರುವ ವಿದ್ಯಾರ್ಥಿಗಳು ಬೇರೆ ಕೋರ್ಸುಗಳಿಗೆ ಪ್ರವೇಶ ಪಡೆಯಲು ಮುಂದಾಗದೆ, ಅತಂತ್ರ ಸ್ಥಿತಿಗೆ ಸಿಲುಕುವಂತಾಗಿದೆ.
ರಾಜ್ಯ ಸರಕಾರದಿಂದ ಉರ್ದು ವಿಭಾಗ ಆರಂಭಿಸಲು ಅನುಮತಿ ಸಿಕ್ಕರೆ ನಾವು ನಿಮಗೆ ಪ್ರವೇಶ ನೀಡುತ್ತೇವೆ. ಈ ಸಂಬಂಧ ಪ್ರಯತ್ನಗಳನ್ನು ನಡೆಸಲಾಗುತ್ತಿದೆ ಎಂದು ವಿಶ್ವವಿದ್ಯಾನಿಲಯದ ಕುಲಪತಿ ಭರವಸೆ ನೀಡಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ವಿದ್ಯಾರ್ಥಿಯೊಬ್ಬರು ಪತ್ರಿಕೆಗೆ ತಿಳಿಸಿದ್ದಾರೆ. ವಿಶ್ವವಿದ್ಯಾನಿಲಯದಲ್ಲಿ ಉರ್ದು ವಿಭಾಗ ಆರಂಭಿಸಲು ಸರಕಾರ ಅನುಮತಿ ನೀಡದೆ ಇದ್ದಿದ್ದರೆ, ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಸ್ವೀಕರಿಸಿದ್ದು ಏಕೆ ? ಅಲ್ಲದೆ, ಪ್ರವೇಶ ಪರೀಕ್ಷೆಯನ್ನು ನಡೆಸಲಾಗಿದೆ. ಆದರೆ, ಇದೀಗ ಫಲಿತಾಂಶವನ್ನು ಪ್ರಕಟ ಮಾಡದೆ, ನಮಗೆ ತರಗತಿಗಳಿಗೆ ದಾಖಲಿಸಿಕೊಳ್ಳಲು ಅವಕಾಶ ನೀಡುತ್ತಿಲ್ಲ. ಇದರಿಂದಾಗಿ, ನಮಗೆ ದಿಕ್ಕು ತೋಚದಂತಾಗಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.
ಉನ್ನತ ಶಿಕ್ಷಣ ಸಚಿವರ ಅಭಯ
ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿಗಳು ಉರ್ದು ಸ್ನಾತಕೋತ್ತರ ವಿಭಾಗ ಆರಂಭಿಸಲು ಅನುಮತಿ ಕೋರಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರೆ, ಅನುಮತಿ ನೀಡಲಾಗುವುದು. ವಿದ್ಯಾರ್ಥಿಗಳು ಆತಂಕ ಪಡುವ ಅಗತ್ಯವಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಪತ್ರಿಕೆಗೆ ತಿಳಿಸಿದ್ದಾರೆ.







