ವೇಟರ್ ಆಗಿ ಕೆಲಸ ಮಾಡುತ್ತಿರುವ ಒಬಾಮ ಪುತ್ರಿ!

ಅಮೆರಿಕ, ಆ.5: ಅಮೆರಿಕ ಅಧ್ಯಕ್ಷ ಒಬಾಮರ ಚಿಕ್ಕಮಗಳು ಹದಿನೈದು ವರ್ಷ ವಯಸ್ಸಿನ ಸಾಷಾ, ಮಾರ್ಥಸ್ ವೈನ್‌ಯಾರ್ಡ್‌ನ ನಾನ್‌ಸಿಸ್ ರೆಸ್ಟಾರೆಂಟನಲ್ಲಿ ವೇಟರ್ ಆಗಿ ಕೆಲಸ ಮಾಡುತ್ತಾ ರಜಾ ದಿನಗಳನ್ನು ಕಳೆಯುತ್ತಿದ್ದಾಳೆ. ಅತ್ತ ಅಧ್ಯಕ್ಷ ಒಬಾಮ, ಪತ್ನಿ ಮಿಶೆಲ್, ಹಿರಿಯಮಗಳು ಮಲೀಯಾ ರಜಾ ಪ್ರವಾಸ ಹೋಗಿದ್ದರೆ ಈ ಹದಿನೈದರ ಪೋರಿ ಸಾಮಾನ್ಯ ವೇಟರನ ಕೆಲಸದಲ್ಲಿ ತಲ್ಲೀನಳಾಗಿದ್ದಾಳೆ ಎಂದು ವರದಿ ತಿಳಿಸಿದೆ.
ಸಾಷಾ ಕೆಲಸ ಮಾಡುತ್ತಿರುವುದು ಸೀಫುಡ್ ಮತ್ತುಮಿಲ್ಕ್ ಶೇಕ್ ವಿತರಿಸುವ ಒಂದು ರೆಸ್ಟಾರೆಂಟ್‌ನಲ್ಲಿ. ಈ ರೀತಿ ಬೇಸಿಗೆ ರಜೆಯಲ್ಲಿ ಪಾಶ್ಚಾತ್ಯ ಜಗತ್ತಿನ ವಿದ್ಯಾರ್ಥಿಗಳು ಕೆಲಸ ಹುಡುಕುವುದು ಸಾಮಾನ್ಯ ಎನ್ನಲಾಗಿದೆ. ನೀಲಿ ಟೀಶರ್ಟ್, ಟೋಪಿ ಧರಿಸಿ ಗಮನಕೊಟ್ಟು ಕೆಲಸ ಮಾಡುವ ಸಾಷಾಳ ಫೋಟೊ ಇಷ್ಟರಲ್ಲೇ ಬಹಿರಂಗವಾಗಿದೆ. ಹಸಿದು ಬರುವ ಗಿರಾಕಿಗಳಿಗೆ ಬಹಳ ಆಸ್ಥೆಯಿಂದ ಸಾಷಾ ಆಹಾರ ಪೂರೈಸುತ್ತಿದ್ದಾಳೆ. ಒಬಾಮ ಪುತ್ರಿ ಈ ರೀತಿ ಕೆಲಸ ಮಾಡುತ್ತಿರುವಾಗ ಅವಳ ರಕ್ಷಣೆಯ ಹೊಣೆ ಹೊತ್ತಿರುವ ಆರು ಮಂದಿ ಸೀಕ್ರೆಟ್ ಸರ್ವೀಸ್ ಏಜೆಂಟ್‌ಗಳು ಸದಾ ಎಚ್ಚರದಿಂದಿದ್ದು ಕಾವಲು ನೀಡುತ್ತಿದ್ದಾರೆ. ಈ ರೆಸ್ಟಾರೆಂಟ್ ಮಾಲಕ ಒಬಾಮರ ಕುಟುಂಬ ಮಿತ್ರ ಎನ್ನಲಾಗಿದೆ. ಶನಿವಾರದವರೆಗೆ ಸಾಷಾ ಇಲ್ಲಿ ಕೆಲಸ ಮಾಡುತ್ತಾಳೆ. ನಂತರ ತಂದೆ ತಾಯಿ ಮತ್ತು ಸಹೋದರಿಯ ಜೊತೆ ರಜೆಕಾಲ ಕಳೆಯಲು ಹೊರಟು ಹೋಗುತ್ತಾಳೆ ಎಂದು ವರದಿ ತಿಳಿಸಿದೆ.
ಕಳೆದ ವೀಕೆಂಡ್‌ನಲ್ಲಿ ಸಾಷಾ ಮತ್ತು ಸಹೋದರಿ ಮಲೀಯಾ, ಶಿಕಾಗೊದ ವಾರ್ಷಿಕ ಲಾಲಪಲೂಸ್ ಮ್ಯೂಸಿಕ್ ಫೆಸ್ಟಿವಲ್‌ಗೆ ಹೋಗಿ ನೃತ್ಯಮಾಡಿದ್ದು ವರದಿಯಾಗಿತ್ತು.





