ಮಂಜೇಶ್ವರ: ಕೆರೆಯಲ್ಲಿ ಮುಳುಗಿ ಯುವಕ ಮೃತ್ಯು

ಮಂಜೇಶ್ವರ, ಆ.5: ಮರಕಡಿಯಲೆಂದು ಕುಂಬ್ಡಾಜೆಗೆ ಬಂದ ಯುವಕನೋರ್ವ ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ಕುಂಬ್ಡಾಜೆ ಬಳಿಯ ಕುರುಮುಜ್ಜಿ ಕಟ್ಟೆ ಎಂಬಲ್ಲಿ ನಡೆದಿದೆ.
ಗಾಳಿಮುಖ ಬಳಿಯ ಸರೋಳಿ ಎಂಬಲ್ಲಿನ ಅಬ್ದುಲ್ಲ ಎಂಬವರ ಪುತ್ರ ಮುಹಮ್ಮದ್ ರಶೀದ್ (26) ಮೃತಪಟ್ಟ ದುರ್ದೈವಿ.
ಮೊಹಮ್ಮದ್ ರಶೀದ್ ಹಾಗೂ ಇತರ ಮೂರು ಮಂದಿ ಕುಂಬ್ಡಾಜೆ ಬಳಿಯ ಕುರುಮುಜ್ಜಿಕಟ್ಟೆ ಎಂಬಲ್ಲಿಗೆ ಮರ ಕಡಿಯುವ ಕೆಲಸಕ್ಕೆಂದು ಗುರುವಾರ ಬೆಳಗ್ಗೆ ಬಂದಿದ್ದರು. ಮಧ್ಯಾಹ್ನ ವೇಳೆಗೆ ಕೆಲಸ ಮುಗಿಸಿದ ಈ ನಾಲ್ಕು ಮಂದಿ ಸಮೀಪದ ಪಂಚಾಯತ್ ಕೆರೆಗೆ ಸ್ನಾನಕ್ಕೆಂದು ತೆರಳಿದ್ದರು. ಮೊದಲು ಕೆರೆಗಿಳಿದ ಮುಹಮ್ಮದ್ ರಶೀದ್ ಆಯತಪ್ಪಿ ನೀರಿನಲ್ಲಿ ಮುಳುಗಿದ್ದು, ಅಪಾಯದಿಂದ ಪಾರಾಗಲು ಸಾಧ್ಯವಾಗಿಲ್ಲ.
ಇವರ ಜೊತೆಗಿದ್ದ ಇತರ ಮೂವರಿಗೂ ಈಜಲು ತಿಳಿಯದ ಹಿನ್ನೆಲೆಯಲ್ಲಿ ನೀರಿನಲ್ಲಿ ಮುಳುಗಿದಾತನನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಅವರ ಬೊಬ್ಬೆಕೇಳಿ ತಲುಪಿದ ನಾಗರಿಕರು ಕೆರೆಗಿಳಿದು ಅರ್ಧಗಂಟೆ ಕಾಲ ಶೋಧ ನಡೆಸಿ ಮೊಹಮ್ಮದ್ ರಶೀದ್‌ರನ್ನು ಮೇಲಕ್ಕೆತ್ತಿದ್ದಾರೆ. ಬಳಿಕ ಕಾಸರಗೋಡಿನ ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರ ದಲ್ಲಿ ಮಹಜರು ನಡೆಸಲಾಗಿದೆ.
ಮೃತರು ತಂದೆ, ತಾಯಿ, ಸಹೋದರ-ಸಹೋದರಿಯರನ್ನು ಅಗಲಿದ್ದಾರೆ.







