ಪಾಕಿಸ್ತಾನದಲ್ಲಿ ನನ್ನನ್ನು ಸರಿಯಾಗಿ ನಡೆಸಿಕೊಂಡಿಲ್ಲ: ರಾಜನಾಥ್

ಹೊಸದಿಲ್ಲಿ, ಆ.5: ಪಾಕಿಸ್ತಾನದಲ್ಲಿ ತನ್ನನ್ನು ಸರಿಯಾಗಿ ನಡೆಸಿಕೊಂಡಿಲ್ಲವೆಂದು ಗೃಹ ಸಚಿವ ರಾಜನಾಥ ಸಿಂಗ್ ಶುಕ್ರವಾರ ಸ್ಪಷ್ಟಪಡಿಸಿದ್ದಾರೆ. ಸಾರ್ಕ್ ಸಚಿವರ ಸಮ್ಮೇಳನದ ವೇಳೆ ಅಲ್ಲಿನ ತನ್ನ ಸೋದ್ಯೋಗಿ ಏರ್ಪಡಿಸಿದ್ದ ಭೋಜನ ಕೂಟದಲ್ಲೂ ತಾನು ಭಾಗವಹಿಸಿರಲ್ಲಿಲ್ಲವೆಂದು ಅವರು ಖಚಿತಪಡಿಸಿದ್ದಾರೆ.
ಪಾಕಿಸ್ತಾನದ ಆಂತರಿಕ ಸಚಿವ ಚೌಧರಿ ನಿಸಾರ್ ಆಲಿ ಖಾನ್ ಎಲ್ಲರನ್ನೂ ಭೋಜನ ಕೂಟಕ್ಕೆ ಆಹ್ವಾನಿಸಿದ್ದುದು ಸತ್ಯ. ಆದರೆ, ಬಳಿಕ ಅವರು ಕಾರಿನಲ್ಲಿ ತೆರಳಿದರು. ತಾನೂ ಹೊರಟೆ. ತಾನು ಭೋಜನ ಕೂಟಕ್ಕೆ ಹೋಗದಿರುವುದಕ್ಕೆ ಯಾವುದೇ ದೂರಗಾಲಿ, ವೈಮನಸ್ಸಾಗಲಿ ಕಾರಣವಲ್ಲ. ನಾನು ಊಟ ಮಾಡಲು ಪಾಕಿಸ್ತಾನಕ್ಕೆ ಹೋಗಿದ್ದಲ್ಲವೆಂದು ರಾಜನಾಥ್ ರಾಜ್ಯಸಭೆಗೆ ತಿಳಿಸಿದರು.
ಸಾರ್ಕ್ ಸಮ್ಮೇಳನಕ್ಕಾಗಿ ಪಾಕಿಸ್ತಾನಕ್ಕೆ 2 ದಿನಗಳ ಭೇಟಿ ನೀಡಿ ಹಿಂದಿರುಗಿದ ಮರುದಿನ ಅವರು ಈ ಹೇಳಿಕೆ ನೀಡಿದ್ದಾರೆ.
ತಾನು ಸಮ್ಮೇಳನದಲ್ಲಿ ಭಯೋತ್ಪಾದನೆಯ ಕುರಿತು ಭಾಷಣ ಮಾಡಿದ ವೇಳೆ, ತನ್ನೊಂದಿಗೆ ಹೋಗಿದ್ದ ದೂರದರ್ಶನ, ಪಿಟಿಐ ಹಾಗೂ ಎಎನ್‌ಐಗಳ ವರದಿಗಾರರು ಸೇರಿದಂತೆ ಭಾರತೀಯ ಮಾಧ್ಯಮಗಳಿಗೆ ಸಭಾಂಗಣದೊಳಗೆ ಪ್ರವೇಶ ನೀಡಿರಲಿಲ್ಲ ಎಂದು ರಾಜನಾಥ್ ತಿಳಿಸಿದರು.
ಆದರೆ, ತನ್ನ ಭಾಷಣದ ಪ್ರಸಾರವನ್ನು ಸ್ಥಗಿತಗೊಳಿಸಿರುವ ಕುರಿತಾದ ವರದಿಗಳ ಬಗ್ಗೆ ಹೇಳುವುದಾದರೆ, ಹಿಂದಿನ ಸಮ್ಮೇಳನದಲ್ಲಿ ಇಂತಹ ಔಪಚಾರಿಕ ನಿಯಮವನ್ನು ಅನುಸರಿಸಿದ್ದ ಕುರಿತು ತನಗೆ ತಿಳಿದಿಲ್ಲ. ಈ ವಿಷಯದಲ್ಲಿ ಪಾಕಿಸ್ತಾನ ಮಾಡಿರುವುದು ಸರಿಯೋ ತಪ್ಪೋ ಎಂಬ ಕುರಿತು ತಾನು ಪ್ರತಿಕ್ರಿಯೆ ನೀಡುವುದಿಲ್ಲ. ಅದಕ್ಕೆ ಪೂರ್ವೋದಾಹಾರಣೆ ಇದೆಯೇ ಎಂಬುದು ತನಗೆ ಗೊತ್ತಿಲ್ಲ. ಆ ಬಗ್ಗೆ ತಾನೇನೂ ಹೇಳಲಾರೆ. ಆದರೆ, ಅವರು ಸಾಧ್ಯವಾದುದನ್ನೆಲ್ಲ ಮಾಡಿದ್ದಾರೆ ಎಂದವರು ಟೀಕಿಸಿದರು.
ಯಾವುದೇ ಪಕ್ಷದವರಿರಲಿ, ಭಾರತದ ಎಲ್ಲ ಪ್ರಧಾನಿಗಳು ನೆರೆ ಹೊರೆಯ ಬಾಂಧವ್ಯ ಸುಧಾರಿಸಲು ತಮ್ಮಿಂದಾದ ಪ್ರಯತ್ನ ನಡೆಸಿದ್ದಾರೆ. ಆದರೆ, ಪಾಕಿಸ್ತಾನದ ಪ್ರತಿಕ್ರಿಯೆ ಧನಾತ್ಮಕವಾಗಿರಲಿಲ್ಲವೆಂದು ರಾಜನಾಥ್ ಹೇಳೀದರು.
ಭಾರತದ ಎಲ್ಲ ಪ್ರಧಾನಿಗಳೂ ಭಯೋತ್ಪಾದನೆಯ ವಿರುದ್ಧ ಹೋರಾಟಕ್ಕೆ ತಮ್ಮಿಂದಾದುದೆಲ್ಲವನ್ನೂ ಮಾಡಿದ್ದಾರೆಂದೂ ಅವರು ದನಿಗೂಡಿಸಿದರು.







