ಸರಕಾರಿ ಗೋಶಾಲೆಯಲ್ಲಿ ಪ್ರತಿದಿನ ಸಾಯುತ್ತಿವೆ 20 ಗೋವುಗಳು!

ಜೈಪುರ್,ಆ.5 : ಜೈಪುರದ ಹಿಂಗೋನಿಯಾದಲ್ಲಿರುವ ರಾಜಸ್ಥಾನದ ಅತಿ ದೊಡ್ಡ ಗೋಶಾಲೆಯಲ್ಲಿನ ಗೋವುಗಳ ಸ್ಥಿತಿ ಅತ್ಯಂತ ದಯನೀಯವಾಗಿದ್ದು ಗೋರಕ್ಷಣೆಯ ಬಗ್ಗೆ ಮಾತನಾಡುವವರು ಈಗ ಎಲ್ಲಿದ್ದಾರೆಂಬ ಪ್ರಶ್ನೆ ಸಹಜವಾಗಿಯೇ ಮೂಡಿದೆ. ರಾಜ್ಯ ಸರಕಾರದ ಅಧೀನದಲ್ಲಿರುವ ಈ ಗೋಶಾಲೆಯಲ್ಲಿ ಕಳೆದೆರಡು ದಿನಗಳಲ್ಲಿಯೇ ಸುಮಾರು90 ಗೋವುಗಳು ಸಾವನ್ನಪ್ಪಿವೆಯೆಂದು ಅಲ್ಲಿನ ಪಶುವೈದ್ಯರೊಬ್ಬರು ಮಾಹಿತಿ ನೀಡಿದ್ದಾರೆಂದು, ಇಂಡಿಯಾ ಟುಡೇ ವರದಿಯೊಂದು ತಿಳಿಸಿದೆ.
ಈ ಗೋಶಾಲೆಯ ದಯನೀಯ ಸ್ಥಿತಿಗೆ ಕಾರಣವೂ ಇಲ್ಲದಿಲ್ಲ. ಎರಡು ವಾರಗಳ ಹಿಂದೆ ಈ ಗೋಶಾಲೆಯ ಸುಮಾರು 225 ಉದ್ಯೋಗಿಗಳು ತಮಗೆ ವೇತನ ನೀಡುವಲ್ಲಿ ಆಗುತ್ತಿರುವ ವಿಳಂಬವನ್ನು ವಿರೋಧಿಸಿ ಪ್ರತಿಭಟನೆಗೆ ಇಳಿದಿದ್ದರು. ಅತ್ತ ಗೋಶಾಲೆಗೆಉದ್ಯೋಗಿಗಳನ್ನು ಒದಗಿಸಿದ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿರುವುದರಿಂದಅವರ ವೇತನ ಬಿಡುಗಡೆ ಮಾಡಲು ಸಾಧ್ಯವಿಲ್ಲವೆಂದು ಮುನಿಸಿಪಾಲಿಟಿ ಅಧಿಕಾರಿಗಳು ಹೇಳಿದ್ದ ಕಾರಣ ನೌಕರರು ಮುಷ್ಕರ ಮುಂದುವರಿಸಿದ್ದರು. ಅದರ ಪರಿಣಾಮವಾಗಿಈ ಗೋ ಆಶ್ರಯತಾಣದ ಪರಿಸ್ಥಿತಿ ಹೇಳತೀರದಾಗಿದೆ. ಈ ಗೋಶಾಲೆಯ ರಿಜಿಸ್ಟರ್ ನಲ್ಲಿ ಸುಮಾರು 17 ಪಶುವೈದ್ಯರಿದ್ದರೂ ಈಗ ಅಲ್ಲಿ ಕೇವಲ ಒಬ್ಬರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲಿನ ಆಯುಕ್ತರಾದ ಶೇರ್ ಸಿಂಗ್ ಕೂಡ ರಜೆಯ ಮೇಲೆ ತೆರಳಿದ್ದಾರೆ. ಗೋಶಾಲೆಯನ್ನು ಶುಚಿಗೊಳಿಸುವವರು ಯಾರೂ ಇಲ್ಲದ ಕಾರಣ ಅದು ಕೊಳೆತು ನಾರುತ್ತಿದೆ ಹಾಗೂ ಅಲ್ಲಿನ ದುರ್ವಾಸನೆ ಸಹಿಸಲಸಾಧ್ಯವಾಗಿ ಬಿಟ್ಟಿದೆ. ಕಳೆದ 15 ದಿನಗಳಿಂದ ದನಗಳ ದೊಡ್ಡಿಯಲ್ಲಿ ಮಳೆನೀರು ಹಾಗೇ ನಿಂತಿದ್ದು ಪಶುಗಳಿಗೆ ಆಹಾರ ಕೂಡ ನೀಡುವವರು ಯಾರೂ ಇಲ್ಲದೆ ಹಸಿವು, ಬಾಯಾರಿಕೆಯಿಂದ ಅವುಗಳ ಜೀವನ ನರಕಸದೃಶವಾಗಿದೆ.
ಇಲ್ಲಿ ಪ್ರತಿ ದಿನ ಕನಿಷ್ಠ 20 ದನಗಳು ಸಾಯುತ್ತಿವೆಯೆಂದೂ ತಾವು ಅಸಹಾಯಕರಾಗಿದ್ದೇವೆಂದೂಅಲ್ಲಿನ ಪಶುವೈದ್ಯರು ತಿಳಿಸುತ್ತಾರೆ. ಪ್ರತಿ ದಿನ ವ್ಯಾನುಗಳಲ್ಲಿ ಇಲ್ಲಿ ಸತ್ತ ದನಗಳ ಕಳೇಬರಗಳನ್ನು ತುರುಕಿಸಿ ಕೊಂಡೊಯ್ಯಲಾಗುತ್ತದೆ.ಅತ್ತ ನೌಕರರು ತಮಗೆ ಐದು ತಿಂಗಳುಗಳಿಂದ ವೇತನ ದೊರಕಿಲ್ಲವೆಂದು ಹೇಳುತ್ತಾರೆ.
2010 ರಲ್ಲಿ ರಾಜಸ್ಥಾನ ಮುಖ್ಯಮಂತ್ರಿ ವಸುಂಧರ ರಾಜೇ ಸಿಂಧ್ಯಾ ರವರು ಗೋರಕ್ಷಣೆಗಾಗಿ ಸಾರ್ವಜನಿಕ ಪ್ರಮಾಣವಚನ ಕಾರ್ಯಕ್ರಮ ಆಯೋಜಿಸಿದ್ದರು. ದೇಶದಲ್ಲಿ ಪ್ರಥಮ ಬಾರಿಗೆ ರಾಜ್ಯ ಸರಕಾರ ಗೋವುಗಳ ಕಲ್ಯಾಣಕ್ಕೆಂದೇ ಪ್ರತ್ಯೇಕ ಇಲಾಖೆ ತೆರೆಯಿತು. ಅಲ್ಲಿನ ಶಾಲಾ ಪಠ್ಯಗಳಲ್ಲೂ ಗೋವಿನ ಪವಿತ್ರತೆಯ ಬಗೆಗಿನ ಪಾಠಗಳಿವೆ.
ಇಂತಹಾ ಒಂದು ರಾಜ್ಯದಲ್ಲಿ ಗೋವುಗಳಿಗೆ ಈ ದುಸ್ಥಿತಿ ಬಂದೊದಗಿರುವುದು ವಿಪರ್ಯಾಸವಲ್ಲದೆ ಮತ್ತಿನ್ನೇನಲ್ಲ.







