ಒಲಿಂಪಿಕ್ಸ್ ಆರ್ಚರಿ: ಅಂತಿಮ 32ನೆ ಸುತ್ತಿಗೆ ಅತಾನುದಾಸ್ ತೇರ್ಗಡೆ

ರಿಯೋ ಡಿ ಜನೈರೊ, ಆ.5: ರಿಯೋ ಒಲಿಂಪಿಕ್ ಗೇಮ್ಸ್‌ನ ಪುರುಷರ ಆರ್ಚರಿ ವೈಯಕ್ತಿಕ ರ್ಯಾಂಕಿಂಗ್ ಸ್ಪರ್ಧೆಯಲ್ಲಿ 5ನೆ ಸ್ಥಾನ ಪಡೆಯುವ ಮೂಲಕ ಅತಾನು ದಾಸ್ ಅಂತಿಮ 32ನೆ ಸುತ್ತಿಗೆ ತೇರ್ಗಡೆಯಾಗಿದ್ದಾರೆ.
ಸೋಮವಾರ ನಡೆಯಲಿರುವ ಅಂತಿಮ 32ರ ಸುತ್ತಿನಲ್ಲಿ ಅತಾನುದಾಸ್ ಸ್ಪರ್ಧಿಸಲಿದ್ದಾರೆ.
ಶುಕ್ರವಾರ ಇಲ್ಲಿ ನಡೆದ 12 ಸುತ್ತಿನ ಪಂದ್ಯದಲ್ಲಿ ಒಟ್ಟು 683 ಅಂಕಗಳನ್ನು ಗಳಿಸಿರುವ ಅತಾನು ದಾಸ್ ಐದನೆ ಸ್ಥಾನ ಪಡೆದರು. ಈ ಸಾಧನೆಯ ಮೂಲಕ 72 ವರ್ಷ ಹಳೆಯ ಒಲಿಂಪಿಕ್ಸ್ ದಾಖಲೆಯನ್ನು ಮುರಿದರು. ಪಶ್ಚಿಮ ಬಂಗಾಳದ 24ರ ಹರೆಯದ ಅತಾನುದಾಸ್ 14ರ ಹರೆಯದಲ್ಲಿ ಬಿಲ್ಲುಗಾರಿಕೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. 2008ರಲ್ಲಿ ಟಾಟಾ ಆರ್ಚರಿ ಅಕಾಡಮಿಗೆ ಸೇರಿದ ಅವರು ಕೋಚ್ ಲಿಮ್ ಚಾ ವಾಂಗ್‌ರೊಂದಿಗೆ ತರಬೇತಿ ಪಡೆದಿದ್ದರು. ಕೋಲ್ಕತಾದಲ್ಲಿ ಭಾರತ್ ಪೆಟ್ರೋಲಿಯಂ ಲಿ.ನಲ್ಲಿ ಉದ್ಯೋಗದಲ್ಲಿರುವ ದಾಸ್ ಇದೇ ಮೊದಲ ಬಾರಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿದ್ದಾರೆ.
2008ರಲ್ಲಿ ಅಂತಾರಾಷ್ಟ್ರೀಯ ಆರ್ಚರಿಗೆ ಕಾಲಿಟ್ಟಿದ್ದ ಅತಾನುದಾಸ್ ಒಲಿಂಪಿಕ್ಸ್ ಟ್ರಯಲ್ಸ್‌ನಲ್ಲಿ ಜಯಂತ್ ತಾಲೂಕ್ದಾರ್ ಹಾಗೂ ಮಂಗಳ್ ಸಿಂಗ್ ಚಾಂಪಿಯಾರನ್ನು ಸೋಲಿಸಿ ಚೊಚ್ಚಲ ಒಲಿಂಪಿಕ್ ಗೇಮ್ಸ್‌ಗೆ ಅರ್ಹತೆ ಪಡೆದಿದ್ದರು.





