ಒಲಿಂಪಿಕ್ಸ್ ಕ್ರೀಡಾಗ್ರಾಮದಲ್ಲಿ ಪೇಸ್‌ಗೆ ಕೊಠಡಿಯೇ ಇಲ್ಲ!

ರಿಯೋ ಡಿ ಜನೈರೊ, ಆ.5: ಭಾರತದ ಹಿರಿಯ ಟೆನಿಸ್ ಆಟಗಾರ ಲಿಯಾಂಡರ್ ಪೇಸ್‌ಗೆ ರಿಯೋ ಒಲಿಂಪಿಕ್ ಗೇಮ್ಸ್‌ನ ಕ್ರೀಡಾಗ್ರಾಮದಲ್ಲಿ ವಾಸ್ತವ್ಯಕ್ಕೆ ಕೊಠಡಿಯನ್ನೇ ನೀಡಲಾಗಿಲ್ಲ ಎಂಬ ವಿಷಯ ಬೆಳಕಿಗೆ ಬಂದಿದೆ.
ಏಳು ಬಾರಿಯ ಒಲಿಂಪಿಕ್ಸ್ ಚಾಂಪಿಯನ್ ಪೇಸ್ ಗುರುವಾರ ಸಂಜೆ ರಿಯೋ ಡಿ ಜನೈರೋವನ್ನು ತಲುಪಿದ್ದಾರೆ. ಆದರೆ ರಿಯೋ ಕ್ರೀಡಾಗ್ರಾಮದಲ್ಲಿ ಪೇಸ್‌ಗೆ ಪ್ರತ್ಯೇಕ ಕೊಠಡಿಯನ್ನು ಒದಗಿಸಲಾಗಿಲ್ಲ. 3 ಕೊಠಡಿಗಳನ್ನು ನೀಡಲಾಗಿದ್ದು, ಒಂದರಲ್ಲಿ ಕೋಚ್ ಝೀಶನ್, ಇನ್ನೆರಡರಲ್ಲಿ ರೋಹನ್ ಬೋಪಣ್ಣ ಹಾಗೂ ಅವರ ಫಿಸಿಯೋ ಅವರಿದ್ದಾರೆ.
‘‘ನಾನು ಭಾರತದ ಪರ ಆರು ಒಲಿಂಪಿಕ್ ಗೇಮ್ಸ್‌ಗಳಲ್ಲಿ ಆಡಿದ್ದೇನೆ. ಆದರೆ, ರಿಯೋದಲ್ಲಿ ತಂಗಲು ಕೊಠಡಿಯನ್ನು ನೀಡದೇ ಇರುವುದಕ್ಕೆ ತುಂಬಾ ಬೇಸರವಾಗಿದೆ. ನಾನು ನ್ಯೂಯಾರ್ಕ್‌ನಲ್ಲಿ ಟೂರ್ನಿಯೊಂದರಲ್ಲಿ ಆಡುತ್ತಿದ್ದೆ. ಟೂರ್ನಿ ಕೊನೆಗೊಂಡ ತಕ್ಷಣ ಅಲ್ಲಿಂದ ನೇರವಾಗಿ ಇಲ್ಲಿಗೆ ಬಂದಿದ್ದೇನೆ’’ಎಂದು ಪೇಸ್ ಹೇಳಿದ್ದಾರೆ.
ಡಬಲ್ಸ್ ಜೊತೆಗಾರ ರೋಹನ್ ಬೋಪಣ್ಣರೊಂದಿಗೆ ಒಂದೇ ಕೊಠಡಿಯಲ್ಲಿ ಉಳಿದುಕೊಳ್ಳಲು ಇಷ್ಟಪಡದ ಕಾರಣ ಪೇಸ್ ರಿಯೋಗೆ ತಲುಪಿಲ್ಲ ಎಂದು ವರದಿಯಾಗಿತ್ತು. ಆದರೆ, ಇದರಲ್ಲಿ ಸತ್ಯಾಂಶವಿಲ್ಲ. ಪೇಸ್ ಆ.4(ಗುರುವಾರ)ರಂದು ರಿಯೋಗೆ ಬರುತ್ತಾರೆಂದು ನನಗೆ ಹಾಗೂ ಸಂಘಟಕರಿಗೆ ಗೊತ್ತಿತ್ತು. ಪೇಸ್ ಕ್ರೀಡಾಗ್ರಾಮದಲ್ಲಿ ನೆಲೆಸುವುದಿಲ್ಲವೆಂದು ಎಲ್ಲೂ ಹೇಳಿಲ್ಲ ಎಂದು ಭಾರತದ ಕೋಚ್ ಝೀಶನ್ ಹೇಳಿದ್ದಾರೆ.
ಒಲಿಂಪಿಕ್ಸ್‌ನಲ್ಲಿ ಬೋಪಣ್ಣರೊಂದಿಗೆ ಡಬಲ್ಸ್ ಪಂದ್ಯ ಆಡಲಿರುವ ಪೇಸ್ ಬ್ರೆಝಿಲ್‌ಗೆ ತಡವಾಗಿ ಆಗಮಿಸಿದ ಕಾರಣ ಬೋಪಣ್ಣ ಅವರು ಮಿಶ್ರ ಡಬಲ್ಸ್ ಜೊತೆಗಾರ್ತಿ ಸಾನಿಯಾ ಮಿರ್ಝಾ ಹಾಗೂ ಸೆರ್ಬಿಯದ ನೆನಾಡ್ ಝಿಮೊನಿಕ್‌ರೊಂದಿಗೆ ಅಭ್ಯಾಸ ನಡೆಸಿದ್ದರು.







