ಮಹಿಳಾ ಸ್ವರಕ್ಷಣೆಯ ನಿಟ್ಟಿನಲ್ಲಿ ಆ.8ರಂದು ಬೆಸೆಂಟ್ ಕಾಲೇಜಿನಲ್ಲಿ ವಿಶೇಷ ತರಬೇತಿ
ಮಂಗಳೂರು,ಆ.5: ಮಹಿಳಾ ಸ್ವರಕ್ಷಣೆಯ ನಿಟ್ಟಿನಲ್ಲಿ ಆ.8ರಂದು ನಗರದ ಬೆಸೆಂಟ್ ಕಾಲೇಜಿನಲ್ಲಿ ವಿಶೇಷ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತರಬೇತುದಾರ ಕಾರ್ತಿಕ್ ಎಸ್.ಕಟೀಲ್ ಹೇಳಿದರು.
ನಗರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಮಹಿಳೆಯರ ಮೇಲೆ ಒಂದಲ್ಲಾ ಒಂದು ರೀತಿಯ ದೌರ್ಜನ್ಯಗಳು ನಡೆಯುತ್ತಲೇ ಇವೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಹಿಳೆಯರಲ್ಲಿ ಸ್ವರಕ್ಷಣೆಯ ಕುರಿತು ಕೆಲವೊಂದು ಅಂಶಗಳನ್ನು ತಿಳಿಸುವ ಕಾರ್ಯಕ್ರಮ ಇದಾಗಿದೆ. ಈಗಾಗಲೇ ಹಲವು ಕಾಲೇಜುಗಳಲ್ಲಿ ಯಶಸ್ವಿಯಾಗಿ ತರಬೇತಿ ನೀಡಿದ್ದು, ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಬೆಸೆಂಟ್ ಕಾಲೇಜಿನಲ್ಲಿ ನಡಯುವ ಕಾರ್ಯಕ್ರಮದಲ್ಲಿ ಕೂಡ ಸುಮಾರು 400 ವಿದ್ಯಾರ್ಥಿನಿಯರು ಪಾಲ್ಗೊಳ್ಳಲಿದ್ದಾರೆ ಎಂದರು.
ಮಹಿಳೆಯರು ಕೆಲವೊಂದು ಸಂದರ್ಭ ದಾಳಿಯ ವೇಳೆ ಬಚಾವಾಗುವುದು ಹೇಗೆ ಎಂಬುದನ್ನು ಕೆಲವು ಸರಳ ತಂತ್ರಗಳ ಮೂಲಕ ಇಲ್ಲಿ ಕಲಿಸಿ ಕೊಡಲಾಗುತ್ತದೆ. ಇದುವರೆಗೆ ರಾಜ್ಯದ 327 ಸಂಸ್ಥೆಗಳ 85 ಸಾವಿರಕ್ಕೂ ಅಧಿಕ ವಿದ್ಯಾರ್ಥಿನಿಯರಿಗೆ ತರಬೇತಿ ನೀಡಲಾಗಿದೆ. ತನ್ನ ತಾಯಿ ಶೋಭಲತಾರೊಂದಿಗೆ ಈ ತರಬೇತಿ, ಜಾಗೃತಿಯನ್ನು ನಡೆಸುತ್ತಾ ಬಂದಿದ್ದೇನೆ. ಇದರಲ್ಲಿ ಕಿಕ್ಸ್, ಪಂಚ್, ಬ್ಲಾಕ್ಸ್ ಇರುವುದಿಲ್ಲ. ಈ ಜಾಗೃತಿ ಕಾರ್ಯಕ್ರಮವು ಮನಃಶಾಸ್ತ್ರ ಮತು ನಡೆದ ನೈಜ ಘಟನೆಗಳ ಆಧಾರದ ಮೇಲೆ ರೂಪಿಸಲಾಗಿದೆ ಎಂದವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಟೀಲು ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಪ್ರೊ.ಸುರೇಶ್ ಕಟೀಲ್, ಶೋಭಲತಾ ಉಪಸ್ಥಿತರಿದ್ದರು.







