ಅವ್ಯವಹಾರ ಸಾಬೀತು: ಕುಂಬಳೆ ಸಹಕಾರಿ ಬ್ಯಾಂಕ್ ಕಾರ್ಯದರ್ಶಿ ಅಮಾನತು

ಮಂಜೇಶ್ವರ, ಆ.5: ಕರ್ತವ್ಯ ವೇಳೆ ಅವ್ಯವಹಾರ ನಡೆಸಿದ ಹಿನ್ನೆಲೆಯಲ್ಲಿ ಕುಂಬಳೆ ಸೇವಾ ಸಹಕಾರಿ ಬ್ಯಾಂಕ್‌ನ ಕಾರ್ಯದರ್ಶಿಯಾಗಿದ್ದ ಪುತ್ತಿಗೆ ನಿವಾಸಿ ಜಗದೀಶ್ ರೈ. ಪಿ.ಎ ರನ್ನು ಸೇವೆಯಿಂದ ವಜಾ ಮಾಡ ಲಾಗಿದೆಯೆಂದು ಬ್ಯಾಂಕ್‌ನ ಅಧ್ಯಕ್ಷ ಕೆ. ಶಂಕರ ಆಳ್ವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಗದೀಶ್ ರೈ ಅವ್ಯವಹಾರ ನಡೆಸಿ ಬ್ಯಾಂಕ್ ಹಾಗೂ ಗ್ರಾಹಕರಿಗೆ ವಂಚಿಸಿದ ಆರೋಪದಂತೆ ಅವರನ್ನು 2016 ಜನವರಿ 1ರಿಂದ 6 ತಿಂಗಳಿಗೆ ಅಮಾನತು ಮಾಡಲಾಗಿತ್ತು. ಅವರ ಮೇಲಿನ ಆರೋಪಗಳು ಸಾಬೀತುಗೊಂಡ ಹಿನ್ನೆಲೆಯಲ್ಲಿ ಅವರನ್ನು 2016 ಜುಲೈ 22ರಿಂದ ಸೇವೆಯಿಂದ ವಜಾಮಾಡಲಾಗಿದೆ. ಬ್ಯಾಂಕ್‌ನ ಡೊಮೆಸ್ಟಿಕ್ ಎನ್‌ಕ್ವಯರಿ ಕಮಿಟಿ ನಡೆಸಿದ ತನಿಖೆಯಲ್ಲಿ ಜಗದೀಶ ರೈ ಅವ್ಯವಹಾರ ನಡೆಸಿರುವುದು ತಿಳಿದುಬಂದಿದೆ. ವ್ಯಕ್ತಿಪಲ್ಲಟ ನಡೆಸಿ ಇನ್ನೊಬ್ಬರ ದಾಖಲೆ ಪತ್ರಗಳನ್ನು ಬ್ಯಾಂಕ್‌ನಲ್ಲಿ ಅಡವಿರಿಸಿ ಸಾಲ ಪಡೆದಿದ್ದು, ಬಳಿಕ ಅದನ್ನು ಮರು ಪಾವತಿಸದಿರುವುದು ತನಿಖೆಯಲ್ಲಿ ಪತ್ತೆಹಚ್ಚಲಾಗಿದೆ.
ಇದರಂತೆ ಜಗದೀಶ್ ರೈ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಕ್ರಮದ ಕುರಿತು ನಿಲುವು ವ್ಯಕ್ತಪಡಿಸಲು ಜಗದೀಶ್ ರೈಗೆ ಅವಕಾಶವಿದ್ದು ಅದರ ಬಳಿಕ ಬ್ಯಾಂಕ್‌ಗೆ ಉಂಟಾದ ನಷ್ಟವನ್ನು ವಸೂಲು ಮಾಡುವ ಕ್ರಮಕ್ಕೆ ಚಾಲನೆ ನೀಡಲಾಗುವುದೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ.
ಸೇವೆಯಿಂದ ವಜಾಗೊಳಿಸಲ್ಪಟ್ಟ ಹಿನ್ನೆಲೆಯಲ್ಲಿ ಜಗದೀಶ್ ರೈಯೊಂದಿಗೆ ಸಾರ್ವಜನಿಕರು ಯಾವುದೇ ವ್ಯವಹಾರ ನಡೆಸದಂತೆಯೂ, ವ್ಯವಹಾರ ಮಾಡಿದಲ್ಲಿ ಅದಕ್ಕೆ ಕುಂಬಳೆ ಸೇವಾ ಸಹಕಾರಿ ಬ್ಯಾಂಕ್ ಜವಾಬ್ದಾರಿಯಲ್ಲವೆಂದು ಬ್ಯಾಂಕ್‌ನ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.







