ಸೈಂಟ್ ಜೋಸೆಫ್ ಶಾಲೆಯಲ್ಲಿ ಶಿಕ್ಷಣ ಇಲಾಖೆಯ ಅನುಮತಿಯಿಲ್ಲದೆ ಅರಬಿಕ್ ಕಲಿಕೆ: ಶ್ರೀರಾಮ ಸೇನೆ ಆರೋಪ

ಮಂಗಳೂರು, ಆ.5: ನಗರದ ಹೊರವಲಯದ ನೀರುಮಾರ್ಗದ ಬೊಂಡಂತಿಲದಲ್ಲಿರುವ ಸೈಂಟ್ ಜೋಸೆಫ್ ಶಾಲೆ ಅನುದಾನಿತ ಶಾಲೆಯಾಗಿದ್ದು, ಶಿಕ್ಷಣ ಇಲಾಖೆಯ ಅನುಮತಿಯಿಲ್ಲದೆ ಇಲ್ಲಿ ಅರಬಿಕ್ ಭಾಷೆ ಕಲಿಸಲಾಗುತ್ತಿದೆ. ಈ ಬಗ್ಗೆ ಮನವಿ ನೀಡಲು ಹೋದ ಶ್ರೀರಾಮಸೇನೆ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಅವರ ಮೇಲಿನ ಮೊಕದ್ದಮೆಯನ್ನು ಹಿಂಪಡೆಯಬೇಕು. ಪ್ರಕರಣದ ಬಗ್ಗೆ ನ್ಯಾಯಂಗ ತನಿಖೆ ನಡೆಯಬೇಕು ಎಂದು ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಮಹೇಶ್ ಕುಮಾರ್ ಕೊಪ್ಪಆಗ್ರಹಿಸಿದರು.
ನಗರದಲ್ಲಿ ಇಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅರಬಿಕ್ ಭಾಷೆ ಕಲಿಸಲು ಶಿಕ್ಷಣ ಇಲಾಖೆಯ ಅನುಮತಿ ಪತ್ರ ಇದ್ದಲ್ಲಿ ಶಾಲಾ ಆಡಳಿತ ಮಂಡಳಿ ತಕ್ಷಣ ಅದನ್ನು ಬಹಿರಂಗಪಡಿಸಲಿ ಎಂದು ಹೇಳಿದರು. ಶಿವಮೊಗ್ಗ, ಚಿಕ್ಕಮಗಳೂರು ಮುಂತಾದೆಡೆ ಕರಪತ್ರ ಹಂಚುವ ಮೂಲಕ ಕ್ರೈಸ್ತ ಧರ್ಮಕ್ಕೆ ಮತಾಂತರ ನಡೆಯುತ್ತಿದೆ. ಇದರ ವಿರುದ್ಧ ಶ್ರೀರಾಮ ಸೇನೆ ಹೋರಾಟ ನಡೆಸಲಿದೆ. ಅಲ್ಲದೆ ಅಕ್ರಮ ಗೋ ಸಾಗಾಟ ಹೆಚ್ಚುತ್ತಿದ್ದು, ಯಾವುದೇ ಪ್ರಕರಣ ದಾಖಲಾಗುತ್ತಿಲ್ಲ. ಇದರ ವಿರುದ್ಧವು ಸೇನೆ ಅಭಿಯಾನ ನಡೆಸಲಿದೆ. ಆ.10ಕ್ಕೆ ಚಿಕ್ಕಮಗಳೂರಿನಲ್ಲಿ ಸಭೆ ನಡೆಯಲ್ಲಿದ್ದು, ಈ ವಿಚಾರಗಳ ಕುರಿತಂತೆ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀರಾಮಸೇನೆಯ ಪ್ರ. ಕಾರ್ಯದರ್ಶಿ ಪ್ರವೀಣ್ ವಾಲ್ಕೆ, ಜಿಲ್ಲಾ ಕಾರ್ಯದರ್ಶಿ ಗುರು ಪಾಂಡೇಶ್ವರ, ಉಪಾಧ್ಯಕ್ಷ ಹರೀಶ್ ಶೆಟ್ಟಿ ಬೊಕ್ಕಪಟ್ಣ, ನಗರ ಕಾರ್ಯದರ್ಶಿ ವೆಂಕಟೇಶ್ ಪಡಿಯಾರ್ ಉಪಸ್ಥಿತರಿದ್ದರು.





