ಮಾರ್ಚ್‌ವರೆಗೆ ಶಿಕ್ಷಕರನ್ನು ವರ್ಗಾಯಿಸದಿರಿ: ತಾ.ಪಂ. ಉಪಾಧ್ಯಕ್ಷರ ಸೂಚನೆ

ಪುತ್ತೂರು, ಆ.5: ತಾಲೂಕಿನಲ್ಲಿ ಹೆಚ್ಚುವರಿ ಶಿಕ್ಷಕರನ್ನು ಗುರುತಿಸಿ ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಮಾಡುತ್ತಿರುವುದಕ್ಕೆ ಸಾಕಷ್ಟು ವಿರೋಧವಿದ್ದು, ಮಾರ್ಚ್ ತನಕ ಯಾವುದೇ ಶಿಕ್ಷಕರನ್ನು ವರ್ಗಾವಣೆ ಮಾಡದಿರಿ. ಮಕ್ಕಳಿಗೆ ತೊಂದರೆಯಾಗದಂತೆ ಎಚ್ಚರ ವಹಿಸಿ ಎಂದು ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಮುಕುಂದ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪುತ್ತೂರು ತಾಲೂಕು ಪಂಚಾಯತ್‌ನ ಮಾಸಿಕ ಕೆಡಿಪಿ ಸಬೆಯು ಶುಕ್ರವಾರ ತಾ.ಪಂ. ಸಭಾಂಗಣದಲ್ಲಿ ಅಧ್ಯಕ್ಷೆ ಭವಾನಿ ಚಿದಾನಂದರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿ ಪಾಲನಾ ವರದಿ ಮಂಡಿಸಿದ ಸಂದರ್ಭದಲ್ಲಿ ವಿಷಯ ಪ್ರಸ್ತಾಪಿಸಿದ ಮುಕುಂದ, ಹೆಚ್ಚುವರಿ ಶಿಕ್ಷಕರನ್ನು ಗುರುತಿಸಿ ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಮಾಡುವುದರ ಬಗ್ಗೆ ಹಲವು ದೂರುಗಳು ಬಂದಿದೆ. ನಡು ಸಮಯದಲ್ಲಿ ಇಂತಹ ಬದಲಾವಣೆ ಮಾಡಿದಲ್ಲಿ ಸರಕಾರಿ ಶಾಲೆಯ ಗುಣಮಟ್ಟದ ಮೇಲೆ ವ್ಯತಿರಿಕ್ತ ಪರಿಣಾಮವಾಗಲಿದೆ. ಈ ಹಿನ್ನಲೆಯಲ್ಲಿ ಮಾರ್ಚ್ ತನಕ ವರ್ಗಾವಣೆಯನ್ನು ತಡೆ ಹಿಡಿಯಬೇಕು ಎಂದು ಹೇಳಿದರು.
ಇದಕ್ಕೆ ಉತ್ತರಿಸಿದ ಶಿಕ್ಷಣ ಇಲಾಖೆ ದೈಹಿಕ ಶಿಕ್ಷಣ ಪರಿವೀಕ್ಷಕ ಅಧಿಕಾರಿ ಸುಂದರ ಗೌಡ, ವರ್ಗಾವಣೆಯನ್ನು ತಡೆಯಲು ಅಥವಾ ಬದಲಾವಣೆಗೊಳಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಅಧಿಕಾರವಿಲ್ಲ. ಶಿಕ್ಷಕರನ್ನು ಉಳಿಸಲು ಡಿಡಿಪಿಐ ಅಥವಾ ಇಲಾಖೆಗೆ ಮಾತ್ರ ಅವಕಾಶವಿದೆ. ಆದರೆ ಮಂಗಳೂರಿನಲ್ಲಿ ಗುರುತಿಸಿದ ಹೆಚ್ಚುವರಿ ಶಿಕ್ಷಕರ ಪೈಕಿ 26 ಮಂದಿಯನ್ನು ಪುತ್ತೂರಿಗೆ ಕಳುಹಿಸುವ ಸಾಧ್ಯತೆ ಇದೆ. ಇವರನ್ನು ಮರು ನಿಯೋಜನೆ ಮಾಡಿ, ಸಮಸ್ಯೆ ಸರಿದೂಗಿಸುವ ಪ್ರಯತ್ನ ಮಾಡಲಾಗುವುದು, ಇದರೊಂದಿಗೆ ಅತಿಥಿ ಶಿಕ್ಷಕರನ್ನು ನೇಮಿಸುವ ಪ್ರಸ್ತಾಪವೂ ಸರಕಾರದ ಮುಂದಿದ್ದು, ಅವರನ್ನು ನೇಮಿಸಿದಲ್ಲಿ ಶಿಕ್ಷಕರ ಕೊರತೆ ಪರಿಹಾರವಾಗಬಹುದು ಎಂದು ತಿಳಿಸಿದರು.
ಕೋಡಿಂಬಾಡಿ ಶಾಲಾ ವಿದ್ಯಾರ್ಥಿನಿಗೆ ಶಿಕ್ಷಕರು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ನಡೆದ 9 ದಿನಗಳ ಬಳಿಕ ಮಗುವಿನ ಪೋಷಕರು ದೂರು ನೀಡಿದ್ದಾರೆ. ಬಳಿಕ ಇಲಾಖೆಯ ವತಿಯಿಂದ ಪರಿಶೀಲನೆ ನಡೆಸಲಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗೆ ತೆರಳಿ ಎಸ್‌ಡಿಎಂಸಿ, ವಿದ್ಯಾರ್ಥಿನಿಯಲ್ಲಿ ವಿಚಾರಿಸಿದ್ದಾರೆ. ಮೇಲ್ನೋಟಕ್ಕೆ ಶಿಕ್ಷಕರು ಹಲ್ಲೆ ನಡೆಸಿದ ಯಾವುದೇ ಕುರುಹು ಕಂಡು ಬಂದಿರುವುದಿಲ್ಲ. ಆದರೆ ಮಗುವಿಗೆ ಮಾನಸಿಕ ಆಘಾತವಾಗಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಮಗುವಿಗೆ ಕೌನ್ಸಿಲಿಂಗ್ ನಡೆಸುವಂತೆ ತಿಳಿಸಲಾಗಿದೆ. ಪ್ರಸ್ತುತ ವಿದ್ಯಾರ್ಥಿನಿಯನ್ನು ಹಾರಾಡಿ ಶಾಲೆಗೆ ದಾಖಲಾತಿ ಮಾಡಲಾಗಿದೆ ಎಂದು ಸುಂದರ ಗೌಡ ಅವರು ಸಭೆಗೆ ಮಾಹಿತಿ ನೀಡಿದರು.
ನೆಲ್ಯಾಡಿ ನೇರಂಕಿ ಸಮೀಪ ವಿದ್ಯಾರ್ಥಿಗಳಿಗೆ ಬೇಕಾದ ಸಮಯದಲ್ಲಿ ಬಸ್ ಸಿಗುತ್ತಿಲ್ಲ. ಇತರ ಸಮಯದಲ್ಲಿ ಏಕಕಾಲಕ್ಕೆ ಎರಡು ಬಸ್ ಹೋಗುತ್ತಿವೆ. ಶಿಶಿಲದಿಂದ ಧರ್ಮಸ್ಥಳ, ನೆಲ್ಯಾಡಿ ನಡುವೆ 15 ನಿಮಿಷದ ಅಂತರದಲ್ಲಿ ಬಸ್ ಬಿಡುವಂತೆ ಮುಕುಂದ ಹೇಳಿದರು. ಈ ಕುರಿತು ಪರಿಶೀಲನೆ ನಡೆಸುವುದಾಗಿ ಕೆಎಸ್ಸಾರ್ಟಿಸಿ ಘಟಕದ ಅಧಿಕಾರಿ ತಿಳಿಸಿದರು.
ಪುತ್ತೂರು ತಹಶೀಲ್ದಾರ್ ಪುಟ್ಟ ಶೆಟ್ಟಿ ಅವರು ಮಾಹಿತಿ ನೀಡಿ, ತಾಲೂಕಿನಲ್ಲಿ 94ಸಿಯಲ್ಲಿ 7,200 ಅರ್ಜಿ ನೊಂದಾವಣೆಯಾಗಿದ್ದು ಈ ಪೈಕಿ 2,225 ಅರ್ಜಿಗಳನ್ನು ಮಂಜೂರುಗೊಳಿಸಲಾಗಿದೆ. ಪಂಚಾಯತ್ ವ್ಯಾಪ್ತಿಯಲ್ಲಿ ಆಧಾರ್ ನೋಂದಣಿಯನ್ನು ಮಾಡುವ ವಿಚಾರದಲ್ಲಿ ಜಿಲ್ಲಾಧಿಕಾರಿಗಳ ಅನುಮೋದನೆಗೆ ಕಳುಹಿಸಲಾಗಿದ್ದು, ಅನುಮತಿ ದೊರೆತ ಬಳಿಕ ಕ್ರಮ ಕೈಗೊಳ್ಳಲಾವುದು ಎಂದು ತಿಳಿಸಿದರು.
ರಾಷ್ಟ್ರೀಯ ಭದ್ರತಾ ಯೋಜನೆಯಲ್ಲಿ ಕಡಬ ಉಪವಿಭಾಗಕ್ಕೆ 10 ಲಕ್ಷ ರೂ. ಬಂದಿದೆ. ಅಂತ್ಯಸಂಸ್ಕಾರ ಯೋಜನೆಯಡಿ 50 ಸಾವಿರ ರೂ. ಬಂದಿದೆ. ಅದನ್ನು ಫಲಾನುಫವಿಗಳಿಗೆ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ಕಡಬ ವಿಶೇಷ ತಹಶೀಲ್ದಾರ್ ಬಿ. ನಿಂಗಯ್ಯ ಮಾಹಿತಿ ನೀಡಿದರು. 94 ಸಿಯಡಿ 4,561 ಅರ್ಜಿ ಬಂದಿದ್ದು, 1,243 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆಯಾಗಿದೆ ಎಂದರು.
ರಾಷ್ಟ್ರೀಯ ಭದ್ರತಾ ಯೋಜನೆಯಡಿ ಚೆಕ್ ವಿತರಣಾ ಕಾರ್ಯಕ್ರಮ ನಡೆದಿದ್ದು, ಇದಕ್ಕೆ ತಾಪಂ ಅಧ್ಯಕ್ಷೆಯನ್ನು ಆಹ್ವಾನಿಸಿಲ್ಲ. ಸರಕಾರಿ ಕಾರ್ಯಕ್ರಮಕ್ಕೆ ತಾಪಂ ಅಧ್ಯಕ್ಷರನ್ನು ಕರೆಯಬೇಕಲ್ಲವೇ ಎಂದು ತಾಪಂ ಅಧ್ಯಕ್ಷೆ ಭವಾನಿ ಚಿದಾನಂದ್ ತಹಶೀಲ್ದಾರ್‌ರಲ್ಲಿ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ತಹಶೀಲ್ದಾರ್ ಪುಟ್ಟು ಶೆಟ್ಟಿ ಅವಸರವಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ. ಶಾಸಕಿ ಚೆಕ್ ವಿಲೇವಾರಿ ಮಾಡಬೇಕೆಂದು ಹೇಳಿದ ಕೂಡಲೇ ಕಾರ್ಯಕ್ರಮ ಆಯೋಜಿಸಬೇಕಾಯಿತು. ಇದರ ನಡುವೆ ಕರೆಯಲು ತಮ್ಮನ್ನು ಕರೆಯಲು ಸಾಧ್ಯವಾಗಿಲ್ಲ. ಮುಂದೆ ಹೀಗಾಗದಂತೆ ಎಚ್ಚರ ವಹಿಸುತ್ತೇನೆ ಎಂದು ಹೇಳಿದರು. ತಾ.ಪಂ. ಉಪಾಧ್ಯಕ್ಷೆ ರಾಜೇಶ್ವರಿ ಉಪಸ್ಥಿತರಿದ್ದರು. ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಎಸ್. ಕಲಾಪ ನಿರ್ವಹಿಸಿ, ಸ್ವಾಗತಿಸಿ ವಂದಿಸಿದರು.







