ಅಮೆರಿಕ ಪರಮಾಣು ಅಸ್ತ್ರಗಳನ್ನು ಯಾಕೆ ಬಳಸಬಾರದು? ಟ್ರಂಪ್ ಪ್ರಶ್ನೆ; ಅವರ ಮಾನಸಿಕ ಸ್ಥಿರತೆ ಬಗ್ಗೆ ಸಂಶಯ

ವಾಶಿಂಗ್ಟನ್, ಆ. 5: ಪರಮಾಣು ಅಸ್ತ್ರಗಳ ಬಳಕೆ ಬಗ್ಗೆ ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ನೀಡಿದ್ದಾರೆನ್ನಲಾದ ಹೇಳಿಕೆಗೆ ಅಮೆರಿಕದ ವಿದೇಶ ನೀತಿ ಪರಿಣತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದೇ ವೇಳೆ, ಟ್ರಂಪ್‌ರ ಮಾನಸಿಕ ಸ್ಥಿರತೆ ಬಗ್ಗೆ ಹಾಗೂ ಜಗತ್ತಿನ ಅತ್ಯಂತ ಶಕ್ತಿಶಾಲಿ ಸೇನೆಯ ನಿಯಂತ್ರಣವನ್ನು ಅವರಿಗೆ ವಹಿಸಬಹುದೇ ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಕಳವಳ ವ್ಯಕ್ತವಾಗುತ್ತಿದೆ.
ಟ್ರಂಪ್‌ರ ಯದ್ವಾತದ್ವ ಸಾರ್ವಜನಿಕ ಹೇಳಿಕೆಗಳು ಹಾಗೂ ಅವರ ಹೇಳಿಕೆಗಳಲ್ಲಿ ಸ್ಪಷ್ಟತೆ ಮತ್ತು ಸಾಮ್ಯತೆ ಇಲ್ಲದಿರುವ ಬಗ್ಗೆ ಸ್ವತಃ ರಿಪಬ್ಲಿಕನ್ ಪಕ್ಷದಲ್ಲೇ ಭಿನ್ನಾಭಿಪ್ರಾಯಗಳಿವೆ. ಒಂದು ವೇಳೆ, ಯಾವುದೇ ಕಾರಣಕ್ಕಾಗಿ ಟ್ರಂಪ್ ತನ್ನ ಅಭ್ಯರ್ಥಿತ್ವವನ್ನು ನಿರಾಕರಿಸಿದರೆ ಏನು ಮಾಡಬೇಕು ಎಂಬ ಬಗ್ಗೆ ಚರ್ಚೆ ಮಾಡುವಷ್ಟು ದೂರಕ್ಕೆ ರಿಪಬ್ಲಿಕನ್ ಪಕ್ಷದ ಕೆಲವು ನಾಯಕರು ಹೋಗಿದ್ದಾರೆ ಎನ್ನಲಾಗಿದೆ.
ಅಮೆರಿಕ ತನ್ನ ಪರಮಾಣು ಅಸ್ತ್ರಗಳನ್ನು ಯಾಕೆ ಬಳಸಬಾರದು ಎಂದು ಟ್ರಂಪ್ ಪದೇ ಪದೇ ವಿದೇಶ ನೀತಿ ಸಲಹಾಕಾರರೊಬ್ಬರನ್ನು ಪ್ರಶ್ನಿಸುವುದಕ್ಕೆ ಸಂಬಂಧಿಸಿದ ಸುದ್ದಿ ಮೊದಲು ಎಂಎಸ್‌ಎನ್‌ಬಿಸಿ ಟಿವಿ ಕಾರ್ಯಕ್ರಮದಲ್ಲಿ ಬುಧವಾರ ಪ್ರಸಾರವಾಯಿತು. ಇದು ರಿಪಬ್ಲಿಕನ್ ಅಭ್ಯರ್ಥಿಯ ಜವಾಬ್ದಾರಿ ಪ್ರಜ್ಞೆ ಬಗ್ಗೆ ಜನರಲ್ಲಿ ಇದ್ದ ಸಂಶಯದ ಬೆಂಕಿಗೆ ಇನ್ನಷ್ಟು ತುಪ್ಪ ಸುರಿಯಿತು.
‘‘ನಮ್ಮಲ್ಲಿ ಅವುಗಳು ಇರುವಾಗ ನಾವು ಅವುಗಳನ್ನು ಯಾಕೆ ಬಳಸಬಾರದು?’’ ಎಂಬುದಾಗಿ ಟ್ರಂಪ್ ಮೂರು ಬಾರಿ ಪ್ರಶ್ನಿಸಿದರು ಎಂದು ‘ಮಾರ್ನಿಂಗ್ ಜೋ’ ಕಾರ್ಯಕ್ರಮದ ನಿರೂಪಕ ಜೋ ಸ್ಕಾರ್‌ಬೋರೊ ಹೇಳುತ್ತಾರೆ. ಅವರು ಫ್ಲೋರಿಡದ ಮಾಜಿ ರಿಪಬ್ಲಿಕನ್ ಕಾಂಗ್ರೆಸ್ ಸದಸ್ಯರೂ ಹೌದು.
ಟ್ರಂಪ್ ಪ್ರಚಾರ ತಂಡ ಇದನ್ನು ನಿರಾಕರಿಸಿದೆಯಾದರೂ, ಜಾಗತಿಕ ವ್ಯವಹಾರಗಳ ಬಗ್ಗೆ ಟ್ರಂಪ್‌ರ ನಿರ್ಲಕ್ಷದ ಹಾಗೂ ಅಪ್ರಬುದ್ಧ ನಿಲುವನ್ನು ಅಲ್ಲಗಳೆಯಲು ಅದಕ್ಕೆ ಸಾಧ್ಯವಾಗಿಲ್ಲ.





