ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡ ರಾಜನಾಥ್
ಪಠಾಣ್‌ಕೋಟ್, ಮುಂಬೈ ದಾಳಿ

ಇಸ್ಲಾಮಾಬಾದ್, ಆ. 4: ಗೃಹ ಸಚಿವ ರಾಜ್‌ನಾಥ್ ಸಿಂಗ್ ಗುರುವಾರ ಪಠಾಣ್‌ಕೋಟ್ ಮತ್ತು ಮುಂಬೈ ದಾಳಿಗಳಿಗೆ ಸಂಬಂಧಿಸಿ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇಲ್ಲಿ ನಡೆಯುತ್ತಿರುವ ಸಾರ್ಕ್ ಗೃಹ ಸಚಿವರ ಸಮ್ಮೇಳನದಲ್ಲಿ ಮಾತನಾಡಿದ ಅವರು, ಯಾವುದೇ ರೀತಿಯ ಭಯೋತ್ಪಾದನೆ ಅಥವಾ ಅದಕ್ಕೆ ನೀಡುವ ಬೆಂಬಲವನ್ನು ಸಮರ್ಥಿಸಲಾಗದು ಎಂದರು. ‘‘ದೇಶದಲ್ಲಿರುವ ಭಯೋತ್ಪಾದಕರಾಗಲಿ, ದೇಶರಹಿತ ಭಯೋತ್ಪಾದಕರಾಗಲಿ, ಅಂತಾರಾಷ್ಟ್ರೀಯ ಭಯೋತ್ಪಾದನೆಗೆ ಬೆಂಬಲ ನೀಡುವ ಎಲ್ಲರ ವಿರುದ್ಧ ತುರ್ತು ಹಾಗೂ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಕರೆ ನೀಡಿದರು.
ಭಯೋತ್ಪಾದನೆ ಅಥವಾ ಭಯೋತ್ಪಾದಕರಿಗೆ ಬೆಂಬಲ, ಉತ್ತೇಜನ, ಆಶ್ರಯ ಮತ್ತು ಸಹಕಾರ ನೀಡುವ ಎಲ್ಲರನ್ನು ಮೂಲೆಗುಂಪು ಮಾಡಬೇಕು ಎಂದು ಅವರು ಅಂತಾರಾಷ್ಟ್ರೀಯ ಸಮುದಾಯವನ್ನು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.
ಆದಾಗ್ಯೂ, ತನ್ನ ಭಾಷಣದಲ್ಲಿ ಎಲ್ಲಿಯೂ ಅವರು ಪಾಕಿಸ್ತಾನದ ಹೆಸರನ್ನು ಹೇಳಲಿಲ್ಲ. ‘‘ಭಯೋತ್ಪಾದಕರು ಮತ್ತು ಭಯೋತ್ಪಾದಕ ಸಂಘಟನೆಗಳ ವಿರುದ್ಧ ಮಾತ್ರವಲ್ಲ, ಅವರಿಗೆ ಹಾಗೂ ಅವುಗಳಿಗೆ ಬೆಂಬಲ ನೀಡುವ ಎಲ್ಲರ ವಿರುದ್ಧ ಸಾಧ್ಯವಿರುವ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಾದ ಅಗತ್ಯವಿದೆ’’ ಎಂದು ಅವರು ತನ್ನ ಸಾರ್ಕ್ ಸಮ್ಮೇಳನ ಭಾಷಣದಲ್ಲಿ ಹೇಳಿದರು. ಸಮ್ಮೇಳನದಲ್ಲಿ ಬಾಂಗ್ಲಾದೇಶ, ನೇಪಾಳ ಮತ್ತು ಶ್ರೀಲಂಕಾಗಳ ಗೃಹ ಸಚಿವರು ಗೈರುಹಾಜರಾಗಿದ್ದರು.
‘‘ಆಗ ಮಾತ್ರ, ಮುಂಬೈ ಮತ್ತು ಪಠಾಣ್‌ಕೋಟ್ ದಾಳಿಗಳಂಥ ಭಯೋತ್ಪಾದಕ ಕೃತ್ಯಗಳ ಸಂತ್ರಸ್ತರಿಗೆ ನ್ಯಾಯ ಸಿಗಲು ಸಾಧ್ಯ. ಯಾವುದೇ ರೀತಿಯ ಭಯೋತ್ಪಾದನೆ ವಿರುದ್ಧ ನಾವು ‘ಶೂನ್ಯ ಸಹನೆ’ಯನ್ನು ಹೊಂದಬೇಕು’’ ಎಂದರು.
ಹುತಾತ್ಮ ಬಿರುದು ಯಾಕೆ?
ಹಿಜ್ಬುಲ್ ಭಯೋತ್ಪಾದಕ ಬುರ್ಹಾನ್ ವಾನಿಗೆ ‘ಹುತಾತ್ಮ’ ಪಟ್ಟವನ್ನು ನೀಡಿರುವುದಕ್ಕಾಗಿಯೂ ಅವರು ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡರು. ಕಳೆದ ತಿಂಗಳು ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್‌ನಲ್ಲಿ ಭಾರತೀಯ ಭದ್ರತಾ ಪಡೆಗಳೊಂದಿಗೆ ನಡೆದ ಸಂಘರ್ಷದಲ್ಲಿ ವಾನಿ ಮೃತಪಟ್ಟಿದ್ದನು.‘‘ಯಾವುದೇ ದೇಶ ಭಯೋತ್ಪಾದನೆಯನ್ನು ವೈಭವೀಕರಿಸದಂತೆ ಹಾಗೂ ಅದಕ್ಕೆ ಆಶ್ರಯ ನೀಡದಂತೆ ನೋಡಿಕೊಳ್ಳಬೇಕಾದ ಅಗತ್ಯವೂ ಇದೆ. ಒಂದು ದೇಶದ ಭಯೋತ್ಪಾದಕ ಇನ್ನೊಂದು ದೇಶಕ್ಕೆ ಹುತಾತ್ಮ ಅಥವಾ ಸ್ವಾತಂತ್ರ ಹೋರಾಟಗಾರ ಆಗಲಾರ. ಯಾವುದೇ ಸಂದರ್ಭದಲ್ಲಿ ಭಯೋತ್ಪಾದಕರನ್ನು ಹುತಾತ್ಮರು ಎಂದು ಶ್ಲಾಘಿಸಬಾರದು ಎಂದು ನಾನು ಒತ್ತಾಯಿಸುತ್ತೇನೆ’’ ಎಂದರು.







