ಭಟ್ಕಳ: ನಾಪತ್ತೆಯಾದ ಮೀನುಗಾರನಿಗಾಗಿ ಮುಂದುವರಿದ ಶೋಧ ಕಾರ್ಯಾಚರಣೆ
.jpg)
ಭಟ್ಕಳ, ಆ.5: ಮೀನುಗಾರಿಕೆಗೆ ತೆರಳಿದ್ದ ಬೋಟ್ ಒಂದು ಸಮುದ್ರದಲ್ಲಿ ಮುಳುಗಡೆಯಾಗಿ ಓರ್ವ ಮೀನುಗಾರ ಕಾಣೆಯಾಗಿದ್ದು, ಶುಕ್ರವಾರ ಸಂಜೆಯವರೆಗೂ ನಾಪತ್ತೆಯಾದ ಮೀನುಗಾರನ ಕುರಿತು ಯಾವುದೇ ಮಾಹಿತಿ ಲಭಿಸಿಲ್ಲ. ಕಾರವಾರದ ಕೋಸ್ಟ್‌ಗಾರ್ಡ್ ಇಲಾಖೆಯ ಸುಮಾರು 200 ಹೆಚ್ಚು ಸಿಬ್ಬಂದಿ ಸಮುದ್ರದಲ್ಲಿ ಕಾಣೆಯಾಗಿರುವ ಮೀನುಗಾರ ಮಂಜುನಾರ್ಥ ಖಾರ್ವಿಯನ್ನು ಹಾಗೂ ಮುಳುಗಡೆಗೊಂಡ ದೋಣಿಯನ್ನು ಹುಡುಕುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ ಎಂದು ಕಮಾಂಡರ್ ಮುಖೇಶ್ ಶರ್ಮ ತಿಳಿಸಿದ್ದಾರೆ.
ಅವರು ಇಂದು ದೋಣಿ ದುರಂತದಲ್ಲಿ ಬದುಕುಳಿದು ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 7 ಮೀನುಗಾರರನ್ನು ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಕೋಸ್ಟ್‌ಗಾರ್ಡ್ ಸಿಬ್ಬಂದಿ ಹೆಲಿಕಾಪ್ಟರ್ ಹಾಗೂ ವಿಶೇಷ ದೋಣಿಯ ಮೂಲಕ ಸಮುದ್ರದಲ್ಲಿ ಹುಡುಕುವ ಪ್ರಯತ್ನದಲ್ಲಿದ್ದು ಇದುವರೆಗೂ ಯಾವುದೇ ಸುಳಿವು ಲಭ್ಯವಾಗಿಲ್ಲ ಎಂದರು. ಮೀನುಗಾರರ ಸುರಕ್ಷತೆ ಕುರಿತಂತೆ ಇಲಾಖೆ ಯಾವ ಕ್ರಮ ಕೈಗೊಂಡಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರತಿ ತಿಂಗಳು ಕನಿಷ್ಟ ಮಿನುಗಾರರೊಂದಿಗೆ ಎರಡು ಸಭೆಗಳನ್ನು ನಡೆಸಿ ಸುರಕ್ಷತೆಯ ಕುರಿತು ಜಾಗೃತಿ ಮೂಡಿಸುತ್ತಿದ್ದೇವೆ. ಮೊದಲು ನಮ್ಮ ಜೀವ ಮುಖ್ಯ. ಇದಕ್ಕಾಗಿ ಲೈಫ್‌ಬಾಯ್ ಇದ್ದು ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದು ನಾಲ್ಕು ಜನರ ಜೀವವನ್ನು ರಕ್ಷಿಸಬಲ್ಲದು. ಆದರೆ ಇತ್ತ ಕಡೆ ಹೆಚ್ಚಿನ ಗಮನ ನೀಡುವುದು ಅವಶ್ಯಕತೆಯಿದೆ. ನಾವು ಕೇವಲ ಹಣದ ಮುಖವನ್ನು ನೋಡದೆ ನಮ್ಮ ಜೀವನವನ್ನು ರಕ್ಷಿಸಿಕೊಳ್ಳುವುದಕ್ಕೆ ಮೊದಲು ಆದ್ಯತೆ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಖಾರ್ವಿ ಸಮಾಜದ ಮುಖಂಡರಾದ ವಸಂತ್ ಖಾರ್ವಿ, ಜಿ.ಪಂ.ಅಧ್ಯಕ್ಷೆ ಜಯಶ್ರೀ ಮೊಗೇರ್, ತಹಶೀಲ್ದಾರ್ ವಿ.ಎನ್.ಬಾಡ್ಕರ್ ಮುಂತಾದವರು ಇದ್ದರು.







