ಬಹ್ರೈನ್:ಅಪಹರಣಕ್ಕೊಳಗಾದ ಭಾರತೀಯ ಮಗು ಪತ್ತೆ

ಮನಾಮ,ಆ. 5: ಬಹ್ರೈನ್‌ನಲ್ಲಿ ಕಳೆದ ಆಗಸ್ಟ್ ಎರಡರಂದು ಅಪಹರಿಸಲಾಗಿದ್ದ ಐದು ವರ್ಷದ ಹೆಣ್ಣು ಮಗುವವೊಂದು ಬುಧವಾರ ಮಧ್ಯರಾತ್ರೆ ವೇಳೆ ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಬಹ್ರೈನ್ ಯುವಕ ಮತ್ತು ಏಶ್ಯನ್ ಮೂಲದ ಯುವತಿಯನ್ನು ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ. ಮಗುವಿಗೆ ಯಾವುದೇ ಆರೋಗ್ಯ ಸಮಸ್ಯೆಯಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಲಕ್ನೊದ ಅನೀಷಾ ಚಾರ್ಲ್ಸ್ ಇವರ ಐದು ವರ್ಷದ ಪುತ್ರಿ ಸಾರಳನ್ನು ಆಗಸ್ಟ್ ಎರಡರಂದು ಅಪಹರಣ ನಡೆಸಲಾಗಿತ್ತು ಎಂದು ವರದಿ ತಿಳಿಸಿದೆ.
ಅನೀಷಾ ಮುಹಮ್ಮದ್ ಜಲಾಲ್ ಕಂಪೆನಿಯ ಉದ್ಯೋಗಿಯಾಗಿದ್ದು ಇವರ ಪುತ್ರಿ ಸಾರ ನ್ಯೂ ಹೋರೈಸನ್ ಸ್ಕೂಲ್ ವಿದ್ಯಾರ್ಥಿನಿಯಾಗಿದ್ದಾಳೆ. ಮಗುವಿನ ತಾಯಿ ಅನೀಷಾ ಮಗುವಿನ ತಂದೆಯೊಂದಿಗೆ ಕೆಲವು ವರ್ಷಗಳ ಹಿಂದೆ ವಿವಾಹ ವಿಚ್ಛೇದನ ಮಾಡಿಕೊಂಡಿದ್ದರು. ಈಗ ಮಗುವಿನ ತಂದೆ ಭಾರತದಲ್ಲಿದ್ದಾರೆ. ಮಗುವನ್ನು ಅಪಹರಿಸಿದ ಕಾರು ಬುಧವಾರ ಬೆಳಗ್ಗೆ ಹುರ ಕೆ.ಎಫ್.ಸಿಯ ಹಿಂಭಾಗದ ಮೈದಾನದಲ್ಲಿ ಪತ್ತೆಯಾಗಿತ್ತು. ಸುಝುಕಿ ಆಲ್ಟ್ರೋ ಕಾರಿನ ಜಿಪಿಸಿ ವ್ಯವಸ್ಥೆ ನಾಶಪಡಿಸಿದ ಸ್ಥಿತಿಯಲ್ಲಿತ್ತು ಎಂದು ವರದಿ ತಿಳಿಸಿದೆ.
ಮಂಗಳವಾರ ಬೆಳಗ್ಗೆ ಹುರದ ಡೇ ಕೇರ್ ಸೆಂಟರ್‌ನಿಂದ ಮಗುವನ್ನು ಕರೆದು ಕೊಂಡು ಕಾರಿನಲ್ಲಿ ಮನೆಗೆ ಮರಳುತ್ತಿದ್ದಾಗ ಹುರದ ಗೋಲ್ಡನ್ ಸಾಂಟ್ಸ್ ಅಪಾರ್ಟ್‌ಮೆಂಟ್ ಸಮೀಪ ಕಾರು ನಿಲ್ಲಿಸಿ ಮಗುವನ್ನು ಕಾರಿನ ಹಿಂದಿನ ಸೀಟಿನಲ್ಲಿ ಕೂರಿಸಿ ಕೋಲ್ಡ್ ಸ್ಟೋರ್‌ಗೆ ಹೋಗಿ ಕೆಲವೇ ನಿಮಿಷಗಳಲ್ಲಿ ಮರಳಿದಾಗ ಅಜ್ಞಾತ ವ್ಯಕ್ತಿ ತನ್ನ ಕಾರನ್ನು ಅದರಲ್ಲಿರುವ ಮಗು ಸಹಿತ ಚಲಾಯಿಸಿ ಹೋಗುವುದನ್ನು ಮಗುವಿನ ತಾಯಿನೋಡಿದ್ದರು. ಕಾರಿನ ಹಿಂದೆಯೇ ಇವರು ಸ್ವಲ್ಪದೂರದವರೆಗೆ ಓಡಿದರೂ ಪ್ರಯೋಜನವಾಗಿರಲಿಲ್ಲ. ಎದುರು ಬಂದು ಇನ್ನೊಂದು ಕಾರಿನವರೊಡನೆ ನೆರವು ಕೇಳಿದಾಗ ಅವರು ಅಪಹರಣಕಾರನ ಕಾರನ್ನು ಹಿಂಬಾಲಿಸಲು ಯತ್ನಿಸಿ ವಿಫಲರಾಗಿದ್ದರು. ನಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು.
ಮಗು ಅಪಹರಣದ ವಿಷಯ ಫೇಸ್‌ಬುಕ್ ಮೂಲಕ ವೈರಲ್ ಆಗಿತ್ತು. ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿಯೂ ಪ್ರಚಾರವಾಗಿತ್ತು. ನಂತರ ಸಾಮಾಜಿಕ ಕಾರ್ಯಕರ್ತರು, ಗೆಳೆಯರು ಸೇರಿ ಬಹ್ರೈನ್‌ನ ಹಲವು ಕಡೆ ಮಗುವನ್ನು ಹುಡುಕಾಡಿದ್ದರು. ಪೊಲೀಸರು ಹುಡಕಾಟ ನಡೆಸುತ್ತಿದ್ದರು. ಅಂತಿಮವಾಗಿ ಮಗು ಪತ್ತೆಯಾಗಿದೆ. ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ವಿದೇಶ ಸಚಿವೆ ಸುಷ್ಮಾಸ್ವರಾಜ್ ಮಗುವನ್ನು ಪತ್ತೆಹಚ್ಚಿ ಬಿಡುಗಡೆಗೊಳಿಸಿದ್ದಕ್ಕಾಗಿ ಬಹ್ರೈನ್ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.







