ಡೊನಾಲ್ಡ್ ಟ್ರಂಪ್ ಅಧ್ಯಕ್ಷೀಯ ಅಭಿಯಾನದ ಹಿಂದಿದೆಯೇ ಮಹಾಸಂಚು ?

ವಾಷಿಂಗ್ಟನ್, ಆ.5: ಈಗಾಗಲೇ ತಮ್ಮ ಹಲವಾರು ಹೇಳಿಕೆಗಳಿಂದ ಸಾಕಷ್ಟು ವಿವಾದಕ್ಕೀಡಾಗಿರುವ ಅಮೆರಿಕದ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಅವರ ಅಧ್ಯಕ್ಷೀಯ ಅಭಿಯಾನದ ಹಿಂದೆ ಒಂದು ಮಹಾಸಂಚು ಅಡಗಿದೆಯೇ ಎಂಬ ಪ್ರಶ್ನೆ ಹಲವರನ್ನು ಕಾಡಲಾರಂಭಿಸಿವೆ ಎಂದು ಅಲ್ ಜಝೀರಾ.ಕಾಂ ವರದಿಯೊಂದು ಹೇಳಿದೆ.
ಟ್ರಂಪ್ ಅವರ ಅಭಿಯಾನ ವೈಟ್‌ಹೌಸ್ ಪ್ರವೇಶಿಸುವ ಗುರಿ ಹೊಂದಿಲ್ಲವಾಗಿದ್ದು, ಬದಲಾಗಿ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಹಿಲರಿ ಕ್ಲಿಂಟನ್ ಅವರ ಹಾದಿ ಸುಗಮವಾಗಿಸುವುದಾಗಿದೆ ಎಂದು ಟ್ರಂಪ್ ಅವರದೇ ಪಕ್ಷದ ಹಲವರ ಅಭಿಪ್ರಾಯವಾಗಿದೆ ಎಂದು ವರದಿ ತಿಳಿಸಿದೆ. ಇದೊಂದು ವಿಧದ ‘‘ಫಾಲ್ಸ್ ಫ್ಲಾಗ್’ ಆಪರೇಶನ್ ಆಗಿರಬಹುದೆಂಬ ಶಂಕೆಯೂ ವ್ಯಕ್ತವಾಗಿದೆ.
ಮೇಲಾಗಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ಅವರ ಎದುರು ಬೇರೆ ಯಾವುದೇ ಅಭ್ಯರ್ಥಿ ಇಲ್ಲ ಎಂದಿಟ್ಟುಕೊಳ್ಳಿ. ಆಗ ಅಧ್ಯಕ್ಷೀಯ ಚುನಾವಣೆಯಲ್ಲಿ ಆಕೆ ಜನರ ಕನಿಷ್ಠ ವಿಶ್ವಾಸ ಪಡೆದ ಅಭ್ಯರ್ಥಿಯಾಗುತ್ತಾರೆಂಬುದನ್ನೂ ವರದಿಯಲ್ಲಿ ತಿಳಿಸಲಾಗಿದೆಯೆಲ್ಲದೆ ಇದೇ ಕಾರಣದಿಂದ ಟ್ರಂಪ್ ಅವರು ಹಿಲರಿ ಎದುರು ಸ್ಪರ್ಧಿಸಿರಬಹುದೆಂದೂ ಶಂಕಿಸಲಾಗಿದೆ.
ಟ್ರಂಪ್ ಅವರು ಒಳಮನಸ್ಸಿನಲ್ಲಿ ಡೆಮಾಕ್ರಟಿಕ್ ಆಗಿದ್ದಾರೆಂಬುದು ರಾಜಕಾರಣಿ ಹಾಗೂ ಉದ್ಯಮಿಜೆಬ್ ಬುಷ್ ಅವರು ಕಳೆದ ಡಿಸೆಂಬರ್ ನಲ್ಲಿ ತಮ್ಮ ಟ್ವೀಟ್ ಒಂದರಲ್ಲಿ ‘‘ಪ್ರಾಯಶಃ ಡೊನಾಲ್ಡ್‌ತಮ್ಮ ಸ್ನೇಹಿತೆ ಹಿಲರಿ ಕ್ಲಿಂಟನ್ ಅವರೊಂದಿಗೆ ಒಪ್ಪಂದವೊಂದಕ್ಕೆ ಬಂದಿದ್ದಾರೆ. ಈ ಹಾದಿಯಲ್ಲಿ ಮುನ್ನಡೆದರೆ ಆಕೆಗೆ ವೈಟ್ ಹೌಸ್ ನಲ್ಲಿ ಸ್ಥಾನ ಸಿಗಬಹುದು,’’ ಎಂದು ಹೇಳಿದಾಗ ಹಲವರ ಗಮನಕ್ಕೆ ಬಂದಿತ್ತು.
ಇದೆಷ್ಟು ನಿಜವೆಂದು ಅರಿಯಲು ಹೋದರೆ ಟ್ರಂಪ್ ಅವರು ಹಲವು ವಿಚಾರಗಳ ಬಗ್ಗೆ ಡೆಮಾಕ್ರಟಿಕ್ ಅಭಿಪ್ರಾಯಗಳನ್ನು ಹಿಂದೆ ಸಮರ್ಥಿಸಿದ್ದರೆಂದು ವರದಿ ತಿಳಿಸಿದೆ. ಅವರು ಕ್ಲಿಂಟನ್ ದಂಪತಿಯ ಸ್ನೇಹಿತರಾಗಿದ್ದರು ಮಾತ್ರವಲ್ಲದೆ ಕ್ಲಿಂಟನ್ ದಂಪತಿ 2005ರಲ್ಲಿ ಟ್ರಂಪ್ ಅವರ ವಿವಾಹಕ್ಕೂ ಆಗಮಿಸಿದ್ದರು. ಟ್ರಂಪ್ ಅವರು ಕ್ಲಿಂಟನ್ ದಂಪತಿಯನ್ನು ಮುಖ್ಯವಾಗಿ ಹಿಲರಿಯವರನ್ನು ಪ್ರಶಂಸಿಸಿ, ಅವರನ್ನು ‘ಟೆರ್ರಿಫಿಕ್ ವುಮನ್’ ಎಂದೂ ಬಣ್ಣಿಸಿದ್ದರು.





