ಬದಲಾಗದ ಗುತ್ತಿಗೆ ಪೌರ ಕಾರ್ಮಿಕರ ಅಸಹಾಯಕತೆ!
*ಪಿಎಫ್ ಹಣ ಜಮೆ ಮಾಹಿತಿ ಕಾರ್ಮಿಕರಿಗಿಲ್ಲ!

ಮಂಗಳೂರು,ಆ.5: ದಕ್ಷಿಣ ಕನ್ನಡ ಜಿಲ್ಲೆಯ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಗುತ್ತಿಗೆಯಡಿ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಸೂಕ್ತ ಆರೋಗ್ಯ ರಕ್ಷಣೆಯಾಗಲಿ, ಸಾಮಾಜಿಕ ಭದ್ರತೆಯಾಗಲಿ ಖಾತರಿ ಆಗಿಲ್ಲ ಎಂಬ ವಿಚಾರ ಇಂದು ಮತ್ತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅನಾವರಣಗೊಂಡಿತು.
ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ನಾರಾಯಣ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಹೊರ ಗುತ್ತಿಗೆಯಲ್ಲಿ ದುಡಿಯುತ್ತಿರುವ ಪೌರ ಕಾರ್ಮಿಕರು ತಮ್ಮ ನೋವನ್ನು ತೋಡಿಕೊಂಡರು. 2015ರ ಜನವರಿ 2ರಂದು ನಗರಕ್ಕೆ ಭೇಟಿ ನೀಡಿ ಪೌರ ಕಾರ್ಮಿಕರ ಸಮಸ್ಯೆಗಳನ್ನು ಆಲಿಸಿ, ಅವರಿಗೆ ಹೊರಗುತ್ತಿಗೆಯಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಇಎಸ್‌ಐ, ಪಿಎಫ್‌ನಲ್ಲಿ ಆಗುತ್ತಿರುವ ವಂಚನೆಯ ಕುರಿತಂತೆ 15 ದಿನಗಳೊಳಗೆ ಕ್ರಮ ಕೈಗೊಳ್ಳುವಂತೆ ಆಯೋಗದ ಅಧ್ಯಕ್ಷ ನಾರಾಯಣ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರು.
ಆದರೆ, ಇದೀಗ ಒಂದೂವರೆ ವರ್ಷದ ಬಳಿಕ ಮತ್ತೆ ನಡೆದ ಸಭೆಯಲ್ಲಿ ಹೊರ ಗುತ್ತಿಗೆ ಪೌರ ಕಾರ್ಮಿಕರು ತಮಗೆ ನೀಡಲಾಗುವ ದಿನಗೂಲಿಯಲ್ಲಿ ಕಡಿತವಾಗುವ ಪಿಎಫ್ ಜಮೆಯಾಗುವ ಬಗ್ಗೆ ಯಾವುದೇ ದಾಖಲೆ, ಆಧಾರ ತಮ್ಮ ಬಳಿ ಇಲ್ಲದಿರುವುದನ್ನು ಅಧ್ಯಕ್ಷರೆದುರು ಬಹಿರಂಗಪಡಿಸಿದರು.
‘‘ಕಂಕನಾಡಿ ವಾರ್ಡ್‌ನಲ್ಲಿ ಹೊರಗುತ್ತಿಗೆಯಡಿ ಕೆಲಸ ನಿರ್ವಹಿಸುತ್ತಿರುವ ತನಗೆ 6,000 ರೂ. ಕೈಗೆ ಸಿಗುತ್ತದೆ. ಪಿಎಫ್ ಹಣ ಕಡಿತ ಮಾಡಿರುವುದಾಗಿ ಹೇಳಿದ್ದಾರೆ. ಆದರೆ, ಅದರ ಚೀಟಿ, ದಾಖಲೆ ಇಲ್ಲ’’ ಎಂದು ಜಯಮ್ಮ ಬೇಸರ ವ್ಯಕ್ತಪಡಿಸಿದರು. ಈ ಸಂದರ್ಭ, ‘‘ನಮಗೆ ತಿಂಗಳಿಗೆ 2ರಂತೆ ನೀಡಬೇಕಾಗಿರುವ ಸೋಪು ಎರಡು ವರ್ಷವಾದರೂ ಸಿಕ್ಕಿಲ್ಲ. ಕೈಗವಚ ಇಲ್ಲ. ಗಮ್ ಬೂಟ್ ನೀಡಲಾಗಿಲ್ಲ’’ ಎಂಬ ಕೂಗು ಸಭೆಯಲ್ಲಿದ್ದ ಪೌರ ಕಾರ್ಮಿಕರಿಂದ ಕೇಳಿಬಂತು.
ಆರೋಗ್ಯ ತಪಾಸಣೆಯನ್ನು ನಿರಂತರವಾಗಿ ಮಾಡಿಸಲಾಗುತ್ತಿದೆಯೇ ಎಂಬ ಅಧ್ಯಕ್ಷ ನಾರಾಯಣ ಅವರ ಪ್ರಶ್ನೆಗೆ, ‘ನಮ್ಮ ಆರೋಗ್ಯದ ಬಗ್ಗೆ ಕಾಳಜಿಯೇ ವಹಿಸಲಾಗುತ್ತಿಲ್ಲ’ ಎಂಬ ಮಾತು ಪೌರ ಕಾರ್ಮಿಕರದ್ದಾಗಿತ್ತು. ಇದರಿಂದ ಬೇಸರಗೊಂಡ ಆಯೋಗದ ಅಧ್ಯಕ್ಷ ನಾರಾಯಣ, ಇಡೀ ನಗರವನ್ನು ಸ್ವಚ್ಛಗೊಳಿಸುವ ಪೌರ ಕಾರ್ಮಿಕರಿಗೆ ವಂಚನೆ ಆಗದಂತೆ ಸರಕಾರ ಹಲವಾರು ಕ್ರಮ, ಸೌಲಭ್ಯ, ನಿಯಮಾವಳಿಗಳನ್ನು ಮಾಡಿದ್ದರೂ ಸರಕಾರ ಮತ್ತು ಪೌರ ಕಾರ್ಮಿಕರನ್ನು ವಂಚಿಸಲಾಗುತ್ತಿದೆ ಎಂದರು.
ಒಂದು ತಿಂಗಳೊಳಗೆ ಎಲ್ಲಾ ಗುತ್ತಿಗೆ ಪೌರ ಕಾರ್ಮಿಕರಿಗೆ ಬ್ಯಾಂಕ್ ಖಾತೆಯ ಮೂಲಕವೇ ವೇತನ ನೀಡುವ ವ್ಯವಸ್ಥೆಯಾಗಬೇಕು. ಮಾತ್ರವಲ್ಲದೆ, ಒಂದು ವಾರದೊಳಗೆ ಗುತ್ತಿಗೆದಾರರು, ಕಾರ್ಮಿಕರ ವೇತನದಲ್ಲಿ ಕಡಿತ ಮಾಡಲಾದ ಹಣವನ್ನು ಭವಿಷ್ಯನಿಧಿ ಖಾತೆಗೆ ಜಮೆ ಮಾಡುತ್ತಿರುವುದನ್ನು ಖಾತರಿಪಡಿಸಬೇಕೆಂದು ಜಿಲ್ಲೆಯ ಎಲ್ಲಾ ಸ್ಥಳೀಯಾಡಳಿತ ಸಂಸ್ಥೆಗಳ ಮುಖ್ಯ ಅಧಿಕಾರಿಗಳಿಗೆ ತಾಕೀತು ಮಾಡಿದರು. ಪೌರ ಕಾರ್ಮಿಕರ ಆರೋಗ್ಯ ತಪಾಸಣೆಗೆ ಸಂಬಂಧಿಸಿ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ, ಆಯೋಗದ ಅಧ್ಯಕ್ಷ ನಾರಾಯಣ, ಕೇವಲ ಬಿಪಿ, ಶುಗರ್ ತಪಾಸಣೆ ಮಾಡಿ ಬಿಡುವುದಲ್ಲ. ಅವರ ದೇಹ ನ್ಯೂನತೆಗಳ ಕುರಿತಂತೆ ಉತ್ತಮ ವೈದ್ಯಕೀಯ ಸೌಲಭ್ಯವಿರುವ ಆಸ್ಪತ್ರೆಗಳಲ್ಲಿ ಸಂಪೂರ್ಣ ತಪಾಸಣೆ ನಡೆಸಿ ಚಿಕಿತ್ಸೆ ಅಗತ್ಯವಿದ್ದಲ್ಲಿ ಅದಕ್ಕೆ ಕ್ರಮ ಕೈಗೊಳ್ಳಬೇಕು ಎಂದರು.
ಒಳಚರಂಡಿ, ಶೌಚಾಲಯ, ರಸ್ತೆಗಳನ್ನು ಗುಡಿಸುವುದು ಸೇರಿದಂತೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಪೌರ ಕಾರ್ಮಿಕರು ಆರೋಗ್ಯ ಸಮಸ್ಯೆಯಿಂದಾಗಿ ಅವರ ಜೀವಿತಾವಧಿ ಸರಾಸರಿ 50 ವರ್ಷಗಳಿಗೇ ಸೀಮಿತಗೊಂಡಿರುವ ಹಿನ್ನೆಲೆಯಲ್ಲಿ ಅವರಿಗೂ ಆರೋಗ್ಯಯುತ ಬದುಕಿಗೆ ಪೂರಕವಾದ ಸೌಲಭ್ಯವನ್ನು ನಾವು ಒದಗಿಸಬೇಕಾಗಿದೆ. ಅದಕ್ಕೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.
ಪ್ರತಿಯೊಬ್ಬ ಪೌರ ಕಾರ್ಮಿಕರಿಗೂ ಅವರಿಗೆ ದೊರೆಯುವ ವೇತನದ ಮಾಹಿತಿ ಚೀಟಿ (ಪೇ ಸ್ಲಿಪ್)ಯನ್ನು ನೀಡಬೇಕು ಎಂದು ಆಯೋಗದ ಅಧ್ಯಕ್ಷ ನಾರಾಯಣ ಸ್ಪಷ್ಟಪಡಿಸಿದರು. 25 ವರ್ಷಗಳಿಂದ ಒಳಚರಂಡಿ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ತಮಗೆ ಖಾಯಂ ಮಾಡುವುದಾಗಿ ಹೇಳುತ್ತಿದ್ದರೂ ಇನ್ನೂ ಮಾಡಲಾಗುತ್ತಿಲ್ಲ ಎಂದು ಕೆಲ ಕಾರ್ಮಿಕರು ಸಭೆಯಲ್ಲಿ ಹೇಳಿಕೊಂಡಾಗ, ಈಗಾಗಲೇ ಕೆಲಸದಲ್ಲಿರುವವರನ್ನು ಖಾಯಗೊಳಿಸಲು ಸರಕಾರ ಆದೇಶ ನೀಡಿದೆ. ಅದರ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಆಯೋಗದ ಅಧ್ಯಕ್ಷ ನಾರಾಯಣ ತಿಳಿಸಿದರು.
ಜಿಲ್ಲೆಯಲ್ಲಿ 188 ಖಾಯಂ, 949 ಗುತ್ತಿಗೆ ಪೌರ ಕಾರ್ಮಿಕರು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ಹಾಗೂ ಇತರ ಒಂಭತ್ತು ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್‌ಗಳು ಸೇರಿದಂತೆ 188 ಮಂದಿ ಖಾಯಂ ಹಾಗೂ 949 ಮಂದಿ ಹೊರ ಗುತ್ತಿಗೆಯಲ್ಲಿ ಪೌರ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆಯಲ್ಲಿ 159 ಮಂದಿ ಖಾಯಂ ಹಾಗೂ 763 ಮಂದಿ ಹೊರಗುತ್ತಿಗೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಪುತ್ತೂರು ನಗರ ಸಭೆಯಲ್ಲಿ 18 ಮಂದಿ ಖಾಯಂ 12 ಮಂದಿ ಹೊರಗುತ್ತಿಗೆ, ಉಳ್ಳಾಲ ನಗರಸಭೆಯಲ್ಲಿ 2 ಮಂದಿ ಖಾಯಂ, 53 ಮಂದಿ ಹೊರಗುತ್ತಿಗೆ, ಬಂಟ್ವಾಳ ಪುರಸಬೆಯಲ್ಲಿ 3 ಮಂದಿ ಖಾಯಂ, 36 ಮಂದಿ ಹೊರಗುತ್ತಿಗೆ, ಮೂಡಬಿದ್ರೆ ಪುರಸಭೆಯಲ್ಲಿ ಒಬ್ಬರು ಖಾಯಂ, 30 ಮಂದಿ ಹೊರಗುತ್ತಿಗೆ, ಮುಲ್ಕಿ ಪಟ್ಟಣ ಪಂಚಾಯತ್‌ನಲ್ಲಿ 2 ಮಂದಿ ಖಾಯಂ, 13 ಮಂದಿ ಹೊರಗುತ್ತಿಗೆ, ಬೆಳ್ತಂಗಡಿ ಪ. ಪಂಚಾಯತ್‌ನಲ್ಲಿ 2 ಮಂದಿ ಖಾಯಂ, 12 ಮಂದಿ ಹೊರಗುತ್ತಿಗೆ, ಸುಳ್ಯ ಪ.ಪಂಚಾಯತ್‌ನಲ್ಲಿ ಒಬ್ಬರು ಖಾಯಂ, 23 ಮಂದಿ ಹೊರಗುತ್ತಿಗೆ, ಕೋಟೆಕಾರು ಪಟ್ಟಣ ಪಂಚಾಯತ್‌ನಲ್ಲಿ ಒಬ್ಬರು ಹೊರಗುತ್ತಿಗೆ, ವಿಟ್ಲ ಪಟ್ಟಣ ಪಂಚಾಯತ್‌ನಲ್ಲಿ 6 ಮಂದಿ ಹೊರ ಗುತ್ತಿಗೆಯಲ್ಲಿ ದುಡಿಯುತ್ತಿದ್ದಾರೆ ಎಂಬುದಾಗಿ ಅಧಿಕಾರಿಗಳು ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಐ. ಶ್ರೀವಿದ್ಯಾ, ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್, ಮನಪಾ ಆಯುಕ್ತ ಮುಹಮ್ಮದ್ ನಝೀರ್ ಉಪಸ್ಥಿತರಿದ್ದರು.
ಬ್ಯಾಂಕ್ ಖಾತೆ ಇಲ್ಲದೆ ವೇತನ ಪಾವತಿ: ಜಿಲ್ಲಾಧಿಕಾರಿ ಅಚ್ಚರಿ!
‘‘ಗುತ್ತಿಗೆ ಪೌರ ಕಾರ್ಮಿಕರಿಗೂ ಕಡ್ಡಾಯವಾಗಿ ಅವರ ವೇತನವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಬೇಕೆಂಬ ನಿಯಮವೇ ಇದೆ. ಬಹುತೇಕ ಜಿಲ್ಲೆಗಳಲ್ಲಿ ಇದನ್ನು ಪಾಲಿಸಲಾಗುತ್ತಿದೆ. ಆದರೆ ವಿದ್ಯಾವಂತರೇ ಹೆಚ್ಚಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂತಹ ವ್ಯವಸ್ಥೆ ಇನ್ನೂ ಆಗಿಲ್ಲ ಯಾಕೆ’’ಎಂದು ನೂತನ ಜಿಲ್ಲಾಧಿಕಾರಿ ಡಾ. ಜಗದೀಶ್ ಕೂಡಾ ಅಚ್ಚರಿ ವ್ಯಕ್ತಪಡಿಸಿದರು.
ತಕ್ಷಣ ಜಿಲ್ಲೆಯಲ್ಲಿರುವ ಎಲ್ಲಾ ಗುತ್ತಿಗೆ ಪೌರ ಕಾರ್ಮಿಕರಿಗೆ ಬ್ಯಾಂಕ್ ಖಾತೆಗಳನ್ನು ಮಾಡಿ ಅದರ ಮೂಲಕವೇ ಅವರಿಗೆ ವೇತನ ಪಾವತಿಯಾಗುವುದನು ಸಂಬಂಧಪಟ್ಟ ಸ್ಥಳೀಯಾಡಳಿತ ಸಂಸ್ಥೆಗಳ ಅಧಿಕಾರಿಗಳು ಖಾತರಿಪಡಿಸಬೇಕು. ಇಎಸ್‌ಐ, ಪಿಎಫ್ ಕಡಿತಗೊಳಿಸಿದ ಬಗ್ಗೆ ಮಾಹಿತಿಯನ್ನು ಸಂಬಂದಪಟ್ಟ ಕಾರ್ಮಿಕರಿಗೆ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಜಗದೀಶ್ ಹೇಳಿದರು.
1.48 ಕೋಟಿ ರೂ. ಪಿಎಫ್ ಖಾತೆಗೆ ಜಮೆ ಆಗಿಲ್ಲ?
ಗುತ್ತಿಗೆ ಪೌರ ಕಾರ್ಮಿಕರ ವೇತನದಿಂದ ಕಡಿತವಾಗುವ ಪಿಎಫ್ (ಭವಿಷ್ಯನಿಧಿ) ಹಣ ಸಮರ್ಪಕವಾಗಿ ಜಮೆಯಾಗುತ್ತಿದೆಯೇ ಎಂಬ ಬಗ್ಗೆ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ನಾರಾಯಣ ಅವರು ಪರಿಶೀಲನೆ ನಡೆಸುತ್ತಿರುವ ಸಂದರ್ಭ ಮಂಗಳೂರು ನಗರ ಪಾಲಿಕೆಯ ಪೌರ ಕಾರ್ಮಿಕರ ಪರವಾದ 1.48 ಕೋಟಿ ರೂ. ಪಿಎಫ್ ಹಣ 2012ರ ಎಪ್ರಿಲ್‌ನಿಂದ 2016ರ ಜನವರಿವರೆಗೆ ಬಾಕಿ ಇದೆ. ನೋಟೀಸು ನೀಡಲಾಗಿದೆ ಎಂದು ಪಿಎಫ್ ಅಧಿಕಾರಿ ಸಭೆಯಲ್ಲಿ ತಿಳಿಸಿದರು.
ಈ ಬಗ್ಗೆ ಅಧ್ಯಕ್ಷರು ಪ್ರಶ್ನಿಸಿದಾಗ, ಪಿಎಫ್ ಜಮಾ ಮಾಡುತ್ತಿರುವ ಬಗ್ಗೆ ಗುತ್ತಿಗೆದಾರರಿಂದ ರಶೀದಿಯನ್ನು ಪಡೆಯಲಾಗುತ್ತಿದೆ ಎಂದು ಮನಪಾ ಅಧಿಕಾರಿಗಳು ಮಾಹಿತಿ ನೀಡಿದರು. ಕಡಿತ ಮಾಡಿ ಜಮಾ ಮಾಡುತ್ತಿರುವ ಬಗ್ಗೆ ದಾಖಲೆ ಇರುವಾಗ ಬಾಕಿ ಹೇಗೆ ಎಂಬ ಬಗ್ಗೆ ಮಾಹಿತಿ ಒದಗಿಸುವಂತೆ ಜಿಲ್ಲಾಧಿಕಾರಿ ಡಾ. ಜಿಲ್ಲಾಧಿಕಾರಿ ತಿಳಿಸಿದರು.







