17ತಿಂಗಳ ಮಗುವನ್ನು ಕೊಂದ ತಾಯಿ!

ಸೌತ್‌ಕೆರೊಲಿನಾ, ಆಗಸ್ಟ್5: ತಾಯಿಯೊಬ್ಬಳಿಗೆ ತನ್ನಮಗು ಜೀವಕ್ಕಿಂತಮೇಲು. ಆದರೆ ಸೌತ್ ಕೆರೊಲಿನಾದ ನಿರ್ದಯಿ ತಾಯಿಯೊಬ್ಬಳ ಕೃತ್ಯವನ್ನು ಅರಿತರೆ ಯಾರೂ ಗರಬಡಿದು ನಿಲ್ಲುವಂತಿದೆ. ಅಮೆರಿಕದ ಸೌತ್ ಕೆರೊಲಿನಾದಲ್ಲಿ ವಾಸವಿರುವ ಕಿಂಬರ್ಲಿ ಮಾರ್ಟಿನ್(23) ಎಂಬ ಮಹಿಳೆ ತನ್ನ ಹದಿನೇಳು ತಿಂಗಳ ಹೆಣ್ಣು ಮಗುವಿಗೆ ಮಿತಿಮೀರಿ ಉಪ್ಪು ತಿನ್ನಿಸಿದ್ದು ಅದರಿಂದಾಗಿ ಮಗು ಸಾವನ್ನಪ್ಪಿದೆ. ಪೊಲೀಸರು ಈ ಮಹಿಳೆಯನ್ನು ತನ್ನ ಮಗುವನ್ನು ಕೊಂದ ಆರೋಪದಲ್ಲಿ ಬಂಧಿಸಿ ಸೆರೆಮನೆಗೆ ಅಟ್ಟಿದ್ದಾರೆ ಎಂದು ವರದಿಯಾಗಿದೆ.
ಮಾಧ್ಯಮ ವರದಿಗಳ ಪ್ರಕಾರ ಕಿಂಬರ್ಲಿ ಮಾರ್ಟಿನ್ ತನ್ನ ಹದಿನೇಳು ತಿಂಗಳ ಮುಗ್ಧ ಹೆಣ್ಣುಮಗುವನ್ನು ಉದ್ದೇಶಪೂರ್ವಕವಾಗಿ ಅಗತ್ಯಕ್ಕಿಂತ ಹೆಚ್ಚು ಉಪ್ಪು ತಿನ್ನಿಸಿ ಕೊಂದು ಹಾಕಿದ್ದಾಳೆ. ಮಗುವಿನ ಶರೀರದಲ್ಲಿ ಉಪ್ಪಿನ ಕಾರಣದಿಂದ ಹೆಚ್ಚು ರಾಸಾಯನಿಕ ಪ್ರಕ್ರಿಯೆ ನಡೆದಿದ್ದುಆರೋಗ್ಯ ಕೆಟ್ಟು ಹೋಗಿತ್ತು. ಮಗುವನ್ನುಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದರೂ ಮಗುವನ್ನು ಉಳಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಕೆಲವು ದಿವಸಗಳ ವರೆಗೆ ವೈದ್ಯರು ಗರಿಷ್ಠ ಪ್ರಯತ್ನ ನಡೆಸಿದ್ದರೂ ಮಗು ಬದುಕಿ ಉಳಿಯಲಿಲ್ಲ ಎಂದು ವರದಿ ತಿಳಿಸಿದೆ.
ಮಗುವಿನ ದೇಹಾದ್ಯಂತ ಉಪ್ಪುಮಿಶ್ರಿತ ನೀರು ಹರಡಿತ್ತು. ಮಗುವಿನ ಸಾವಿಗೆ ಇದು ಕಾರಣವಾಗಿದೆ ಎಂದು ಮಗುವಿಗೆ ಚಿಕಿತ್ಸೆ ನೀಡಿದ ವೈದ್ಯರು ತಿಳಿಸಿದ್ದಾರೆ. ಮಗುವಿನ ತಾಯಿ ಕಿಂಬರ್ಲಿಯ ವಿರುದ್ಧ ಬಾಲಶೋಷಣೆ ಕಾನೂನು ಪ್ರಕಾರ ಮೊಕದ್ದಮೆ ದಾಖಲಿಸಿ ಪೊಲೀಸರು ಅವಳನ್ನು ಬಂಧಿಸಿದ್ದಾರೆ. ಅಮೆರಿಕದ ಕಾನೂನು ಪ್ರಕಾರ ಈ ಮಹಿಳೆ ಇಪ್ಪತ್ತು ವರ್ಷ ಜೈಲು ಶಿಕ್ಷೆಗೆ ತುತ್ತಾಗಬಹುದು ಎಂದು ವರದಿ ವಿವರಿಸಿದೆ.





