ವರದಕ್ಷಿಣೆ ಕಿರುಕುಳ ಪ್ರಕರಣ: ಆರೋಪಿಗೆ ನಿರೀಕ್ಷಣಾ ಜಾಮೀನು
ಪುತ್ತೂರು, ಆ.5: ತವರುಮನೆಯಿಂದ ಹೆಚ್ಚುವರಿ ವರದಕ್ಷಿಣೆ ತರುವಂತೆ ಪೀಡಿಸುತ್ತಾ ತನ್ನ ಪತ್ನಿಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿದ ಆರೋಪ ಎದುರಿಸುತ್ತಿದ್ದ ವ್ಯಕ್ತಿಗೆ ಪುತ್ತೂರಿನ 5ನೆ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಿದೆ.
ಪುತ್ತೂರು ತಾಲೂಕಿನ ರಾಮಕುಂಜ ಗ್ರಾಮದ ಹೊಸಮಜಲು ನಿವಾಸಿ ಖಲಂದರ್ ಶಾಫಿ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ ಪ್ರಕರಣದ ಆರೋಪಿ.
ಸುಳ್ಯ ತಾಲ್ಲೂಕಿನ ಅಲೆಟ್ಟಿ ಗ್ರಾಮದ ಪರಿವಾರಕಾನ ನಿವಾಸಿ ಮಹಿಳೆಯೋರ್ವರು ತನ್ನ ಪತಿ ಖಲಂದರ್ ಶಾಫಿ ವಿರುದ್ಧ ವರದಕ್ಷಿಣೆ ಕಿರುಕುಳ ದೂರು ನೀಡಿದ್ದರು. ಆಕೆಯ ದೂರಿನಂತೆ ಸುಳ್ಯ ಠಾಣೆಯ ಪೊಲೀಸರು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.
ಈ ನಡುವೆ ಆರೋಪಿಯು ವಕೀಲರ ಮೂಲಕ ನಿರೀಕ್ಷಣಾ ಜಾಮೀನು ಕೋರಿ ಪುತ್ತೂರಿನ 5ನೆ ಹೆಚ್ಚುವರಿ ಜಿಲ್ಲಾ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಪುತ್ತೂರಿನ ವಕೀಲರಾದ ಮಹೇಶ್ ಕಜೆ, ಕಿಶೋರ್ ಕೊಳತ್ತಾಯ ಮತ್ತು ಪ್ರಸಾದ್ ರೈ ಆರೋಪಿಯ ಪರವಾಗಿ ವಾದಿಸಿದ್ದರು.





