ಕಾಡಾನೆ ಹಾವಳಿ ತಡೆಗೆ ಆಗ್ರಹಿಸಿ ಧರಣಿ

ಮಡಿಕೇರಿ, ಆ.5: ಕಾಡಾನೆ ಹಾವಳಿಯನ್ನು ನಿಯಂತ್ರಿಸಬೇಕು ಮತ್ತು ಪುಂಡಾನೆಗಳನ್ನು ಕೊಡಗಿನಿಂದ ಸ್ಥಳಾಂತರಿಸಬೇಕೆಂದು ಆಗ್ರಹಿಸಿ ಸೋಮವಾರಪೇಟೆ ತಾಪಂ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಹಾಗೂ ವಿವಿಧ ಸಂಘಟನೆಗಳ ಪ್ರಮುಖರು ನಗರದ ಅರಣ್ಯ ಭವನದ ಎದುರು ಧರಣಿ ನಡೆಸಿದರು.
ಜಿಲ್ಲೆಯ ಗ್ರಾಮ ಪ್ರದೇಶಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ತಕ್ಷಣ ಸ್ಥಳಾಂತರಿಸಬೇಕು, ಕಾಡಾನೆ ಓಡಿಸುವ ಕಾರ್ಯಾಚರಣೆ ನೆಪದಲ್ಲಿ ಸರಕಾರದ ಹಣ ಪೋಲಾಗುವುದನ್ನು ತಡೆಯಬೇಕೆಂದು ಧರಣಿಕಾರರು ಒತ್ತಾಯಿಸಿದರು.
ಅರಣ್ಯಾಧಿಕಾರಿಗಳಿಗೆ ಧಿಕ್ಕಾರ ಕೂಗಿದ ಧರಣಿಕಾರರು ಅಹೋರಾತ್ರಿ ಧರಣಿ ಆರಂಭಿಸುವ ಎಚ್ಚರಿಕೆ ನೀಡಿದರು. ಕೊಡಗು ಜಿಲ್ಲೆಯ ಹಲವೆಡೆ ಕಾಡಾನೆಗಳ ಹಾವಳಿ ನಿರಂತರವಾಗಿದೆ. ಗ್ರಾಮಸ್ಥರಿಗೆ ಹಗಲೂ, ರಾತ್ರಿಯಲ್ಲಿಯೂ ಜೀವಭಯ ಉಂಟು ಮಾಡುತ್ತಿವೆ. ಶಾಲಾ ಮಕ್ಕಳು, ಕೂಲಿಕಾರ್ಮಿಕರು ಆತಂಕದಿಂದಲೇ ದಿನ ದೂಡುತ್ತಿದ್ದಾರೆ. ಕೊಡಗಿನ ಅನೇಕ ಕಡೆ ಕಾಡಾನೆ ದಾಳಿಯಿಂದ ಸಾವಿಗೀಡಾದವರ ಕುಟುಂಬಸ್ಥರಿಗೆ ನಿಗದಿತ 5 ಲಕ್ಷ ರೂ. ಪರಿಹಾರ ನೀಡದೆ ಸತಾಯಿಸಲಾಗುತ್ತಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಕಾಡಾನೆ ಓಡಿಸುವ ಕಾರ್ಯಾಚರಣೆಗಾಗಿ ಸಾಕಷ್ಟು ಹಣ ಪೋಲು ಮಾಡುತ್ತಿದ್ದು, ದಿನಕ್ಕೆ 25 ಸಾವಿರ ರೂ.ಹಣ ವಿನಿಯೋಗವಾಗುತ್ತಿದೆ ಎಂದು ಮಣಿ ಉತ್ತಪ್ಪ ಆರೋಪಿಸಿದರು. ಕಾಡಾನೆ ಓಡಿಸುವ ಕಾರ್ಯಾಚರಣೆಯಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ಹೀಗಾಗಿ ಕಾರ್ಯಾಚರಣೆ ಬದಲಿಗೆ ಕಾಡಾನೆಗಳನ್ನು ಸೆರೆ ಹಿಡಿದು ನಾಗರಹೊಳೆ, ಬನ್ನೇರುಘಟ್ಟ ಅರಣ್ಯ ಪ್ರದೇಶಕ್ಕೆ ಬಿಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿರುವ ಮಣಿ ಉತ್ತಪ್ಪ, ಕೊಡಗಿನಲ್ಲಿ ಕನಿಷ್ಠ 25-30 ಕಾಡಾನೆಗಳನ್ನು ಸ್ಥಳಾಂತರಿಸುವ ಅಗತ್ಯವಿದೆ ಎಂದರು.
ಕಾಡಾನೆಗಳ ಸ್ಥಳಾಂತರದಿಂದ ಮಾತ್ರ ಸ್ಥಳೀಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಾಧ್ಯ ಎಂದು ಹೇಳಿದ ಮಣಿಉತ್ತಪ್ಪ, ಈ ನಿಟ್ಟಿನಲ್ಲಿ ಸರಕಾರ ಗಂಭೀರ ಚಿಂತನೆ ಹರಿಸಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಚೆಟ್ಟಳ್ಳಿ ಬಿಜೆಪಿ ಸ್ಥಾನೀಯ ಸಮಿತಿ, ಜನಪರ ಹೋರಾಟ ಸಮಿತಿ, ವೀರಾಂಜನೇಯ ಯುವಕ ಸಂಘ, ಚೆಟ್ಟಳ್ಳಿ ಮತ್ತು ಕೆದಕಲ್ ವ್ಯಾಪ್ತಿಯ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಅಹೋರಾತ್ರಿ ಧರಣಿ ಮುಷ್ಕರದ ಎಚ್ಚರಿಕೆಯನ್ನು ಮಣಿಉತ್ತಪ್ಪ ಅವರು ನೀಡಿದರಾದರೂ ಅರಣ್ಯ ಅಧಿಕಾರಿಗಳ ಭರವಸೆ ಹಿನ್ನೆಲೆ ಈ ನಿರ್ಧಾರದಿಂದ ಹಿಂದೆ ಸರಿದರು.







