ಹೆಚ್ಚುತ್ತಿರುವ ದಲಿತ ದೌರ್ಜನ್ಯ ಪ್ರಕರಣಗಳು
ಮಾನ್ಯರೆ,
ಇತ್ತೀಚೆಗೆ ದೇಶದಲ್ಲಿ ದಲಿತ ಜನಾಂಗದ ಮೇಲೆ ದೈಹಿಕ ಹಾಗೂ ಮಾನಸಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ದೇಶದಲ್ಲಿ 2014ರ ಒಂದೇ ವರ್ಷದಲ್ಲಿ ದಲಿತ ಸಮುದಾಯದ ಮೇಲೆ 47 ಸಾವಿರ ದೌರ್ಜನ್ಯ ಪ್ರಕರಣಗಳು ದಾಖಲಾಗಿರುವುದಾಗಿ ಇತ್ತೀಚಿನ ವರದಿಯೊಂದು ತಿಳಿಸಿದೆ. ಇದಕ್ಕೆ ನಮ್ಮ ಕರ್ನಾಟಕ ರಾಜ್ಯವೂ ಹೊರತಾಗಿಲ್ಲ. ಇತ್ತೀಚೆಗೆ ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ಇಟಗಿ ಗ್ರಾಮದಲ್ಲಿ ದಲಿತ ಜನಾಂಗದವರಿಗೆ ಕ್ಷೌರ ಮಾಡಲು ನಿರಾಕರಣೆ ಮಾಡಿದ ವಿಷಯವಾಗಿ ದಲಿತರ ಮತ್ತು ಮೇಲ್ವರ್ಗದವರ ಮಧ್ಯೆ ಮಾತಿನ ಚಕಮಕಿ ನಡೆದ ಪರಿಣಾಮ ಗ್ರಾಮದ ಮೇಲ್ವರ್ಗದ ಜನರೆಲ್ಲ ಒಟ್ಟಾಗಿ 75 ದಲಿತ ಸಮುದಾಯದ ಕುಟುಂಬಗಳಿಗೆ ಸಾಮೂಹಿಕ ಬಹಿಷ್ಕಾರ ಹಾಕಿದ್ದಾರೆ. ಈ ಅಮಾನವೀಯ ಕೃತ್ಯ ಖಂಡನಾರ್ಹ.
ರಾಜ್ಯದ ಗ್ರಾಮೀಣ ಭಾಗಗಳಲ್ಲಿ ದೇವಸ್ಥಾನ, ಹೊಟೇಲ್, ಬೋರ್‌ವೆಲ್, ಕ್ಷೌರಿಕರ ಅಂಗಡಿಗಳಲ್ಲಿ ಹಾಗೂ ಇತರ ಸಾರ್ವಜನಿಕ ಸ್ಥಳಗಳಲ್ಲಿ ನಿರ್ಬಂಧ ಹೇರಿರುವುದರ ಜೊತೆಗೆ ಅವಾಚ್ಯ ಪದಗಳಿಂದ ಅವಮಾನಿಸುವುದು, ಆ ಸಮುದಾಯದ ಮಹಾನ್ ನಾಯಕರ ಪುತ್ಥಳಿಗಳನ್ನು ಭಗ್ನಗೊಳಿಸುವುದು ಇತ್ಯಾದಿ ಪ್ರಕರಣಗಳು ಹೆಚ್ಚುತ್ತಿರುವುದು ಅಲ್ಲಲ್ಲಿ ಗಲಭೆಗಳಿಗೆ ಕಾರಣವಾಗುತ್ತಿವೆ.
ಆದ್ದರಿಂದ ಅಸ್ಪೃಶ್ಯತೆ ಆಚರಿಸುವವರ ವಿರುದ್ಧ ಸರಕಾರ ಕಟ್ಟುನಿಟ್ಟಿನ ಕ್ರಮ ಜರಗಿಸಿ ದಲಿತ ಸಮುದಾಯದವರೂ ಸಮಾಜದಲ್ಲಿ ಎಲ್ಲರಂತೆ ನೆಮ್ಮದಿಯ ಜೀವನ ನಡೆಸಲು ಅನುಕೂಲ ಮಾಡಿಕೊಡಬೇಕಾಗಿದೆ.







