ಟೆನಿಸ್: ವೈಯಕ್ತಿಕ ಪ್ರತಿಷ್ಠೆಗೆ ಬಲಿಯಾಗುವುದೇ ಭಾರತದ ಒಲಿಂಪಿಕ್ ಪದಕ ?

ಹೊಸದಿಲ್ಲಿ, ಆ.5: ಬಹುನಿರೀಕ್ಷಿತ ರಿಯೋ ಒಲಿಂಪಿಕ್ಸ್ಗೆ ಕ್ಷಣಗಣನೆ ಆರಂಭವಾಗಿದೆ. ಈ ಒಲಿಂಪಿಕ್ಸ್ ನಲ್ಲಿ ಭಾರತ ಮಿಕ್ಸ್ಡ್ ಡಬಲ್ಸ್ ವಿಭಾಗದಲ್ಲಿ ಸಾನಿಯಾ ಮಿರ್ಜಾ ಹಾಗೂ ರೋಹನ್ ಬೋಪಣ್ಣ ಪ್ರಶಸ್ತಿ ತರುವರೆಂಬ ನಿರೀಕ್ಷೆಯ ನಡುವೆಯೇ ಹಲವು ದಿನಗಳ ಹಿಂದೆ ಪುರುಷರ ಡಲ್ಸ್ ವಿಭಾಗದ ಆಟಗಾರರಾದ ಲಿಯಾಂಡರ್ ಪೇಸ್ ಹಾಗೂ ರೋಹನ್ ಬೋಪಣ್ಣ ನಡುವೆ ಎಲ್ಲವೂ ಸರಿಯಾಗಿಲ್ಲವೆಂಬ ವದಂತಿಗಳು ಹರಡಿವೆ.
ಬೋಪಣ್ಣ ಈ ಹಿಂದೆ ಪೇಸ್ ಬದಲು ಕಡಿಮೆ ಶ್ರೇಯಾಂಕದ ಸಾಕೇತ್ ಮೈನೇನಿ ಜತೆ ಡಬಲ್ಸ್ ಆಡಲು ಮನಸ್ಸು ಮಾಡಿದ್ದರೂ ಆಲ್ ಇಂಡಿಯಾ ಟೆನಿಸ್ ಅಸೋಸಿಯೇಶನ್ ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಿತ್ತು.
ಪೇಸ್ ಅವರು ಒಲಿಂಪಿಕ್ಸ್ ಕ್ರೀಡಾ ಗ್ರಾಮದಲ್ಲಿ ಬೋಪಣ್ಣಜತೆ ಕೊಠಡಿ ಹಂಚಲು ನಿರಾಕರಿಸಿದ್ದಾರೆಂಬುದು ಇತ್ತೀಚಿಗಿನ ವದಂತಿ. ತಮ್ಮ ಏಳನೆ ಒಲಿಂಪಿಕ್ಸ್ ನಲ್ಲಿ ಭಾಗವಹಿಸುತ್ತಿರುವ ಪೇಸ್ ಗುರುವಾರ ಗೇಮ್ಸ್ ಗ್ರಾಮಕ್ಕೆ ಬಂದಿಳಿದಾಗ ಅವರಿಗೆಉಳಿದುಕೊಳ್ಳಲು ಯಾವುದೇ ಕೊಠಡಿ ನೀಡಲಾಗಿರಲಿಲ್ಲ ಹಾಗೂ ಅಂತಿಮವಾಗಿ ಸಂಜೆ ಅವರಿಗೆ ಒಂದು ಕೊಠಡಿಯನ್ನು ನೀಡಲಾಗಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿದ ಭಾರತೀಯ ತಂಡದ ಮುಖ್ಯಸ್ಥ ರಾಕೇಶ್ ಗುಪ್ತ ‘‘ಪೇಸ್ ಅವರು ಯಾವತ್ತೂ ಪ್ರತ್ಯೇಕವಾಗಿಯೇ ಒಬ್ಬರಾಗಿಯೇ ಕೊಠಡಿಯಲ್ಲಿ ಉಳಿದುಕೊಳ್ಳುತ್ತಾರೆ,’’ಎಂದರಲ್ಲದೆ ‘‘ಈ ವಿಷಂುದಲ್ಲಿ ಯಾವ ವಿವಾದವೂ ಬೇಕಾಗಿಲ್ಲ. ಅವರಂತಹ ಟೆನಿಸ್ ಆಟಗಾರರಿಗೆ ಪ್ರತ್ಯೇಕ ಕೊಠಡಿಯ ಅಗತ್ಯವಿದೆ’’ ಎಂದು ಹೇಳಿದರು.
ಪೇಸ್ ನ್ಯೂಯಾರ್ಕ್ ನಲ್ಲಿ ಬೇರೆ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದ್ದುದರಿಂದ ರಿಯೋಗೆ ಬರಲು ತಡವಾಯಿತೆಂದು ಅವರು ಸಮಜಾಯಿಷಿ ನೀಡಿದರು.
ಅತ್ತ ಪೇಸ್ ಅವರ ಅನುಪಸ್ಥಿತಿಯಲ್ಲಿ ಬೋಪಣ್ಣ ಅವರು ಸರ್ಬಿಯಾದ ನೇನಾಡ್ ಝಿಮೋಂಜಿಕ್ ಹಾಗೂ ಸಾನಿಯ ಜತೆ ಅಭ್ಯಾಸ ನಡೆಸಿದರು.
ಪೇಸ್ ಅವರು 1996ರ ಅಟ್ಲಾಂಟ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಪಡೆದಿದ್ದರು. ಆದರೆ ಅವರು ಹಾಗೂ ಬೋಪಣ್ಣ ಜತೆಯಾಗಿ ಅಭ್ಯಾಸ ನಡೆಸಿದ್ದೇ ಇಲ್ಲವೆನ್ನಬಹುದು. ನಾಳೆ ನಡೆಯಲಿರುವ ಪ್ರಥಮ ಸುತ್ತಿನ ಪಂದ್ಯದಲ್ಲಿ ಪೇಸ್ ಹಾಗೂ ಬೋಪಣ್ಣ ಪೋಲೆಂಡ್ ಆಟಗಾರರಾದ ಮಾರ್ಸಿನ್ ಮಟ್ಕೋವ್ ಸ್ಕಿ ಹಾಗೂ ಲುಕಾಸ್ ಕುಬೊಟ್ ಅವರನ್ನು ಎದುರಿಸಲಿದ್ದಾರೆ.
ಪೇಸ್ಅವರು ಡಬಲ್ಸ್ ರ್ಯಾಂಕಿಂಗಿನಲ್ಲಿ ಪ್ರಥಮ 50 ಆಟಗಾರರ ಪಟ್ಟಿಯಿಂದ ಹೊರಬಿದ್ದಿದ್ದರೆ ಭಾರತದ ಡಬಲ್ಸ್ ತಂಡ ವಿಶ್ವದಲ್ಲಿ 15ನೆ ರ್ಯಾಂಕ್ ಪಡೆದಿದೆ.





